Advertisement
ವಾರದಿಂದಲೂ ಕೋಲಾರ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳು ಉಸ್ತುವಾರಿ ಇಲ್ಲದೆ ನನೆಗುದಿಗೆ ಬಿದ್ದಿದ್ದು, ಇಬ್ಬರು ಅಧಿಕಾರಿಗಳ ತಿಕ್ಕಾಟವನ್ನು ಬಗೆಹರಿಸಬೇಕಾಗಿದ್ದ ಜಿಪಂ ಅಧಿಕಾರಿಗಳು ಮೇಲಿನ ಒತ್ತಡ ಹಾಗೂ ಪ್ರಭಾವಕ್ಕೊಳಗಾಗಿ ಮೌನಕ್ಕೆ ಶರಣಾಗಿರುವುದು ಪರಿಸ್ಥಿತಿಯ ವಿಕೋಪಕ್ಕೆ ಸಾಕ್ಷಿಯಾಗಿದೆ.
Related Articles
Advertisement
ರಾಜಕೀಯ ಲಾಬಿ: ಇಬ್ಬರೂ ಅಧಿಕಾರಿಗಳು ಜಿಲ್ಲೆಯ ಇಬ್ಬರು ಪ್ರಭಾವಿ ಶಾಸಕರ ಬೆಂಬಲದೊಂದಿಗೆ ತಮ್ಮದೇ ಆದ ನಿಲುವನ್ನು ತೆಗೆದುಕೊಳ್ಳುತ್ತಿದ್ದಾರೆಂದು ಹೇಳಲಾಗುತ್ತಿದೆ. ಪ್ರಭಾರ ಅಧಿಕಾರಿ ಜಬೀವುಲ್ಲಾರಿಗೆ ಮುಖ್ಯಮಂತ್ರಿಗೆ ಹತ್ತಿರವಾಗಿರುವ ಶಾಸಕರ ಬೆಂಬಲವಿದೆ. ಹಾಗೆಯೇ ಅಮರಪ್ಪ ಎಂ. ಹೊಸಕೋಟೆ ಜಿಲ್ಲೆಯ ಮತ್ತೂಬ್ಬ ಹಿರಿಯ ಶಾಸಕರ ಬೆಂಬಲದೊಂದಿಗೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ ಕಾಂಗ್ರೆಸ್ ಪ್ರಭಾವಿ ಶಾಸಕರಿಬ್ಬರ ನಡುವೆ ಅಧಿಕಾರಿಗಳ ಕಿತ್ತಾಟ ಪರೋಕ್ಷ ಹಗ್ಗಜಗ್ಗಾಟವಾಗಿ ಮಾರ್ಪಟ್ಟಿದೆ.
ಕೆಲಸ ಸ್ಥಗಿತ: ಇಬ್ಬರು ಅಧಿಕಾರಿಗಳ ತಿಕ್ಕಾಟದಿಂದ ಕುಡಿಯುವ ನೀರಿನ ಕಾಮಗಾರಿಗಳು, ಜಲ ಜೀವನ್ ಮಿಷನ್ ಯೋಜನೆಯು ನನೆಗುದಿಗೆ ಬೀಳುವಂತಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಗುತ್ತಿಗೆದಾರರು ನಿರ್ವಹಿಸುತ್ತಿರುವ ಕುಡಿಯುವ ನೀರಿನ ಕಾಮಗಾರಿಗಳ 75 ಕೋಟಿ ರೂ. ಬಾಕಿ ಇದೆ. ಸರ್ಕಾರ 20 ದಿನಗಳ ಹಿಂದಷ್ಟೇ 15 ಕೋಟಿ ರೂ. ಬಿಡುಗಡೆಯೂ ಮಾಡಿದೆ. ಆದರೆ, ಹಣ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿ ಕಾಮಗಾರಿಗಳ ಕೆಲಸ ಚುರುಕುಗೊಳಿಸಲು ಆಗುತ್ತಿಲ್ಲ. ಕಚೇರಿ ಕಾರ್ಯಗಳು ಸ್ಥಗಿತಗೊಂಡಿವೆ. ವಾರದಿಂದಲೂ ಇಬ್ಬರು ಅಧಿಕಾರಿಗಳ ಪೈಪೋಟಿಯಲ್ಲಿ ಕಚೇರಿ ಕೆಲಸಗಳು ಅನಾಥವಾಗುವಂತಾಗಿದೆ.
ಜಿಲ್ಲಾ ಪಂಚಾಯ್ತಿ ಮೌನಕ್ಕೆ ಶರಣು: ವಾರದಿಂದಲೂ ಇಬ್ಬರು ಶಾಸಕರ ಬೆಂಬಲದೊಂದಿಗೆ ಇಬ್ಬರು ಅಧಿ ಕಾರಿ ಗಳು ಅಧಿಕಾರಕ್ಕಾಗಿ ನಡೆಸುತ್ತಿರುವ ತಿಕ್ಕಾಟದಲ್ಲಿ ಜಿಪಂ ಅಧಿಕಾರಿಗಳು ವಾರದಿಂದಲೂ ಯಾವುದೇ ಕ್ರಮವಹಿಸಿಲ್ಲ ಎಂಬ ಆರೋಪವಿದೆ. ಸರ್ಕಾರದ ಹಂತದಲ್ಲಿ ಇಬ್ಬರೂ ಶಾಸಕರು ಪ್ರಭಾವಿಗಳೇ ಆಗಿರುವುದರಿಂದ ಸರ್ಕಾರದ ಹಂತದಲ್ಲಿಯೇ ಈ ಸಮಸ್ಯೆ ಬಗೆಹರಿಯಲಿ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಕಾಯುತ್ತಿರುವಂತಿದೆ. ಶಾಸಕರು, ಅಧಿಕಾರಿಗಳ ಕಿತ್ತಾಟದಲ್ಲಿ ಕೋಲು ಮುರಿಯುತ್ತಿಲ್ಲ, ಹಾವು ಸಾಯುತ್ತಿಲ್ಲ ಎಂಬಂತಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಕೋಲಾರ ಮತ್ತು ಮಾಲೂರು ಸಹಾಯಕ ಕಾರ್ಯಪಾಲಕ ಅಭಿಯಂತರಾಗಿದ್ದ ಜಬೀವುಲ್ಲಾ ಜವಾಬ್ದಾರಿ ಹೊತ್ತುಕೊಂಡಿದ್ದರು. ಈಗ ಸರ್ಕಾರ ಕಾರ್ಯಪಾಲಕ ಅಭಿಯಂತರರನ್ನು ವರ್ಗಾವಣೆ ಮಾಡಿದೆ. ಅವರೇ ಕಚೇರಿ ಜವಾಬ್ದಾರಿ ಹೊತ್ತುಕೊಳ್ಳಬೇಕಾಗುತ್ತದೆ. ಖಜಾನೆಯಲ್ಲಿ ಹೊಸ ಅಧಿಕಾರಿ ಕಾರ್ಯನಿರ್ವಹಣೆಗೆ ಅನುವಾಗುವಂತೆ ಮಾಡಲು ಸೂಚಿಸಿದ್ದೇನೆ. ಆನಾರೋಗ್ಯ ಕಾರಣ ತಾವು ಕಚೇರಿಗೆ ಬಂದಿಲ್ಲ. ಮಂಗಳವಾರ ಎಲ್ಲವನ್ನೂ ಸರಿಪಡಿಸುತ್ತೇನೆ. ● ಪದ್ಮಬಸವಂತಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಪಂ, ಕೋಲಾರ
– ಕೆ.ಎಸ್.ಗಣೇಶ್