Advertisement
ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ಕುರಿತು ಜನರ ಆತಂಕ-ಮಾಹಿತಿ ಕೊರತೆ ಹಾಗೂ ಆ ದಿಕ್ಕಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮನವೊಲಿಸುವಲ್ಲಿ ನಮ್ಮ ಜನಪ್ರತಿನಿಧಿಗಳು-ಅಧಿಕಾರಿಗಳ ಸಮೂಹ ವಿಫಲಗೊಂಡಿರುವುದೇ ಈ ಎಲ್ಲ ಸಮಸ್ಯೆಗಳಿಗೆ ಮೂಲ ಎನ್ನುವುದು ಅನೇಕರ ವಾದ. ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತವು “ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶನದಂತೆ, ಕೇಂದ್ರ ಸರಕಾರ ಹೊರಡಿಸಿರುವ ಮಾರ್ಗಸೂಚಿಯಂತೆ, ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿದೆ. ಆ ಪ್ರಕಾರ ಕೋವಿಡ್ ಸೋಂಕಿತರ ಮೃತದೇಹವನ್ನು ದೂರದಿಂದ ವೀಕ್ಷಿಸಬಹುದಾಗಿದೆ. ಸ್ಪರ್ಶಿಸಲು ಅವಕಾಶವಿರುವುದಿಲ್ಲ. ಧಾರ್ಮಿಕ ಸಂಪ್ರದಾಯಗಳಿಗೆ ಅನುಗುಣವಾಗಿ ಗ್ರಂಥಗಳ ಪಠನ, ಪವಿತ್ರ ನೀರು ಸಿಂಪಡಣೆ ಇತ್ಯಾದಿಗಳನ್ನು ದೇಹವನ್ನು ಮುಟ್ಟದೆ ಮಾಡಲು ಅವಕಾಶವಿದೆ. ವೀಕ್ಷಿಸುವಾಗಲೂ ಪರಸ್ಪರ ಒಂದು ಮೀಟರ್ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧಾರಣೆ ಇತ್ಯಾದಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. “ಮೃತದೇಹವನ್ನು ಹೂಳುವುದು ಅಥವಾ ದಹನದ ಮೂಲಕ ಅಂತ್ಯಕ್ರಿಯೆ ಮಾಡಬಹುದು. ದಹಿಸಿದ ಬಳಿಕ ಬೂದಿಯಿಂದ ಯಾವುದೇ ವೈರಾಣು ಹರಡುವುದಿಲ್ಲ. ಅದ್ದರಿಂದ ಬೂದಿಯನ್ನು ಸಂಗ್ರಹಿಸಿ ಮುಂದಿನ ಧಾರ್ಮಿಕ ಆಚರಣೆಗಳನ್ನು ಮಾಡಬಹುದು’ ಎಂದು ಜಿಲ್ಲಾಡಳಿತವು ಪ್ರಕಟನೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.
ಈ ಬಗ್ಗೆ ಉದಯವಾಣಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ ರೋಗ ವಾಹಕ ಅಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ನವೀನ್‌ಚಂದ್ರ ಕುಲಾಲ್ ಅವರು, “ಮೃತದೇಹದ ದಹನ ಅಥವಾ ದಫನದಿಂದ ರೋಗ ಹರಡುವುದಿಲ್ಲ. ಈ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ. ದಹಿಸುವಾಗ 700ರಿಂದ 1,000 ಸೆಂಟಿಗ್ರೇಡ್ ಶಾಖ ಉತ್ಪತಿಯಾಗುತ್ತದೆ. ಆಗ ಯಾವುದೇ ವೈರಾಣು ಉಳಿಯಲಾರದು. ದಫನ ಮಾಡುವಾಗ ಸಾಕಷ್ಟು ಆಳದಲ್ಲಿ ಇಟ್ಟು ಅದರ ಮೇಲೆ ಕ್ರೀಮಿನಾಶಕಗಳನ್ನು ಸಿಂಪಡಿಸುವುದರಿಂದಲೂ ಯಾವುದೇ ಅಪಾಯವಿಲ್ಲ’ ಎಂದು ತಿಳಿಸಿದ್ದಾರೆ. “ಮೃತ ದೇಹವನ್ನು ವಿಶೇಷವಾದ ದಪ್ಪ ಪದರವುಳ್ಳ ಮತ್ತು ವಿಶೇಷ ರಾಸಾಯನಿಕ ಹಾಗೂ ಪ್ಲಾಸ್ಟಿಕ್‌ನಂತಹ ವಸ್ತುವಿನಿಂದ ತಯಾರಿಸಿದ, ಗಾಳಿ, ನೀರು, ಅನಿಲ ಹೊರಗಡೆ ಬಾರದಂತಹ ಬ್ಯಾಗ್‌ನಲ್ಲಿರಿಸಲಾಗುತ್ತದೆ. ಇದರ ಮೇಲೆ ಇನ್ನೊಂದು ಹಾಳೆಯನ್ನು ಸುತ್ತಿ ಪ್ಯಾಕ್ ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನು ಪಿಪಿಇ ಕಿಟ್ ಧರಿಸಿದ ವೈದ್ಯಕೀಯ ಸಿಬಂದಿ ನೆರವೇರಿಸುತ್ತಾರೆ. ಅದಕ್ಕೆಂದೇ ಸಿದ್ಧಪಡಿಸಿದ ಆ್ಯಂಬುಲೆನ್ಸ್‌ನಲ್ಲಿ ಚಿತಾಗಾರಕ್ಕೆ ತರುತ್ತಾರೆ. ರೋಗ ಪೀಡಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಅವರ ಗಂಟಲಿನಿಂದ, ಎದೆ ಯಿಂದ ದ್ರವ ಮಿಶ್ರಿತ ಗಾಳಿ ಇನ್ನೊಬ್ಬರ ಶ್ವಾಸಕೋಶ ಸೇರಿದಾಗ ಮಾತ್ರ ರೋಗ ಹರಡುತ್ತದೆ. ಮೃತ ವ್ಯಕ್ತಿಯಿಂದ ರೋಗ ಹರಡು ವುದಿಲ್ಲ’ ಡಾ| ನವೀನ್ ಕುಲಾಲ್ ವಿವರಿಸಿದ್ದಾರೆ.
Related Articles
“ಕೋವಿಡ್ ಸೋಂಕಿನಿಂದ ಮೃತಪಟ್ಟವರ ದೇಹವನ್ನು ದಹನ ಅಥವಾ ದಫನ ಮಾಡುವುದರಿಂದ ಸೋಂಕು ಹರಡುವುದಿಲ್ಲ ಎಂದು ಈಗಾಗಲೇ ಸರಕಾರದ ಮಾರ್ಗಸೂಚಿ ಹೇಳಿದೆ. ಇದನ್ನು ಜನರಿಗೆ ಮನವರಿಕೆ ಮಾಡುವಲ್ಲಿ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದಿಂದ ವೈಫಲ್ಯ ಆಗಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಸೇರಿಕೊಂಡು ತತ್‌ಕ್ಷಣ ಸಭೆ ನಡೆಸಿ ಸ್ಪಷ್ಟ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ’
– ಉಮಾನಾಥ ಕೋಟ್ಯಾನ್, ಮೂಲ್ಕಿ -ಮೂಡುಬಿದಿರೆ ಶಾಸಕರು
Advertisement