ಜೇವರ್ಗಿ: ಪೌರ ಕಾರ್ಮಿಕರನ್ನು ಕಾಯಂಗೊಳಿಸುವಂತೆ ಹಾಗೂ ಬಾಕಿ ವೇತನ ನೀಡುವಂತೆ ಆಗ್ರಹಿಸಿ ಪುರಸಭೆ ಕಚೇರಿ ಎದುರು ತಾಲೂಕು ಪೌರಕಾರ್ಮಿಕರ ಸಂಘ ನಡೆಸುತ್ತಿದ್ದ ಧರಣಿ ಅಧಿಕಾರಿಗಳ ಭರವಸೆ ಮೇರೆಗೆ ಶುಕ್ರವಾರ ಅಂತ್ಯಗೊಳಿಸಲಾಯಿತು.
ಧರಣಿ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಬಾಬುರಾವ್ ವಿಭೂತೆ ಭೇಟಿ ನೀಡಿ ಧರಣಿ ನಿರತರೊಡನೆ ಮಾತುಕತೆ ನಡೆಸಿ ಸಮಸ್ಯೆ ಆಲಿಸಿದರು. ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಹೇಶಕುಮಾರ ರಾಠೊಡ ಮಾತನಾಡಿ, ಕಳೆದ 30 ವರ್ಷಗಳಿಂದ ಸ್ಥಳೀಯ ಪೌರಕಾರ್ಮಿಕರು ನಿರಂತರವಾಗಿ
ಪಟ್ಟಣದಲ್ಲಿ ಸ್ವತ್ಛತೆ ಕಾರ್ಯದಲ್ಲಿ ತೊಡಗುತ್ತಾ ಬಂದಿದ್ದಾರೆ.
ಅಧಿಕಾರಿಗಳು ಕೊಡುವ ಪುಡಿಗಾಸಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಕಳೆದ ಎರಡು ವರ್ಷಗಳ ವೇತನ ನೀಡಬೇಕು, 32 ಜನ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು ಹಾಗೂ ಹರವಾಳ, ಮಳ್ಳಿ, ಸೊನ್ನ, ನರಿಬೋಳ, ನೆಲೋಗಿ, ಹಂಗರಗಿ, ಕೋಳಕೂರ, ಮಂದೇವಾಲ, ಗುಡೂರ ಸೇರಿದಂತೆ ಮತ್ತೀತರ ಗ್ರಾಪಂಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಮುಖ್ಯಾಧಿಕಾರಿ ಬಾಬುರಾವ್ ವಿಭೂತೆ ಮಾತನಾಡಿ, ಶೀಘ್ರವೇ ಪೌರಕಾರ್ಮಿಕರ ಬಾಕಿ ವೇತನ ನೀಡಲು ಹಾಗೂ ಕಾಯಂಗೊಳಿಸುವ ನಿಟ್ಟಿನಲ್ಲಿ ಮೇಲಾ ಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಆದ್ದರಿಂದ ಧರಣಿ ಕೈಬಿಡಿ ಎಂದು ಮನವಿ ಮಾಡಿದರು. ನಂತರ ಅಧಿಕಾರಿಗಳ
ಭರವಸೆ ಮೇರೆಗೆ ಧರಣಿ ಅಂತ್ಯಗೊಳಿಸಲಾಯಿತು.
ಪುರಸಭೆ ಸದಸ್ಯ ಮರೆಪ್ಪ ಸರಡಗಿ, ವೆಂಕಯ್ಯ ಗುತ್ತೇದಾರ, ಎಐಟಿಯುಸಿ ಜಿಲ್ಲಾಧ್ಯಕ್ಷ ಪ್ರಭುದೇವ ಯಳಸಂಗಿ, ಜಿಲ್ಲಾಕಾರ್ಯದರ್ಶಿ ಎಚ್.ಎಸ್.ಪತಕಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಮಲ್ಲಿಕಾರ್ಜುನ ದೊಡ್ಮನಿ, ಫತ್ರು ಪಟೇಲ, ಈರಣ್ಣ ಏವೂರ, ಚಂದ್ರಕಲಾ ಹಳ್ಳದಕೇರಿ, ಮಡಿವಾಳಪ್ಪ ದೇವರಮನಿ, ಕಾಳವ್ವ ಮೇಲಿನಮನಿ, ರಾಯಪ್ಪ ಹಳ್ಳದಕೇರಿ, ಕುಮಾರ ರಾಠೊಡ ಹಾಗೂ ಇನ್ನಿತರ ಪೌರಕಾರ್ಮಿಕರು ಇದ್ದರು.