ಸಾಗರ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ನಷ್ಟದ ಅಂದಾಜು ತಯಾರಿಸಲಾಗುತ್ತಿದೆ. ಮಳೆ ಎಡಬಿಡದೆ ಸುರಿಯುತ್ತಿರುವುದರಿಂದ ಅಧಿಕಾರಿಗಳು ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರಲು ಸೂಚಿಸಲಾಗಿದೆ. ಮಳೆ ಪ್ರಮಾಣ ಕಡಿಮೆ ಆಗುವವರೆಗೆ ಯಾವುದೇ ಅಧಿಕಾರಿ ಶನಿವಾರ ಮತ್ತು ಭಾನುವಾರವೂ ಸೇರಿದಂತೆ ರಜೆ ಹಾಕುವಂತಿಲ್ಲ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಸೂಚಿಸಿದರು.
ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಳೆ ಹಾನಿ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು ಮಾಹಿತಿ ನೀಡಿ, ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕು. ಮಳೆಹಾನಿ ಸಂದರ್ಭದಲ್ಲಿ ತುರ್ತು ಕ್ರಮ ಕೈಗೊಳ್ಳಲು ಪಿಡಿಓ, ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗ, ಗ್ರಾಮ ಸಹಾಯಕರನ್ನು ಒಳಗೊಂಡ ಟಾಸ್ಕ್‌ಫೋರ್ಸ್ ರಚಿಸಲಾಗಿದೆ. ಎರಡು ಮೂರು ಗ್ರಾಮ ಪಂಚಾಯ್ತಿಗೆ ಒಬ್ಬರಂತೆ ನೋಡೆಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಜು. 15ಕ್ಕೆ ಶಿವಮೊಗ್ಗದಲ್ಲಿ ನಡೆಯುವ ಜಿಲ್ಲಾಮಟ್ಟದ ಕೆಡಿಪಿ ಸಭೆಯಲ್ಲಿ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಕೊಡುವಂತೆ ಮನವಿ ಮಾಡಲಾಗುತ್ತದೆ ಎಂದು ಹೇಳಿದರು.
ತಾಲೂಕಿನಲ್ಲಿ5 ಮನೆ ಸಂಪೂರ್ಣ ಬಿದ್ದಿದ್ದು, 26 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 8 ಜಾನುವಾರುಗಳು ಮೃತಪಟ್ಟಿದ್ದು, 21 ಕೊಟ್ಟಿಗೆ ಹಾನಿಯಾಗಿದೆ. 2 ಹೆಕ್ಟೇರ್ ತೋಟ ಮತ್ತು 59 ಹೆಕ್ಟೇರ್ ಕೃಷಿಭೂಮಿ ಜಲಾವೃತವಾಗಿದೆ. ಈಗಾಗಲೇ ಕೆಲವರಿಗೆ ತುರ್ತು ಪರಿಹಾರವನ್ನು ನೀಡಲಾಗಿದೆ. ಮನೆ ಸಂಪೂರ್ಣ ಕುಸಿದವರಿಗೆ ಈಗ ನೀಡುತ್ತಿರುವ 95,100 ರೂಪಾಯಿ ಪರಿಹಾರ ತೀರ ಕಡಿಮೆಯಾಗಿದ್ದು 5 ಲಕ್ಷ ರೂಪಾಯಿವರೆಗೆ ಪರಿಹಾರ ಕಲ್ಪಿಸಲು ಸರ್ಕಾರಕ್ಕೆ ಒತ್ತಾಯ ಮಾಡಲಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಾಗುತ್ತದೆ. ಹಿಂದಿನ ವರ್ಷ ಮನೆ ಬಿದ್ದವರಿಗೆ ಕೆಲವು ತಾಂತ್ರಿಕ ಕಾರಣಗಳಿಂದ ಪೂರ್ಣಪ್ರಮಾಣದ ಪರಿಹಾರ ಬಂದಿಲ್ಲ. ಪರಿಹಾರ ನೀಡಲು ಬೇಕಾದ ತೊಡಕುಗಳನ್ನು ನಿವಾರಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಸಹಾಯಕ ಆಯುಕ್ತೆ ಪಲ್ಲವಿ ಸಾತೇನಹಳ್ಳಿ, ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಬಿಂಬ ಕೆ.ಆರ್., ತಾಲೂಕು ಪಂಚಾಯ್ತಿ ಇಓ ಪುಷ್ಪಾ ಎಂ. ಕಮ್ಮಾರ್, ಪೌರಾಯುಕ್ತ ರಾಜು ಡಿ. ಬಣಕಾರ್ ಇನ್ನಿತರರು ಹಾಜರಿದ್ದರು.