Advertisement

ಗಾಂಧಿವೃತ್ತದಲ್ಲಿ ಅಪಾಯಕಾರಿ ತಗ್ಗು ದಿನ್ನೆಗಳು

03:16 PM May 01, 2022 | Team Udayavani |

ಸಿರುಗುಪ್ಪ: ನಗರದ ಗಾಂಧಿ ವೃತ್ತದಿಂದ ಆದೋನಿಗೆ ಹೋಗುವ ರಸ್ತೆ ಆರಂಭದಲ್ಲಿಯೇ ಬಿದ್ದಿರುವ ತಗ್ಗುದಿನ್ನೆಗಳು ಪಾದಚಾರಿಗಳಿಗೆ ಅಪಾಯಕಾರಿಯಾಗಿದ್ದು, ಸರಕು ಹೊತ್ತ ದೊಡ್ಡದೊಡ್ಡ ಲಾರಿಗಳು ಮತ್ತು ಭತ್ತದ ಚೀಲ ತುಂಬಿದ ಟ್ರಾಕ್ಟರ್‌ಗಳು ಸಂಚಾರಕ್ಕೆ ಹರಸಾಹಸ ಪಡುತ್ತಿವೆ.

Advertisement

ಇಲ್ಲಿ ತಗ್ಗುದಿನ್ನೆಗಳು ನಿರ್ಮಾಣವಾಗಿ 6ತಿಂಗಳಾಗಿದ್ದರೂ ಇವುಗಳನ್ನು ಮುಚ್ಚುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗದ್ದರಿಂದ ಇಲ್ಲಿ ಸರಕುಹೊತ್ತ ವಾಹನಗಳು, ಭತ್ತದ ಚೀಲವನ್ನು ಹೊತ್ತೂಯ್ಯುವಾಗ ಪಲ್ಟಿಯಾಗಿ ಚೀಲಗಳು ಬಿದ್ದು, ಅನಾಹುತಗಳು ನಡೆಯುತ್ತಿವೆ. ಈ ತಗ್ಗುದಿನ್ನೆಗಳನ್ನು ಯಾರು ಮುಚ್ಚಬೇಕು ಎನ್ನುವ ಮುಸುಕಿನ ಗುದ್ದಾಟ ಲೋಕೋಪಯೋಗಿ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳ ನಡುವೆ ನಡೆಯುತ್ತಿದೆ.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಗರ ವ್ಯಾಪ್ತಿಯಲ್ಲಿ ನಾವು ಯಾವುದೇ ರಸ್ತೆ ರಿಪೇರಿ ಮಾಡುವಂತಿಲ್ಲ ಎನ್ನುವ ಆದೇಶವಿದೆ ಎಂದು ಹೇಳುತ್ತಾರೆ.

ಮತ್ತೊಂದು ಕಡೆ ನಗರದಲ್ಲಿ ಹಾದುಹೋಗುವ ಯಾವುದೇ ರಸ್ತೆಯಿರಲಿ ಅದನ್ನು ರಿಪೇರಿ ಮಾಡುವುದು, ತಗ್ಗುದಿನ್ನೆಗಳನ್ನು ಮುಚ್ಚುವುದು ಲೋಕೋಪಯೋಗಿ ಇಲಾಖೆಯ ಕೆಲಸವಾಗಿದೆ. ಆದ್ದರಿಂದ ಲೋಕೋಪಯೋಗಿ ಇಲಾಖೆಯವರು ತಗ್ಗುದಿನ್ನೆ ಮುಚ್ಚುವ ಕೆಲಸ ಮಾಡಬೇಕೆಂದು ನಗರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆ.

ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆ ನಡುವಿನ ತಿಕ್ಕಾಟದಿಂದಾಗಿ ತಗ್ಗುದಿನ್ನೆಗಳಲ್ಲಿ ಸಂಚರಿಸುವಾಗ ಸರಕು ತುಂಬಿದ ಲಾರಿ, ಟ್ರಾಕ್ಟರ್‌ಗಳು ಅಪಾಯಕ್ಕೀಡಾಗುತ್ತಿದ್ದು, ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅಪಾಯದ ಕರೆಗಂಟೆ ಬಾರಿಸುತ್ತಿದೆ.

Advertisement

ಇದನ್ನು ಅರ್ಥಮಾಡಿಕೊಂಡು ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಕೆಲಸವನ್ನು ಯಾರು ಮಾಡಬೇಕು ಎನ್ನುವುದರ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಂದು ತಗ್ಗುದಿನ್ನೆ ಮುಚ್ಚಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ನಗರದಲ್ಲಿ ಬಿದ್ದಿರುವ ತಗ್ಗುದಿನ್ನೆ ಮುಚ್ಚುವ ಕೆಲಸವನ್ನು ನಗರಸಭೆ ಅಧಿಕಾರಿಗಳು ಮಾಡಬೇಕಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಮುತ್ತಯ್ಯ ತಿಳಿಸಿದ್ದಾರೆ. ನಗರ ವ್ಯಾಪ್ತಿಯ ರಸ್ತೆಯ ಯಾವುದೇ ದುರಸ್ತಿ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಡಬೇಕು. ಆದರೆ ನಗರ ವ್ಯಾಪ್ತಿಯಲ್ಲಿ ನಗರಸಭೆಯಿಂದ ರಸ್ತೆ ದುರಸ್ತಿ ಮಾಡಬೇಕೆನ್ನುವ ಆದೇಶದ ಪ್ರತಿ ನಮಗೆ ದೊರೆತಿಲ್ಲ. ಆದ್ದರಿಂದ ದುರಸ್ತಿ ಕಾರ್ಯವನ್ನು ನಾವು ಮಾಡಲು ಸಾಧ್ಯವಿಲ್ಲ ಎಂದು ನಗರಸಭೆ ಎಇಇ ಗಂಗಾಧರ ತಿಳಿಸಿದ್ದಾರೆ.

ಪ್ರತಿನಿತ್ಯವೂ ಇದೇ ಮಾರ್ಗವಾಗಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಂಚರಿಸುತ್ತಿದ್ದರೂ ತಗ್ಗುದಿನ್ನೆ ಮುಚ್ಚಲು ಯಾವುದೇ ಅಧಿಕಾರಿ ಸಂಬಂಧಿಸಿದ ಇಲಾಖೆಗೆ ಸೂಚಿಸದೇ ನಿರ್ಲಕ್ಷ್ಯ ತೋರಿಸುತ್ತಿರುವುದು ಸಾರ್ವಜನಿಕರ ಚರ್ಚೆಗೆ ಕಾರಣವಾಗಿದೆ.

ಆರ್.ಬಸವರೆಡ್ಡಿ ಕರೂರು.

Advertisement

Udayavani is now on Telegram. Click here to join our channel and stay updated with the latest news.

Next