Advertisement

ಬೋಳಣಿಗೆ ಅಧಿಕಾರಿಗಳ ದೌಡು: ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ

09:35 AM Oct 19, 2021 | Team Udayavani |

ಆಳಂದ: ವಾಂತಿ ಭೇದಿ ಹರಡಿದ ಪ್ರಕರಣಕ್ಕೆ ಸಂಬಂಧಿತ ಮಹಿಳೆಯೊಬ್ಬಳು ಮೃತಪಟ್ಟ ಹಿನ್ನೆಲೆಯಲ್ಲಿ ಬೋಳಣಿ ಗ್ರಾಮಕ್ಕೆ ಸೋಮವಾರ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

Advertisement

ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ, ತಾಪಂ ಇಒ ನಾಗಮೂರ್ತಿ ಕೆ. ಶೀಲವಂತ, ಆರೋಗ್ಯಾಧಿಕಾರಿ ಸುಶೀಲಕುಮಾರ ಅಂಬರೆ, ಕಡಗಂಚಿ ವೈದ್ಯಾಧಿಕಾರಿ ರಮೇಶ ಪಾಟೀಲ, ಹಳ್ಳಿಸಲಗರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ ಪೂಜಾರಿ ಅವರನ್ನೊಳಗೊಂಡ ತಂಡ ಭೇಟಿ ನೀಡಿ ಸೂಕ್ತ ಕ್ರಮದ ಭರವಸೆ ನೀಡಿತು.

ತಾತ್ಕಾಲಿಕವಾಗಿ ಕುಡಿಯವ ನೀರಿಗೆ ಟ್ಯಾಂಕರ್‌ ಮೂಲಕ ನೀರು ಒದಗಿಸಬೇಕು. ಕುಡಿಯುವ ನೀರಿನ ಶುದ್ಧ ಘಟಕ ತೆರೆಯಲು ಶಿಫಾರಸು ಮಾಡಬೇಕು ಎಂದು ತಹಶೀಲ್ದಾರರು ಅಧಿಕಾರಿಗಳಿಗೆ ಸೂಚಿಸಿದರು.

ಮೃತ ಮಹಿಳೆ ಮಲ್ಲಮ್ಮ ಮಹಾಂತಪ್ಪ ಪೂಜಾರಿ ಕುಟುಂಬಕ್ಕೆ ಅಧಿಕಾರಿಗಳು ಭೇಟಿ ನೀಡಿ ಸಾಂತ್ವನ ಹೇಳಿದರು. ಅಲ್ಲದೆ ಸರ್ಕಾರದ ಸಹಾಯಧನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ತಾಪಂ ಇಒ ನಾಗಮೂರ್ತಿ ಕೆ. ಶೀಲವಂತ ಮಾತನಾಡಿ, ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೊಡಲಹಂಗರಗಾ ಬೋಳಣಿ ಸಮೀಪದ ನೀರು ಪೂರೈಕೆಯ ಕೊಳವೆ ಬಾವಿ ಹತ್ತಿರ ಇರುವ ಕೊಳವೆ ಬಾವಿಗೆ ಕಲುಷಿತ ನೀರು ಸೇರಿದ್ದು, ಸರಿಪಡಿಸುವಂತೆ ಅಧಿಕಾರಿಗಳು ಸೂಚಿಸಲಾಗಿದೆ ಎಂದರು.

Advertisement

ಬಳಿಕ ಆರೋಗ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿದ ಅಧಿಕಾರಿಗಳು ರೋಗಿಗಳಿಗೆ ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಳ್ಳುವಂತೆ ವೈದ್ಯರಿಗೆ ಸಲಹೆ ನೀಡಿದರು. ಹೆಚ್ಚು ರೋಗಿಗಳು ಬಂದರೆ ಶಾಲೆ ಕೋಣೆಗಳನ್ನು ಬಳಸಿ ಚಿಕಿತ್ಸೆ ನೀಡಬೇಕು ಎಂದು ತಾಪಂ ಇಒ ಸೂಚಿಸಿದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಚಂದ್ರಮೌಳಿ ಅವರಿಗೆ ಇನ್ನೊಂದು ಕೊಳವೆ ಬಾವಿ ತೋಡಿ ನೀರು ಪೂರೈಕೆ ಮಾಡಬೇಕು ಎಂದು ಸೂಚನೆ ನೀಡದರು. ಮಳೆಗಾಲದಲ್ಲಿ ನೀರು ಕಾಯಿಸಿ ಆರಿಸಿ ಕುಡಿಯಲು ಜನರಿಗೆ ಸಲಹೆ ನೀಡಿದರು.

ಗ್ರಾಪಂ ಸದಸ್ಯ ಶ್ರೀಶೈಲ ಬಿರಾದಾರ, ಗ್ರಾಮದ ಗುರುಬಸಪ್ಪ ಭೂತೆ, ಜಗನ್ನಾಥ ಉಜಳಂಬೆ, ಮಲ್ಲಿಕಾರ್ಜುನ ಬೋಳಣಿ ಮತ್ತಿತರರು ಉಪಸ್ಥಿತರಿದ್ದರು. ಸೋಮವಾರ ಹೊಸದಾಗಿ ವಾಂತಿ ಭೇದಿ ಪ್ರಕರಣ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next