ಸಿಂಧನೂರು: ಬರೋಬ್ಬರಿ 1.23 ಕೋಟಿ ರೂ. ಅಂದಾಜು ವೆಚ್ಚದಲ್ಲಿ ತಾಲೂಕಿನ ಬೆಳಗುರ್ಕಿ ಗ್ರಾಮದಲ್ಲಿ ಕೈಗೆತ್ತಿಕೊಂಡಿರುವ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಹುಳುಕು ಗಮನಿಸಿದ ಅಧಿಕಾರಿಗಳು, ಸೋಮವಾರ ಗುತ್ತಿಗೆದಾರ ಜೆಕ್ಕರಾಯಗೆ ಛೀಮಾರಿ ಹಾಕಿದ ಘಟನೆ ನಡೆದಿದೆ.
ಮನೆ-ಮನೆಗೂ ಗಂಗೆ ಕಲ್ಪಿಸುವ ಯೋಜನೆಯನ್ನು ವಹಿಸಿಕೊಂಡಿರುವ ಗುತ್ತಿಗೆದಾರ ಜಕ್ಕರಾಯ ಅವರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗಲೂ ಆಗಮಿಸಿರಲಿಲ್ಲ. ಆದರೆ, ಅಧಿಕಾರಿಗಳೇ ದೂರವಾಣಿಯಲ್ಲಿ ಸಂಪರ್ಕಿಸಿ, ಇದುವರೆಗೆ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಕೂಲಿ ನೀಡದಂತೆ ತಾಕೀತು ಮಾಡಿದ್ದಾರೆ. ಜೊತೆಗೆ, ಬೇಕಾಬಿಟ್ಟಿ ಕೆಲಸ ಮಾಡಿದ್ದಕ್ಕೆ ಛೀಮಾರಿ ಹಾಕಿದ್ದಾರೆ.
ಅಳತೆ ನೋಡಿದ ಜೆಇ, ಎಇಇ
ಬೇಕಾಬಿಟ್ಟಿಯಾಗಿ ಪೈಪ್‌ಲೈನ್ ಹಾಕುತ್ತಿರುವ ದೂರು ವ್ಯಾಪಕವಾದ ಹಿನ್ನೆಲೆಯಲ್ಲಿ ಖುದ್ದು ಅಧಿಕಾರಿಗಳೇ ಪರಿಶೀಲನೆ ನಡೆಸಿದರು. ಟೇಪ್ ಹಿಡಿದು ಅಗೆದ ಆಳವನ್ನು ಪರಿಶೀಲಿಸಿದರು. ಈ ನಡುವೆ ಗ್ರಾಮದಲ್ಲಿ ಹಾಕಿರುವ ಎಲ್ಲ ಪೈಪ್‌ಗ್ಳನ್ನು ಕಿತ್ತು ಪುನರ್ ಹಾಕಬೇಕೆಂಬ ಒತ್ತಾಯವೂ ಕೇಳಿಬಂತು.
ಗ್ರಾಮೀಣ ನೀರು ಪೂರೈಕೆ ಇಲಾಖೆಯ ಎಇಇ ಅಶೋಕರೆಡ್ಡಿ, ಜೆಇ ಧನರಾಜ್ ಅವರು ಭೇಟಿ ನೀಡಿದ್ದರು. ಈ ವೇಳೆ ಗ್ರಾಮಸ್ಥರು ಹಾಜರಿದ್ದು, ಕಾಮಗಾರಿಯ ನೈಜ ಸ್ಥಿತಿ ವಿವರಿಸಿದರು. ಎಲ್ಲವನ್ನು ಸರಿಪಡಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸ್ಥಳೀಯರು ಒಪ್ಪಿಗೆ ಸೂಚಿಸಿದ್ದಾರೆ. ಉದಯವಾಣಿಯಲ್ಲಿ ಅ.23ರಂದು “ಬೇಕಾಬಿಟ್ಟಿ ಪೈಪ್‌ಲೈನ್‌ಗೆ ವ್ಯಾಪಕ ಆಕ್ರೋಶ’ ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.