Advertisement

ಕಚೇರಿ ತೆರೆದ ಕೈ ಪಡೆ

10:06 PM Oct 02, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾದ ಬಳಿಕ ಕಾಂಗ್ರೆಸ್‌ ನಾಯಕರ ಹಾಗೂ ಅನರ್ಹ ಶಾಸಕ ಡಾ.ಸುಧಾಕರ್‌ ನಡುವೆ ಮಾತಿನ ಸಮರ ಮುಂದುವರೆದು ಪರಸ್ಪರ ಆರೋಪ, ಪ್ರತ್ಯಾರೋಪಗಳು ದಿನ ನಿತ್ಯ ನಡೆಯುತ್ತಿವೆ. ಇದರ ನಡುವೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯೆಂದು ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್‌ ನಾಯಕರು ಕಚೇರಿ ತೆರೆದು ಉಪ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ.

Advertisement

ನಗರದ ಬಿಬಿ ರಸ್ತೆಯ ಎಸ್‌ಬಿಐ ಬ್ಯಾಂಕ್‌ ಎದುರು ಜಿಲ್ಲಾ ಕಾಂಗ್ರೆಸ್‌ ಕಚೇರಿ ಉದ್ಘಾಟಿಸಿದರು. ಇದೇ ವೇಳೆ ಮಹಾತ್ಮ ಗಾಂಧೀಜಿ ರವರ 150ನೇ ಜಯಂತಿಯನ್ನು ಪಕ್ಷದ ನಾಯಕರು ರಾಷ್ಟ್ರಪಿತನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಿ ದೇಶಕ್ಕೆ ಗಾಂಧಿಜೀ ಕೊಡುಗೆಯನ್ನು ಸ್ಮರಿಸಿದರು. ಕಾಂಗ್ರೆಸ್‌ ಪಕ್ಷವನ್ನು ದೇಶದಲ್ಲಿ ಹುಟ್ಟಿ ಬೆಳೆಸಿದ ಕೀರ್ತಿ ಗಾಂಧೀಜಿಗೆ ಸಲ್ಲುತ್ತದೆ. ಅವರ ಚಿಂತನೆಗಳು, ವಿಚಾರಧಾರೆಗಳು ಪಕ್ಷದ ಕಾರ್ಯಕರ್ತರು ಮೈಗೂಡಿಸಿಕೊಂಡು ನಡೆಯಬೇಕೆಂದು ಈ ವೇಳೆ ಮಾತನಾಡಿದ ಮುಖಂಡರು ತಿಳಿಸಿದರು.

ಸುಧಾಕರ್‌ ವಿರುದ್ಧ ವಾಗ್ಧಾಳಿ: ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಎನ್‌.ಕೇಶವರೆಡ್ಡಿ ಮಾತನಾಡಿ, ಕ್ಷೇತ್ರದಲ್ಲಿ ಎರಡು ಬಾರಿ ಕಾಂಗ್ರೆಸ್‌ನಿಂದ ಗೆದ್ದ ಡಾ.ಕೆ.ಸುಧಾಕರ್‌, ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಉಪ ಚುನಾವಣೆಯನ್ನು ಕಾಂಗ್ರೆಸ್‌ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಮ್ಮತದ ಅಭ್ಯರ್ಥಿ: ಸದ್ಯಕ್ಕೆ ಉಪ ಚುನಾವಣೆಗೆ ಐದು ಮಂದಿ ಆಕಾಂಕ್ಷಿಗಳು ಇದ್ದು, ಯಾರೇ ಅಭ್ಯರ್ಥಿಯಾದರೂ ಕಾಂಗ್ರೆಸ್‌ ಗೆಲುವು ಸಾಧಿಸಬೇಕಿರುವುದು ಅನಿವಾರ್ಯ. ಆ ಮೂಲಕ ಪಕ್ಷ ವಿರೋಧಿ ಮೂಲಕ ಅನರ್ಹಗೊಂಡಿರುವ ಸುಧಾಕರ್‌ಗೆ ತಕ್ಕಪಾಠ ಕಲಿಸಬೇಕಿದೆ. ವರಿಷ್ಠರು ಒಮ್ಮತದ ಅಭ್ಯರ್ಥಿಯನ್ನು ಘೋಷಿಸಲಿದ್ದಾರೆ ಎಂದರು.

ಕಾಂಗ್ರೆಸ್‌ ಪಕ್ಷದ ಪ್ರಬಲ ಟಿಕೆಟ್‌ ಆಕಾಂಕ್ಷಿ ನಂದಿ ಅಂಜಿನಪ್ಪ ಮಾತನಾಡಿ, ಕಾಂಗ್ರೆಸ್‌ ಪಕ್ಷ ಗಾಂಧೀಜಿ ತತ್ವಗಳನ್ನು ಅನುಸರಿಸಿಕೊಂಡು ದೇಶವನ್ನು ಕಟ್ಟುವ ಕೆಲಸ ಮಾಡುತ್ತಿದೆ ಎಂದರು. ದೇಶಕ್ಕೆ ಗಾಂಧೀಜಿ ಕೊಡುಗೆ ಅಪಾರವಾಗಿದೆ. ನೆಹರು, ಇಂದಿರಾಗಾಂಧಿ, ದೇವರಾಜ ಅರಸು, ಸಿದ್ದರಾಮಯ್ಯ ಅಧಿಕಾರ ಅವಧಿಯಲ್ಲಿ ಬಡವರಿಗೆ ಜನಪರವಾದ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದು, ಕಾಂಗ್ರೆಸ್‌ ಪಕ್ಷದ ಕೈ ಹಿಡಿಲಿಯಲಿದೆ. ಸದ್ಯಕ್ಕೆ ಪಕ್ಷಕ್ಕೆ ಚುನಾವಣೆಗಳಲ್ಲಿ ಸೋಲಾಗಿರಬಹುದು. ಆದರೆ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಕೇಂದ್ರ ಹಾಗೂ ರಾಜ್ಯದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.

Advertisement

ಮಾಜಿ ಶಾಸಕರಾದ ಎಸ್‌.ಎಂ.ಮುನಿಯಪ್ಪ, ಅನುಸೂಯಮ್ಮ, ಜಿಪಂ ಮಾಜಿ ಅಧ್ಯಕ್ಷ ಪಿ.ಎನ್‌.ಮುನೇಗೌಡ, ಗಂಗರೇಕಾಲುವೆ ನಾರಾಯಣಸ್ವಾಮಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ರಮೇಶ್‌, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಸುನೀಲ್‌ ಕುಮಾರ್‌, ಮಂಚನಬಲೆ ಇಸ್ಮಾಯಿಲ್‌, ಗಂಗಾಧರ್‌, ವಕೀಲ ನಾರಾಯಣಸ್ವಾಮಿ, ವರದರಾಜ್‌, ಅಡ್ಡಗಲ್‌ ಶ್ರೀಧರ್‌, ಸುರೇಶ್‌, ಎನ್‌ಎಸ್‌ಯುಐ ರಾಜ್ಯ ಸಂಚಾಲಕ ಕುಂದಲಗುರ್ಕಿ ಕೆ.ಎನ್‌.ಮುನೀಂದ್ರ ಉಪಸ್ಥಿತರಿದ್ದರು.

ಸುಧಾಕರ್‌ರಿಂದ ಮಕ್ಮಲ್‌ ಟೋಪಿ: ಗಾಂಧಿ ಟೋಪಿ ಹಾಕಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಅನರ್ಹ ಶಾಸಕ ಡಾ.ಕೆ.ಸುಧಾಕರ್‌ ಮಕ್ಮಲ್‌ ಟೋಪಿ ಹಾಕಿದ್ದರಿಂದ ಹಣ, ಅಧಿಕಾರಕ್ಕಾಗಿ ಕಾಂಗ್ರೆಸ್‌ ಪಕ್ಷ ತೊರೆದಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಟಿಕೆಟ್‌ ಆಕಾಂಕ್ಷಿ ನಂದಿ ಅಂಜಿನಪ್ಪ ಟೀಕಿಸಿದರು. ಪಕ್ಷ ಅಧಿಕಾರದಲ್ಲಿದ್ದಾಗ ಲೂಟಿ ಮಾಡಲು ಸುಧಾಕರ್‌ಗೆ ಕಾಂಗ್ರೆಸ್‌ ಬೇಕಿತ್ತು. ಇದೀಗ ಅಧಿಕಾರ ಇರುವ ಬಿಜೆಪಿ ಕಡೆಗೆ ಹೋಗಿದ್ದಾರೆ. ಇಂತಹ ಪಕ್ಷ ವಿರೋಧಿ ಮಾಡುವವರಿಗೆ ಕ್ಷೇತ್ರದ ಜನತೆ ತಕ್ಕಪಾಠ ಕಲಿಸುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next