ಕನಕಪುರ: ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರ ನೀಡುವಂತೆ ಆದಿವಾಸಿಗಳು ನಡೆಸುತ್ತಿರುವ ಧರಣಿ 70ನೇ ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಸ್ಥಳೀಯ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಆದಿವಾಸಿಗಳ ವಿಶೇಷ ಗ್ರಾಮಸಭೆ ನಡೆಸಿ ಫಲಾನುಭವಿಗಳ ದಾಖಲಾತಿ ಕಲೆ ಹಾಕಿದರು. ತಾಲೂಕಿನ ಮರಳವಾಡಿ ಹೋಬಳಿ ಯಲಚವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಬುಡಗಯ್ಯನ ದೊಡ್ಡಿಯ 43 ಆದಿವಾಸಿ ಕುಟುಂಬಗಳು ಕಳೆದ 70 ದಿನಗಳಿಂದ ಹಕ್ಕುಪತ್ರ ನೀಡುವಂತೆ ನಿರಂತರವಾಗಿ ಅರಣ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.
ಪ್ರತಿಭಟನೆ ಆರಂಭಿಸುತ್ತಿದ್ದಂತೆ ಜಿಲ್ಲಾ ಉಪವಿಭಾಗಾಧಿಕಾರಿ ದಾಕ್ಷಾಯಿಣಿ ಸ್ಥಳಕ್ಕೆ ಭೇಟಿ ನೀಡಿ ಹಿಂದೆ ಇದ್ದ ತಹಶೀಲ್ದಾರ್ ಯೋಗಾನಂದ್ ಹಾಗೂ ಅರಣ್ಯ ಇಲಾಖೆಯ ವಲಯಾ ಅರಣ್ಯಾಧಿಕಾರಿ ಮನ್ಸೂರ್‌ಅಲಿಖಾನ್ 2017ರಲ್ಲಿ ನಡೆಸಿದ ಜಂಟಿ ಸರ್ವೆ ದಾಖಲಾತಿಗಳು ಕಂದಾಯ ಇಲಾಖೆಯಲ್ಲಿ ಲಭ್ಯವಿರಲಿಲ್ಲ. ಹಾಗಾಗಿ ಅರಣ್ಯ ಇಲಾಖೆಯಿಂದ 2017ರಲ್ಲಿ ನಡೆಸಿದ ಸರ್ವೇ ದಾಖಾಲಾತಿಗಳನ್ನು ಆಧರಿಸಿ. ಇನ್ನು ಮೂರು ತಿಂಗಳ ಒಳಗಾಗಿ ಹಕ್ಕುಪತ್ರ ನೀಡಲಾಗುವುದು ಎಂದು ಭರವಸೆ ನೀಡಿ ಧರಣಿ ಕೈಬಿಡುವಂತೆ ಮನವಿ ಮಾಡಿದರು. ಆದರೆ ಮನವಿಗೆ ಜಗ್ಗದ ಆದಿವಾಸಿಗಳು ಹಕ್ಕುಪತ್ರ ನೀಡುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದರು.
ಆದಿವಾಸಿಗಳಿಗೆ ನೀಡಿದ್ದ ಗಡುವು ಸಮೀಪಿಸುತ್ತಿದ್ದಂತೆ ಎಚ್ಚೆತ್ತು ನೈಜ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಲಾಗುವ 13 ದಾಖಲಾತಿಗಳ ಪೈಕಿ ಆದಿವಾಸಿಗಳು ಅರಣ್ಯದಲ್ಲಿ ಸಾಗುವಳಿ ಮಾಡುತ್ತಿದ್ದ ಕನಿಷ್ಠ ದಾಖಲಾತಿಗಳನ್ನು ಸಂಗ್ರಹಿಸಲು ಸೋಮವಾರ ಮರಳವಾಡಿ ಹೋಬಳಿಯ ಕಾಡಂಚಿನ ಬುಡಗಯ್ಯನ ದೊಡ್ಡಿ ಗ್ರಾಮದ ಆದಿಶಕ್ತಿ ದೇವಾಲಯದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಆದಿವಾಸಿಗಳ ವಿಶೇಷ ಗ್ರಾಮ ಸಭೆ ಆಯೋಜಿಸಿ ಆದಿವಾಸಿಗಳು ಅರಣ್ಯದಲ್ಲಿ ಸಾಗುವಳಿ ಮಾಡುತ್ತಿದ್ದ ಕುರುಹುಗಳ ಬಗ್ಗೆ 43 ಆದಿವಾಸಿ ಕುಟುಂಬಗಳ ದಾಖಲಾತಿಗಳನ್ನು ಸಂಗ್ರಹಿಸಿದರು.
ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಮಹದೇವಯ್ಯ ಮಾತನಾಡಿ. ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಹಕ್ಕುಪತ್ರ ನೀಡುವಂತೆ ಪ್ರತಿಭಟನೆ ಆರಂಭಿಸಿದ ಮೂರು ದಿನಗಳ ನಂತರ ಜಿಲ್ಲಾ ಉಪವಿಭಾಗಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಮೂರು ತಿಂಗಳ ಒಳಗಾಗಿ ಹಕ್ಕುಪತ್ರ ನೀಡಲಾಗುವುದು ಎಂದು ಭರವಸೆ ನೀಡಿದರು. ಅಧಿಕಾರಿಗಳ ನೀಡಿದ್ದ ಗಡುವಿನಲ್ಲಿ ಈಗಾಗಲೇ 70 ದಿನಗಳು ಕಳೆದಿವೆ. ಉಳಿದಿರುವ 20 ದಿನಗಳ ಒಳಗಾಗಿ ನಮಗೆ ಹಕ್ಕುಪತ್ರ ನೀಡಬೇಕು. ಇಲ್ಲದಿದ್ದರೆ, ನಮ್ಮ ಪೂರ್ವಿಕರ ಕಾಲದಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದ ಜಮೀನಿನಲ್ಲಿ ಮತ್ತೆ ಉಳುಮೆ ಮಾಡಿ ಕೃಷಿ ಚಟುವಟಿಕೆಗಳಲ್ಲಿ ಮುಂದುವರೆಯುತ್ತೇವೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ದಾಕ್ಷಾಯಿಣಿ ಮಾತನಾಡಿ ಸ್ಥಳಿಯ ಅಧಿಕಾರಿಗಳು ಸಭೆ ನಡೆಸಿ ಸರ್ವೆ ನಕ್ಷೆ ನೀಡಿ ಎಂದು ಸೂಚನೆ ನೀಡಲಾಗಿತ್ತು. ಆದರೆ ಸರ್ವೆ ನಕ್ಷೆ ನಮಗೆ ಕೊಟ್ಟಿಲ್ಲ. ಗ್ರಾಪಂ ಮತ್ತು ಅರಣ್ಯ ಅಧಿಕಾರಿಗಳು ಸಾಗುವಳಿ ಮಾಡುತ್ತಿದ್ದ ನೈಜ ಫಲಾನುಭವಿಗಳನ್ನು ಗುರುತಿಸಿದ ನಂತರ ಜಿಲ್ಲಾಧಿಕಾರಿಗಳ ಸಮಿತಿ ಪರಿಶೀಲನೆ ನಡೆಸಲಿದ್ದು, ಅರಣ್ಯ ಹಕ್ಕು ಕಾಯ್ದೆ ನಿಯಮದಡಿಯಲ್ಲಿ ದಾಖಾಲಾತಿ ನೀಡಿದ್ದರೆ, ಅಂತಹ ಫಲಾನೂಭವಿಗಳಿಗೆ ಜಿಲ್ಲಾಧಿಕಾರಿಗಳು ಹಕ್ಕುಪತ್ರ ನೀಡಲಿದ್ದಾರೆ.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಯಪ್ರಕಾಶ್, ರಾಜಸ್ವ ನಿರೀಕ್ಷಕ ಪುಟ್ಟರಾಜು, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ, ಅರಣ್ಯ ಅಧಿಕಾರಿ ರಾಜಕುಮಾರ್, ಪಿಡಿಒ ಮಂಜುನಾಥ್ ರೆಡ್ಡಿ, ಕರವಸೂಲಿಗಾರ ಅರುಣ್ ಕುಮಾರ್, ಲೆಕ್ಕ ಸಹಾಯಕ ಚೂಡಯ್ಯ, ಆದಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ಕೃಷ್ಣಮೂರ್ತಿ ಉಪಸ್ಥಿತರಿದ್ದರು.