Advertisement

ಅಧಿಕಾರಿ ಮೇಲೆ ಹಲ್ಲೆ; ವ್ಯವಸ್ಥೆ ಸರಿಪಡಿಸದೆ ದರ್ಪವೇಕೆ? 

07:00 AM Feb 22, 2018 | Team Udayavani |

ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿಯ ನಸೀಬು ಕೆಟ್ಟಿರುವಂತೆ ಕಾಣಿಸುತ್ತಿದೆ. ಲಾಭದಾಯಕ ಹುದ್ದೆ ಹೊಂದಿದ ಆರೋಪ ದಲ್ಲಿ 20 ಶಾಸಕರು ಅನರ್ಹಗೊಂಡ ಬೆನ್ನಿಗೆ ಇದೀಗ ರಾಜ್ಯದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಮೇಲೆ ಹಲ್ಲೆ ಮಾಡಿದ ವಿವಾದವನ್ನು ಸರಕಾರ ಮೈಮೇಲೆ ಎಳೆದುಕೊಂಡಿದೆ. ಸೋಮವಾರ ತಡರಾತ್ರಿ ಅರವಿಂದ ಕೇಜ್ರಿವಾಲ್‌ ಮನೆಯಲ್ಲಿ ನಿಜವಾಗಿ ನಡೆದಿರುವುದು ಏನು ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಅಂಶು ಪ್ರಕಾಶ್‌ ಮುಖ್ಯಮಂತ್ರಿಯ ಸೂಚನೆ ಮೇರೆಗೆ ಕೆಲವು ಆಪ್‌ ಶಾಸಕರು ತನ್ನ ಮೇಲೆ ಕೈ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. 

Advertisement

ಈ ದೂರಿನನ್ವಯ ಓರ್ವ ಶಾಸಕ ಸೆರೆಯಾಗಿದ್ದರೆ ಇನ್ನೋರ್ವ ಶಾಸಕನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಪಡಿತರ ವಿತರಣೆಯಲ್ಲಾಗುತ್ತಿರುವ ಲೋಪದೋಷಗಳ ಕುರಿತು ಚರ್ಚಿ ಸಲು ರಾತ್ರಿ 12 ಗಂಟೆಗೆ ಮುಖ್ಯ ಕಾರ್ಯದರ್ಶಿಯನ್ನು ಮನೆಗೆ ಕರೆಸಿ ಕೊಂಡಿದ್ದೆ ಎಂದು ಕೇಜ್ರಿವಾಲ್‌ ಹೇಳುತ್ತಿದ್ದಾರೆ. ಆದರೆ ಅಂಶು ಪ್ರಕಾಶ್‌ ದೂರಿನ ಪ್ರಕಾರ ಸರಕಾರ ಮೂರು ವರ್ಷ ಪೂರೈಸಿದ ನಿಮಿತ್ತ ಸಾಧನೆ ಗಳನ್ನು ತಿಳಿಸುವ ಜಾಹೀರಾತುಗಳನ್ನು ವಿಳಂಬ ಮಾಡಿರುವುದನ್ನು ಪ್ರಶ್ನಿಸಲು ಮುಖ್ಯಮಂತ್ರಿ ಮುಖ್ಯ ಕಾರ್ಯದರ್ಶಿಯನ್ನು ಕರೆಸಿ ಕೊಂಡಿದ್ದರು. 

ನೈಜ ವಿಷಯ ಏನೇ ಇದ್ದರೂ ಇಡೀ ಅಧಿಕಾರಶಾಹಿ ಈಗ ದಿಲ್ಲಿ ಸರಕಾರದ ವಿರುದ್ಧ ತಿರುಗಿ ಬಿದ್ದಿದೆ.ಮಂಗಳವಾರ ಉನ್ನತ ಅಧಿಕಾರಿಗಳು ಇಲ್ಲದ ಕಾರಣ ಸಂಪೂರ್ಣ ಆಡಳಿತ ಸ್ತಬ್ಧವಾಗಿತ್ತು. ಬುಧವಾರವೂ ಐಎಎಸ್‌ ಅಧಿಕಾರಿಗಳು ಪ್ರತಿಭಟನೆ ನಡೆಸಿದ್ದು ಇದಕ್ಕೆ ಐಆರ್‌ಎಸ್‌ ಹಾಗೂ ಇತರ ಉನ್ನತ ಶ್ರೇಣಿಯ ಅಧಿಕಾರಿಗಳು ಸಾಥ್‌ ನೀಡಿದ್ದಾರೆ. 

ಹಾಗೆ ನೋಡಿದರೆ ಆರಂಭದಿಂದಲೂ ಕೇಜ್ರಿವಾಲ್‌ ಸರಕಾರ ಅಧಿಕಾರಿ ಗಳ ಜತೆಗೆ ತಿಕ್ಕಾಟ ನಡೆಸಿಕೊಂಡೇ ಬಂದಿದೆ. ಹಿಂದಿನ ಮುಖ್ಯ ಕಾರ್ಯ ದರ್ಶಿಯೂ ಸರಕಾರದ ವಿರುದ್ಧ ಬಹಿರಂಗವಾಗಿಯೇ ಸಂಘರ್ಷಕ್ಕೆ ಇಳಿದಿದ್ದರು. ಹಲವು ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳು ಆಪ್‌ ಸರಕಾರದ ಜತೆಗೆ ಏಗಲಾಗದೆ ವರ್ಗ ಮಾಡಿಸಿಕೊಂಡು ಹೋಗಿದ್ದಾರೆ. 12ಕ್ಕೂ ಹೆಚ್ಚು ಉನ್ನತ ಅಧಿಕಾರಿಗಳು ಸಂಬಳ ರಹಿತ ರಜೆ ಪಡೆದು ಹೋಗಿದ್ದಾರೆ. ಆಪ್‌ ನಾಯಕರು ಅಧಿಕಾರಿಗಳನ್ನು ತುಂಬ ಕೀಳಾಗಿ ಕಾಣುತ್ತಾರೆ ಎಂಬ ದೂರು ಮೊದಲಿನಿಂದಲೂ ಇದೆ ಹಾಗೂ ಇದರಲ್ಲಿ ಒಂದಷ್ಟು ಸತ್ಯಾಂಶವೂ ಇದೆ. ಹಾಗೆಂದು ಅಧಿಕಾರಿಗಳೆಲ್ಲ ಸಾಚಾಗಳು ಎನ್ನಲಾಗುವುದಿಲ್ಲ. ಆದರೆ ಆಪ್‌ ನಾಯಕರ ಸಮಸ್ಯೆಯೇನೆಂದರೆ ಅವರು ತಮ್ಮ ಮೂಗಿನ ನೇರಕ್ಕೆ ನಡೆಯದ ಅಧಿಕಾರಿಗಳಿಗೆಲ್ಲ ಬಿಜೆಪಿಯ ಏಜೆಂಟರು ಎಂದು ಸಾರಾಸಗಟು ಹಣೆಪಟ್ಟಿ ಅಂಟಿಸುತ್ತಾರೆ. 

ದಿಲ್ಲಿಯ ಸಮಸ್ಯೆಗಳಿಗೆಲ್ಲ ಅಧಿಕಾರಿಗಳೇ ಕಾರಣ ಎನ್ನುವುದು ಅವರ ವಾದ. ಇಂತಹ ಪರಿಸ್ಥಿತಿಯಲ್ಲಿ ಯಾವ ಅಧಿಕಾರಿಯೇ ಆದರೂ ಸರಕಾರದ ವಿರುದ್ಧ ಅಸಮಾಧಾನ ಹೊಂದಿರುವುದು ಸಹಜ. ಸ್ವತಃ ಐಆರ್‌ಎಸ್‌ ಅಧಿಕಾರಿಯಾಗಿದ್ದ ಕೇಜ್ರಿವಾಲ್‌ ಅವರು ಕೂಡ ಉನ್ನತ ಅಧಿಕಾರಿಗಳನ್ನು ನಡೆಸಿಕೊಳ್ಳುವುದರಲ್ಲಿ ಎಡವಿದ್ದಾರೆ ಎನ್ನುವಾಗ ಅವರ ಪಕ್ಷದ ಉಳಿದ ನಾಯಕರ ಕುರಿತು ಹೆಚ್ಚೇನು ಹೇಳಬಹುದು? 
   
ಐಎಎಸ್‌ ಅಧಿಕಾರಿಯ ಮೇಲೆ ಜನಪ್ರತಿನಿಧಿಗಳು ಕೈಮಾಡುವುದು ಎಂದರೆ ಪ್ರಜಾತಂತ್ರದ ಅಧಃಪತನವೆಂದೇ ಅರ್ಥ. ಹಾಗೆಂದು ಇದು ದಿಲ್ಲಿಯ ರಾಜಕಾರಣಿಗಳಿಗೆ ಮಾತ್ರ ಸೀಮಿತವಾಗಿರುವ ಚಾಳಿಯಲ್ಲ. ಹೆಚ್ಚೇಕೆ ನಮ್ಮದೇ ರಾಜ್ಯ ಸರಕಾರವೂ ಅಧಿಕಾರಿಗಳ ವಿಚಾರದಲ್ಲಿ ಪದೇ ಪದೆ ಎಡವಿದೆ. ಮುಖ್ಯಮಂತ್ರಿಯ ಆಪ್ತನೇ ಜಿಲ್ಲಾಧಿಕಾರಿಯನ್ನು ಬಹಿ ರಂಗ ವಾಗಿ ನಿಂದಿಸಿದ ಘಟನೆಗೆ ರಾಜ್ಯ ಸಾಕ್ಷಿಯಾಗಿದೆ. ಹಲವು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ವರ್ಗ ಮಾಡಿಸಿಕೊಂಡು ಹೋಗಿದ್ದಾರೆ. ಹೀಗೆ ಎಲ್ಲ ರಾಜ್ಯಗಳಲ್ಲೂ ಸರಕಾರ ಮತ್ತು ಅಧಿಕಾರಿಗಳ ನಡುವೆ ತಿಕ್ಕಾಟ ಇದ್ದೇ ಇರುತ್ತದೆ. ಆದರೆ ಅದು ದಿಲ್ಲಿಯಲ್ಲಿ ಇರುವಷ್ಟು ಇಲ್ಲ. ಅದಕ್ಕೆ ಕಾರಣ ದಿಲ್ಲಿಯ ಸಂಕೀರ್ಣ ರಾಜಕೀಯ ವ್ಯವಸ್ಥೆ. ಆ ರಾಜ್ಯದ ಅಧಿಕಾರ ಮುಖ್ಯಮಂತ್ರಿಯೊಬ್ಬನ ಕೈಯಲ್ಲಿ ಕೇಂದ್ರೀ ಕೃತ ವಾಗಿಲ್ಲ. ಲೆಫ್ಟಿನೆಂಟ್‌ ಗವರ್ನರ್‌, ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ದಿಲ್ಲಿ ನಗರಪಾಲಿಕೆಗಳ ನಡುವೆ ಹಂಚಿ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಡಳಿತ ನಡೆಸಲು ತುಸು ಕಠಿಣ ಹಾಗೂ ಅದಕ್ಕೆ ನಾಜೂಕು ಮನಃಸ್ಥಿತಿ ಇರಬೇಕು. ಪರಿಸ್ಥಿತಿ ಹೀಗೆ ಇರುವುದರಿಂದ ಉನ್ನತ ಅಧಿಕಾರಿಗಳು ತಮಗೆ ಕಾನೂನು ವಿಧಿಸಿರುವ ರೀತಿಯಲ್ಲಿ ನಡೆದು ಕೊಳ್ಳುವುದು ಸಹಜ. 

Advertisement

ಕೇಜ್ರಿವಾಲ್‌ ಸಮಸ್ಯೆಯಿರುವುದೇ ಇಲ್ಲಿ. ಅವರಿಗೆ ಎಲ್ಲ ಅಧಿಕಾರವೂ ತನ್ನ ಬಳಿ ಇರಬೇಕು ಮತ್ತು ಉಳಿದ ರಾಜ್ಯಗಳಂತೆ ಅಧಿಕಾರಿಗಳು ರಾಜ್ಯ ಸರಕಾರಕ್ಕೆ ಮಾತ್ರ ವಿಧೇಯರಾಗಿರಬೇಕೆಂಬ ಅಪೇಕ್ಷೆಯಿದೆ. ಇದು ಸಾಧ್ಯವಾಗಬೇಕಾದರೆ ದಿಲ್ಲಿಯಲ್ಲಿ ಹಾಲಿ ಇರುವ ವ್ಯವಸ್ಥೆ ಬದಲಾಗಿ ಸ್ವತಂತ್ರ ರಾಜ್ಯದ ಸ್ಥಾನಮಾನ ಸಿಗಬೇಕು. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ಆಗಬೇಕು. ಇದೆಲ್ಲ ದೀರ್ಘ‌ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಗಳು. ಇದಕ್ಕಾಗಿ ಹೋರಾಡದೆ ಅಧಿಕಾರಿಗಳ ಮೇಲೆ ದರ್ಪ ತೋರಿಸಿದರೆ ಏನೂ ಲಾಭವಿಲ್ಲ ಎನ್ನುವುದನ್ನು ಕೇಜ್ರಿವಾಲ್‌ ತಿಳಿದುಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next