ವಿಜಯಪುರ: ಪೊಲೀಸ್ ಠಾಣೆಯ ಆವರಣದೊಳಗೆಯೇ ಎಎಸ್ಐ “ಗುಂಡು ಪಾರ್ಟಿ” ನಡೆಸಿದ್ದು, ಮಹಿಳಾ ಪೇದೆಯೊಬ್ಬರು ಮದ್ಯವನ್ನು ಸರಬರಾಜು ಮಾಡುತ್ತಿರುವ ದೃಶ್ಯವನ್ನೊಳಗೊಂಡ ವರದಿಯನ್ನು ಖಾಸಗಿ
ಟಿವಿ ಚಾನೆಲ್ ಗಳಲ್ಲಿ ಪ್ರಸಾರವಾದ ಬೆನ್ನಲ್ಲೇ ಗುಂಡು ಪಾರ್ಟಿ ನಡೆಸಿದ್ದ ಎಎಸ್ಐ ಸೇರಿದಂತೆ ಮೂವರನ್ನು ಅಮಾನತುಗೊಳಿಸಿ ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಜೈನ್ ಆದೇಶ
ಹೊರಡಿಸಿದ್ದಾರೆ.
ಏನಿದು ಗುಂಡುಪಾರ್ಟಿ ಜಟಾಪಟಿ?
ವಿಜಯಪುರದ ಜಲನಗರ ಪೊಲೀಸ್ ಠಾಣೆಯ ಆವರಣದ ಕಲ್ಲು ಬೆಂಚಿನ ಮೇಲೆ ಎಎಸ್ಐ ಮಾಳೆಗಾಂವ್, ಪೇದೆಗಳಾದ ಪ್ರಕಾಶ್ ಸೊಡ್ಡಿ ಪಾರ್ಟಿ ಮಾಡುತ್ತಿರುವ ಹಾಗೂ ಅವರಿಗೆ ಮಹಿಳಾ ಕಾನ್ಸಟೇಬಲ್
ವೊಬ್ಬರು ಮದ್ಯವನ್ನು ಸರಬರಾಜು ಮಾಡುತ್ತಿರುವ ಬಗ್ಗೆ ಖಾಸಗಿ ಚಾನೆಲ್ ಗಳು ವರದಿ ಮಾಡಿದ್ದವು.
ಈ ಘಟನೆ ಜಲನಗರ ಠಾಣೆಯಲ್ಲಿ ಮೇ 14ರಂದು ನಡೆದಿತ್ತು. ಈ ಗುಂಡುಪಾರ್ಟಿಯ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿ ಠಾಣೆಗೆ ಭೇಟಿ ನೀಡಿ ತರಾಟೆಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಮೊದಲಿಗೆ ಅವರು ಮದ್ಯ ಸೇವಿಸಿಲ್ಲ, ಸಾಂಬಾರ್ ಸೇವಿಸಿದ್ದು ಎಂದು ಸ್ಪಷ್ಟನೆ ಕೊಟ್ಟಿದ್ದರು. ಆದರೆ ಘಟನೆಗೆ ಸಂಬಂಧಿಸಿದಂತೆ ಕೆಲವು ಸಂಘಟನೆಗಳು ಠಾಣೆ ಮುಂಭಾಗದಲ್ಲಿ ತೀವ್ರ ಪ್ರತಿಭಟನೆ ನಡೆಸಲು ಶುರು ಮಾಡಿದ್ದವು.
ಮೂವರ ಅಮಾನತು:
ಎಎಸ್ಐ ಮಾಳೆಗಾಂವ್, ಪೊಲೀಸ್ ಪೇದೆ ಐ ವೈ ಈರಣ್ಣ ಸೊಡ್ಡಿ, ಮಹಿಳಾ ಪೇದೆ ಪದ್ಮಾವತಿ ರಾಠೋಡ್ ಅವರನ್ನು ಅಮಾನತುಗೊಳಿಸಿ ವಿಜಯಪುರ ಎಸ್ಪಿ ಕುಲದೀಪ್ ಜೈನ್ ಆದೇಶ ನೀಡಿದ್ದಾರೆ. ಪೊಲೀಸರು ಮದ್ಯಸೇವಿಸಿರುವ ಬಗ್ಗೆ ದೃಢಪಟ್ಟಿಲ್ಲ, ಈ ಬಗ್ಗೆ ಮತ್ತಷ್ಟು ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.