ಹಾವೇರಿ: ನೆರೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸವಣೂರು ತಾಲೂಕಿನ ಕುಣಿಮೆಳ್ಳಳ್ಳಿ ಗ್ರಾಮದಲ್ಲಿ ಅಧಿಕಾರಿಗಳು ಬಾಡಿಗೆ ಮನೆ ಕಲ್ಪಿಸಿದ್ದಾರೆ. ಪ್ರಸ್ತುತ ಮಳೆ ಹಾಗೂ ನೆರೆ ಕಡಿಮೆ ಯಾಗಿದ್ದು, ಶಾಲೆಗಳು ಸಹ ಪ್ರಾರಂಭ ವಾಗಿವೆ. ಹೀಗಾಗಿ, ಗ್ರಾಮದ ಒಂದು ಗುಂಪು ಶಾಲೆಯಲ್ಲಿನ ಪರಿಹಾರ ಕೇಂದ್ರ ಬಂದ್ ಮಾಡಿ ಮಕ್ಕಳ ಅಧ್ಯಯನಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸುತ್ತಿತ್ತು. ಗ್ರಾಮದ ಇನ್ನೊಂದು ಗುಂಪು ಪರಿಹಾರ ಕೇಂದ್ರ ಬಂದ್ ಮಾಡಬಾರದು.
ಸಂತ್ರಸ್ತರಿಗೆ ನೆಲೆ ಕಲ್ಪಿಸುವವರೆಗೂ ಅಲ್ಲಿಯೇ ಇರಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಡ ಹೇರಿತ್ತು. ಈ ಎರಡೂ ಗುಂಪುಗಳ ಒತ್ತಡಕ್ಕೆ ಸಿಲುಕಿದ ಅಧಿಕಾರಿಗಳು, ಕೊನೆಗೆ ಸಂತ್ರಸ್ತರಿಗೆ ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ಕುಣಿಮೆಳ್ಳಳ್ಳಿ ಗ್ರಾಮದ 15 ಕುಟುಂಬಗಳು ಸರ್ಕಾರಿ ಶಾಲೆಯಲ್ಲಿ ತೆರೆದ ಪರಿಹಾರ ಕೇಂದ್ರದಲ್ಲಿ ನೆಲೆಸಿದ್ದವು. ನೆರೆ ಇಳಿದ ಮೇಲೆ ಕೆಲವರು ಮನೆಗೆ ಹೋಗಿದ್ದರು. ಏಳು ಕುಟುಂಬಗಳ ಮನೆ ಸಂಪೂರ್ಣ ಬಿದ್ದಿತ್ತು.
ಸರ್ಕಾರ ಐದು ಸಾವಿರ ರೂ.ಗಳಂತೆ 10 ತಿಂಗಳು ಬಾಡಿಗೆ ಕೊಡುವುದಾಗಿ ಘೋಷಿಸಿದ್ದು, ಕುಣಿಮೆಳ್ಳಳ್ಳಿ ಪರಿಹಾರ ಕೇಂದ್ರದಲ್ಲಿದ್ದ 5 ಕುಟುಂಬಗಳನ್ನು ಬಾಡಿಗೆ ಮನೆಗೆ ಕಳುಹಿಸಲಾಗಿದೆ.
-ವಿಜಯಕುಮಾರ ಸಜ್ಜನರ, ಸವಣೂರು ತಹಶೀಲ್ದಾರ್