ಉಡುಪಿ: ಮಣಿಪಾಲದ ಮಾಹೆ ವಿಶ್ವವಿದ್ಯಾನಿಲಯದ 26ನೇ ಘಟಿಕೋತ್ಸವ ನ. 16ರಿಂದ 18ರ ವರೆಗೆ ಕೆಎಂಸಿ ಗ್ರೀನ್ಸ್‌ನಲ್ಲಿ ನಡೆಯಲಿದೆ. ನಿತ್ಯ ಅಪರಾಹ್ನ 3ಕ್ಕೆ ಘಟಿಕೋತ್ಸವ ಸಮಾರಂಭ ಆರಂಭಗೊಳ್ಳಲಿದೆ.
ಪ್ರತಿನಿತ್ಯ ಸುಮಾರು 1,300 ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರವನ್ನು ಪಡೆಯಲಿದ್ದಾರೆ. 4,156 ವಿದ್ಯಾರ್ಥಿಗಳು ಪದವಿ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ. 928 ವಿದ್ಯಾರ್ಥಿಗಳು ಅನುಪಸ್ಥಿತಿಯಲ್ಲಿ ತ್ವರಿತ ಅಂಚೆಯಲ್ಲಿ ಪ್ರಮಾಣಪತ್ರ ಪಡೆಯುವರು. 9 ಮಂದಿ ಸ್ನಾತಕ ಮತ್ತು ಮೂವರು ಸ್ನಾತಕೋತ್ತರರು ಡಾ| ಟಿಎಂಎ ಪೈ ಚಿನ್ನದ ಪದಕ ಪಡೆಯುವರು. 85 ಮಂದಿಗೆ ಸ್ನಾತಕೋತ್ತರ ಡಾಕ್ಟರಲ್ ಪದವಿ ಪ್ರದಾನ ಮಾಡಲಾಗುವುದು.
ಸುಮಾರು 5,000 ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನ ಬೆಂಗಳೂರಿನ ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್ ಪ್ರೈ.ಲಿ. ಅಧ್ಯಕ್ಷ ಡಾ| ಎಚ್. ಸುದರ್ಶನ ಬಲ್ಲಾಳ್, ಎರಡನೆಯ ದಿನ ಪಿಲಾನಿಯ ಬಿರ್ಲಾ ತಂತ್ರಜ್ಞಾನ ಮತ್ತು ವಿಜ್ಞಾನ ಸಂಸ್ಥೆಯ ಕುಲಪತಿ ಡಾ| ಸೌವಿಕ್ ಭಟ್ಟಾಚಾರ್ಯ, ಮೂರನೆಯ ದಿನ ಬೆಂಗಳೂರಿನ ಮೈಂಡ್ ಫ್ರೀ ಸಹ ಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಕೃಷ್ಣ
ಕುಮಾರ್ ನಟರಾಜನ್ ಅತಿಥಿಗಳಾಗಿ ಘಟಿಕೋತ್ಸವ ಉಪನ್ಯಾಸ ನೀಡುವರು ಎಂದು ಪ್ರಕಟನೆ ತಿಳಿಸಿದೆ.