Advertisement

ನಿಟ್ಟೂರಿನಲ್ಲಿ ಅಧಿಕಾರಿಗಳ ಗ್ರಾಮ ವಾಸ್ತವ್ಯ

11:54 AM Dec 16, 2019 | |

ಬೀದರ: ಭಾಲ್ಕಿ ತಾಲೂಕಿನ ನಿಟ್ಟೂರ (ಬಿ) ಗ್ರಾಮದಲ್ಲಿ ರವಿವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ, ಸಿಬ್ಬಂದಿ ಹಾಗೂ ಕಲಾವಿದರಿಂದ ಗ್ರಾಮ ವಾಸ್ತವ್ಯ ನಡೆಯಿತು.

Advertisement

ಗ್ರಾಮ ವಾಸ್ತವ್ಯ ನಿಮಿತ್ತ ವಾರ್ತಾಧಿಕಾರಿಗಳು, ಕ್ಷೇತ್ರಪ್ರಚಾರದ ಕಲಾವಿದರ ತಂಡದೊಂದಿಗೆ ಗ್ರಾಮದ ವಿವಿಧ ಓಣಿಗಳಲ್ಲಿ ಸಂಚರಿಸಿದರು. ಈ ವೇಳೆ ಸರ್ಕಾರದ ಹಲವಾರು ಯೋಜನೆಗಳ ಬಗ್ಗೆ ಜನತೆಗೆ ಪರಿಚಯಿಸಿ, ಮನವರಿಕೆ ಮಾಡಲಾಯಿತು. ಶುಚಿತ್ವ, ಶೌಚಾಲಯ ಬಳಕೆ, ಆರೋಗ್ಯ, ನೀರಿನ ಮಿತಬಳಕೆಯಂತಹ ಹಲವು ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ವಾರ್ತಾಧಿಕಾರಿ ನೇತೃತ್ವದ ಗ್ರಾಮ ವಾಸ್ತವ್ಯದ ತಂಡವು ಮನವರಿಕೆ ಮಾಡಿದ ಬಳಿಕ, ನಾನು ವಾರದೊಳಗೆ ಶೌಚಾಲಯ ಕಟ್ಟಿಸಿಕೊಳ್ಳುವೆ ಎಂದು ವಯೋವೃದ್ಧೆ ಗುಂಡಮ್ಮ ವಚನ ನೀಡಿದಳು. ಕಾಲೋನಿಯೊಂದರಲ್ಲಿ ಸಂಚರಿಸುತ್ತಿದ್ದಾಗ ಶಾಲಾ ಮಕ್ಕಳು ಎದುರಾದರು. ಪಾಪುಬಾಪು ಪುಸ್ತಕ ನೀಡಿ ಶಾಲೆಗೆ ತಪ್ಪದೇ ಹೋಗಲು ಹೇಳಲಾಯಿತು. ಅಹಲ್ಯಾಬಾಯಿ ಎನ್ನುವ ವೃದ್ಧೆಯು ಮನವಿಯಂತೆ ಗ್ರಾಮ ವಾಸ್ತವ್ಯದ ತಂಡವು ಅವರ ಮನೆಗೆ ಭೇಟಿ ನೀಡಿತು. ಹೊರಸಿನ ಮೇಲೆ ಕುಳಿತು ಮಾಸಾಶನ ದಾಖಲಾತಿಗಳನ್ನು ಪರಿಶೀಲಿಸಿ, ಆಧಾರ್‌ ಜೋಡಣೆ ಮಾಡಿಸಿಕೊಳ್ಳಲು ತಿಳಿ ಹೇಳಲಾಯಿತು.

ಕಟ್ಟಿರುವ ಶೌಚಾಲಯವನ್ನು ತಪ್ಪದೇ ಬಳಸಲು ಅವರಿಗೆ ತಿಳಿಸಲಾಯಿತು. ರಸ್ತೆ ವಿಸ್ತರಣೆಯಲ್ಲಿ ನನ್ನ ಮನೆ ಹೋಗಲಿದೆ ಏನು ಮಾಡಬೇಕು ಎಂದು ದೃದ್ಧೆ ಸುಮಿತ್ರಾಬಾಯಿ ತಮ್ಮ ಅಳಲು ಬಿಚ್ಚಿಟ್ಟರು. ವಸತಿ ಯೋಜನೆಯಡಿ ಮನೆ ಸಿಗುತ್ತದೆ ಎಂದು ಧೈರ್ಯ ತುಂಬಿದಾಗ ಅವಳು ಧನ್ಯವಾದ ತಿಳಿಸಿದಳು.

ಗ್ರಾಮವಾಸ್ತವ್ಯದ ತಂಡದ ಎದುರು ಕ್ರಿಶ್ಚಿಯನ್‌ ಕಾಲೋನಿಯ ಮಕ್ಕಳು ಪಾಪುಬಾಪು ಪುಸ್ತಕದ ಕೆಲವು ಪುಟಗಳನ್ನು ಓದಿ ತೋರಿಸಿದರು. ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ, ಅಕ್ಷರ ದಾಸೋಹದಂತಹ ಯೋಜನೆಗಳಿವೆ. ನೀವು ತಪ್ಪದೇ ಶಾಲೆಗೆ ಹೋಗಬೇಕು ಎಂದು ತಿಳಿಸಲಾಯಿತು. ಈ ಹಿಂದೆ ನಾನು ಕೆಲಸ ಮಾಡಿ ಕೂಲಿ ಪಡೆದುಕೊಂಡಿದ್ದೇನೆ. ನರೇಗಾ ಯೋಜನೆ ನಮ್ಮಂತವರಿಗೆ ಅನುಕೂಲವಾಗಿದೆ ಎಂದು ತುಳಸಿರಾಮ ಗುಂಡಪ್ಪ ಇದೆ ವೇಳೆ ಹೇಳಿದರು.

Advertisement

ಬೀದಿನಾಟಕ-ಜಾಗೃತಿ ಗೀತೆ: ಬೀದಿನಾಟಕ ಮತ್ತು ಜಾನಪದ ಸಂಗೀತ ಕಲಾ ತಂಡದ ಕಲಾವಿದರು ಗ್ರಾಮದ ಮುಖ್ಯ ವೃತ್ತದಲ್ಲಿ ಬೀದಿನಾಟಕ ಮತ್ತು ಹಲವು ಜನಜಾಗೃತಿ ಹಾಡುಗಳನ್ನು ಹೇಳಿದರು.

ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಜನಜಾಗೃತಿ ಜಾಥಾ ನಡೆಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಕಟಿಸಿದ “ದಿನ ನೂರು ಸಾಧನೆ ನೂರಾರು’ ಎನ್ನುವ ಪುಸ್ತಕವನ್ನು ಗ್ರಾಮದ ಜನಪ್ರತಿನಿಧಿ ಗಳಿಗೆ ಮತ್ತು ಪಾಪು ಬಾಪು ಕಿರು ಹೊತ್ತಿಗೆಯನ್ನು ವಿತರಿಸಲಾಯಿತು. ಹೈಸ್ಕೂಲ್‌ನಲ್ಲಿ ವಾಸ್ತವ್ಯ: ಇಡೀ ದಿನದ ಕಾರ್ಯಕ್ರಮಗಳ ಬಳಿಕ ಗ್ರಾಮದ ಪ್ರೌಢಶಾಲೆಯಲ್ಲಿ ಸೇರಲಾಯಿತು. ವಾರ್ತಾಧಿ ಕಾರಿ ಗವಿಸಿದ್ದಪ್ಪ ಹೊಸಮನಿ, ಸಿಬ್ಬಂದಿ ವಿಜಯಕೃಷ್ಣ ಸೊಲಪುರ, ನರೇಶಕುಮಾರ ಹಾಗೂ ಬೀದಿನಾಟಕ ಮತ್ತು ಜಾನಪದ ಸಂಗೀತ ಕಲಾ ತಂಡಗಳ ಕಲಾವಿದರು ಊಟದ ಬಳಿಕ ವಾಸ್ತವ್ಯ ಮಾಡಿದರು.

ವಾರ್ತಾ ಇಲಾಖೆಯ ವಿನೂತನ ಕಾರ್ಯಕ್ರಮಗಳಲ್ಲಿ ಹೊಸದಾಗಿ ಈಗ ಗ್ರಾಮ ವಾಸ್ತವ್ಯ ವಿಶೇಷ ಕಾರ್ಯಕ್ರಮ ಸೇರ್ಪಡೆಯಾಗಿದೆ. ನಿಟ್ಟೂರ (ಬಿ)ನಲ್ಲಿ ಕೈಗೊಂಡ ಗ್ರಾಮ ವಾಸ್ತವ್ಯ ಕಾರ್ಯಕ್ರಮದಿಂದ ಗ್ರಾಮಸ್ಥರ ಮನೆ ಬಾಗಿಲಿಗೆ ಹೋಗಿ, ಸರ್ಕಾರದ ಯೋಜನೆಗಳ ಪರಿಚಯ ಮಾಡಲು ಅವಕಾಶ ಸಿಕ್ಕಂತಾಯಿತು ಎಂದು ವಾರ್ತಾಧಿ ಕಾರಿ ಗವಿಸಿದ್ದಪ್ಪ ಹೊಸಮನಿ ಇದೆ ವೇಳೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next