ವಾಡಿ (ಚಿತ್ತಾಪುರ): ಸರಕಾರದ ಅನ್ನಭಾಗ್ಯ ಯೋಜನೆಯ ಬಡವರ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಿ ಮಾರಾಟ ದಂಧೆಯಲ್ಲಿ ತೊಡಗಿದ್ದ ವ್ಯಕ್ತಿಯೋರ್ವ ಪೊಲೀಸರ ಅತಿಥಿಯಾಗಿದ್ದಾನೆ. ನಾಲವಾರ ಗ್ರಾಮದ ಕಿರಾಣಿ ಅಂಗಡಿ ವ್ಯಾಪಾರಿ ಮಲ್ಲಯ್ಯಸ್ವಾಮಿ ಬಂಧಿತ ಆರೋಪಿ ಯಾಗಿದ್ದು, ಅಧಿಕಾರಿಗಳ ಈ ಮಿಂಚಿನ ದಾಳಿ ಪಡಿತರ ಅಕ್ಕಿ ದಂಧೆಕೋರರಲ್ಲಿ ನಡುಕ ಹುಟ್ಟಿಸಿದೆ.
ರಾವೂರಿನ ಕಿರಾಣಿ ಅಂಗಡಿಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿ ಮಾರುಕಟ್ಟೆಗೆ ಸಾಗಿಸುತ್ತಿದ್ದ ವೇಳೆ ಪಡಿತರ ಅಕಿ ಪತ್ತೆಯಾದ ಬಳಿಕ ಆಹಾರ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ದಾಳಿ ಮುಂದುವರೆದಿದ್ದು, ಖಚಿತ ಮಾಹಿತಿ ಮೇರೆಗೆ ಸೋಮವಾರ ಮದ್ಯಾಹ್ನ ನಾಲವಾರ ಗ್ರಾಮದ ಮಲ್ಲಯ್ಯಸ್ವಾಮಿ ಎಂಬುವವರ ಕಿರಾಣಿ ಅಂಗಡಿ ಮೇಲೆ ಮತ್ತೊಂದು ದಾಳಿ ನಡೆದಿದೆ.
ಚಿತ್ತಾಪುರ ತಾಲೂಕು ಆಹಾರ ಇಲಾಖೆಯ ಶಿರಸ್ತೆದಾರ ಚನ್ನಮಲ್ಲಪ್ಪ ಹೂನಳ್ಳಿ, ವಾಡಿ ಠಾಣೆಯ ಪಿಎಸ್‌ಐ ವಿಜಯಕುಮಾರ ಭಾವಗಿ ಮತ್ತು ನಾಲವಾರ ಕಂದಾಯ ಅಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಒಟ್ಟು 1.4 ಲಕ್ಷ ರೂ. ಮೌಲ್ಯದ 40 ಕ್ವಿಂಟಲ್ ಅನ್ನಭಾಗ್ಯದ ಅಕ್ಕಿ ಜಪ್ತಿಮಾಡಿಕೊಂಡಿದ್ದಾರೆ.
ಆರೋಪಿ ಮಲ್ಲಯ್ಯ ರೇವಣಸಿದ್ದಯ್ಯಸ್ವಾಮಿಯನ್ನು ಬಂಧಿಸಿ ವಶಪಡಿಸಿಕೊಳ್ಳಲಾದ ನೂರಾರು ಅಕ್ಕಿ ಚೀಲಗಳನ್ನು ಟ್ರ್ಯಾಕ್ಟರ್ ಮತ್ತು ಇತರ ಗೂಡ್ಸ್ ವಾಹನಗಳಲ್ಲಿ ತುಂಬಿ ಠಾಣೆಗೆ ತರಲಾಗಿದೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.