ಜಗಳೂರು: ತಾಪಂ ಕೆಡಿಪಿ ಸಭೆ ಹಾಗೂ ಸಾಮಾನ್ಯ ಸಭೆಗಳಿಗೆ ಸಿಬ್ಬಂಯನ್ನು ನಿಯೋಜನೆ ಮಾಡದೇ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಖುದ್ದು ಹಾಜರಿದ್ದು ಮಾಹಿತಿ ನೀಡಬೇಕೆಂದು ತಾಪಂ ಕಾರ್ಯ ನಿರ್ವಾಹಕಾಧಿಕಾರಿ ಮಲ್ಲನಾಯ್ಕ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಪಿಡಿಒ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಜನರ ಫೋನ್ ರಿಸೀವ್ ಮಾಡುವುದಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ಪ್ರತಿಯೊಬ್ಬ ಸರಕಾರಿ ನೌಕರರ ಕರ್ತವ್ಯವಾಗಿದೆ. ನಿತ್ಯ ಕಚೇರಿಗೆ ಬರುವ ಜನರ ಕುಂದು ಕೊರತೆಗಳನ್ನು ಪರಿಹರಿಸಿ ಎಂದರು.
ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ| ನಾಗರಾಜ್ ವರದಿ ಮಂಡಿಸಿ, ಲಕ್ಕಂಪುರ ಹಾಗೂ ಬೊಮ್ಮಕ್ಕನಹಳ್ಳಿಯ ಜನರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಲ್ಲದೇ ಸೊಳ್ಳೆ ಪರದೆ ವಿತರಿಸಿ ಸ್ವಚ್ಛತೆಯ ಜಾಗೃತಿ ಮೂಡಿಸಲಾಗಿದೆ ಎಂದರು. ತಾಪಂ ಉಪಾಧ್ಯಕ್ಷ ಮುದೇಗೌಡ್ರು ಬಸವರಾಜಪ್ಪ ಮಾತನಾಡಿ, ಆಸ್ಪತ್ರೆಯ ಬಹುತೇಕ ವೈದ್ಯರು ವರ್ಗಾವಣೆಗೊಂಡು ನಿರ್ಗಮಿಸಿದ್ದು, ಈ ಭಾಗದಲ್ಲಿ ವೈದ್ಯರ ಕೊರತೆಯುಂಟಾಗಿ ರೋಗಿಗಳು ಪರದಾಡುವಂತಾಗಿದೆ ಎಂದು ಆರೋಪಿಸಿದರು.
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರಂಗಪ್ಪ ಮಾತನಾಡಿ, ಮುಂಗಾರು ಮಳೆಯಿಂದಾಗಿ ಹೊಲದ ಬದುಗಳಲ್ಲಿ ಸಾಕಷ್ಟು ಮೇವು ಬೆಳೆದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಆರಂಭಿಸಲಾಗಿದ್ದ 3 ಗೋಶಾಲೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಬಣಕಾರ್ ವರದಿ ಮಂಡಿಸಿ, ತಾಲೂಕಿನಲ್ಲಿ 257 ಅಂಗನವಾಡಿ ಕಟ್ಟಡಗಳಿದ್ದು 194 ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಿದರೆ 2 ಪಂಚಾಯತ್ ಕಟ್ಟಡ, 13 ಸಮುದಾಯ ಭವನ, 26 ಬಾಡಿಗೆ, 20 ಶಾಲಾ ಕೊಠಡಿ, 3 ಇತರೆ ಸರಕಾರಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕೇಂದ್ರಗಳಿಗೆ ಸ್ವಂತ ನಿವೇಶನ ಕಲ್ಪಿಸಿದರೆ ಇಲಾಖೆಯಿಂದ ಕಟ್ಟಡ ನಿರ್ಮಾಣಕ್ಕೆ ಅನುದಾನ ಲಭ್ಯವಾಗಲಿದೆ ಎಂದರು.
ಮೀನುಗಾರಿಕೆ ಇಲಾಖಾಧಿಕಾರಿ ಮಂಜುನಾಥ್ ಮಾತನಾಡಿ, ಕಡಿಮೆ ಮಳೆಯಿಂದಾಗಿ ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಮತ್ಸ್ಯಪಾಲನೆ ಸಾಧ್ಯವಾಗಿಲ್ಲ. ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹವಾಗಿದ್ದರೆ ಅಂತಹ ರೈತರಿಗೆ 100 ಮೀನು ಮರಿ ನೀಡಲಾಗುವುದು ಎಂದರು.
ತಾಪಂ ಅಧ್ಯಕ್ಷೆ ಮಂಜುಳಾ ಶಿವಾನಂದಪ್ಪ, ಉಪಾಧ್ಯಕ್ಷ ಮುದೇಗೌಡ್ರು ಬಸವರಾಜಪ್ಪ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಜೆ.ಎಂ. ತಿಪ್ಪೇಸ್ವಾಮಿ, ಯೋಜನಾಧಿಕಾರಿ ಮೋಹನ್, ವಿವಿಧ ಇಲಾಖೆ ಅನುಷ್ಠಾನಾಧಿಕಾರಿಗಳು ಹಾಜರಿದ್ದರು.