ಸುರತ್ಕಲ್: ಇಲ್ಲಿನ ಪೇಟೆ ಮಾರುಕಟ್ಟೆ ಸುಮಾರು 120 ಕೋ.ರೂ. ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿದ್ದು, ಹಳೇ ಮಾರುಕಟ್ಟೆ ಸ್ಥಳಾಂತರ ಪ್ರಕ್ರಿಯೆ ನ.1ರಂದು ಆರಂಭಗೊಳ್ಳಲಿದೆ.
ಇದರಲ್ಲಿ ಹಳೆ ಸಂತೆ ಮಾರುಕಟ್ಟೆ ಹಾಗೂ ಮುಡಾ ಮಾರುಕಟ್ಟೆಯೂ ಸೇರಿದೆ. ಸುರತ್ಕಲ್ ಮೈದಾನದಲ್ಲಿ 231 ತಾತ್ಕಾಲಿಕ ಅಂಗಡಿ ಶೆಡ್‌ಗಳನ್ನು ನಿರ್ಮಿಸಲಾಗಿದೆ.ವಿದ್ಯುತ್, ನೀರು, ಇಂಟರ್ ಲಾಕ್ ವ್ಯವಸ್ಥೆಯನ್ನು ಅಂಗಡಿಗಳಿಗೆ ನೀಡಲಾಗಿದೆ. ಹಳೇ ಮಾರುಕಟ್ಟೆಯಲ್ಲಿ ನೋಂದಣಿ ಹೊಂದಿರುವ ಅಂಗಡಿಗಳನ್ನು ಗುರುತಿಸಿ, ಶೆಡ್‌ಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಹಳೇ ಮಾರುಕಟ್ಟೆ 40 ಚದರ ಅಡಿಗಳಷ್ಟಿದ್ದರೆ ಹೊಸ ಮಾರುಕಟ್ಟೆಯನ್ನು 60 ಚದರ ಅಡಿಗಳಂತೆ ನಿರ್ಮಿಸಲಾಗಿದೆ. ಪ್ರತಿಯೊಂದಕ್ಕೂ ಶೆಟರ್ ಅಳವಡಿಸಿ ಭದ್ರತೆ ನೀಡಲಾಗಿದೆ. ತರಕಾರಿ, ಹಣ್ಣು ಹಂಪಲು, ಹೂ, ಪ್ಲಾಸ್ಟಿಕ್ ವಸ್ತುಗಳು, ಚಪ್ಪಲಿ ಅಂಗಡಿಗಳು ಇಲ್ಲಿದ್ದು ಎಲ್ಲವೂ ಸ್ಥಳಾಂತರಗೊಳ್ಳಲಿದೆ.
ಮೀನು ಮಾರುಕಟ್ಟೆಗೂ ಪ್ರತ್ಯೇಕ ಶೆಡ್‌ಗಳ ನಿರ್ಮಾಣವಾಗಿದೆ. 1.50 ಕೋ. ರೂ. ವೆಚ್ಚದಲ್ಲಿ ತಾತ್ಕಾಲಿಕ ಮಾರುಕಟ್ಟೆ ಸುರತ್ಕಲ್‌ನ ಮೈದಾನದಲ್ಲಿ ನಿರ್ಮಾಣವಾಗಿದ್ದು, ಕಾಮಗಾರಿ ಬಹುತೇಕ ಮುಗಿದಿದೆ. ಇಂಟರ್‌ಲಾಕ್ ಅಳವಡಿಕೆ ಮಾಡಲಾಗುತ್ತಿದೆ. ಮಾರುಕಟ್ಟೆಗೆ ಬರುವ ಗ್ರಾಹಕರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿದ್ದರೂ, ಚತುಷ್ಪಥ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲ್ಲಿಸಲು ಸಂಚಾರಿ ಪೊಲೀಸರು ಗುರುತು ಹಾಕಿ ನೀಡಲಿದ್ದಾರೆ.
ಕೃಷ್ಣಾಪುರ ರಸ್ತೆಯಲ್ಲಿ 40 ಲ.ರೂ. ವೆಚ್ಚದಲ್ಲಿ ಬಸ್ ತಂಗುದಾಣ ನಿರ್ಮಾಣವಾಗಲಿದ್ದು, ಇಲ್ಲಿಯೂ ಹಿಂಬದಿ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬಹುದಾಗಿದೆ.
ಕಾಮಗಾರಿ ಬಹುತೇಕ ಪೂರ್ಣ
ಸುರತ್ಕಲ್‌ನಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇಂಟರ್ ಲಾಕ್ ಅಳವಡಿಕೆ ಆರಂಭವಾಗಿದೆ. ನ.1ಕ್ಕೆ ತಾತ್ಕಾಲಿಕ ಮಾರುಕಟ್ಟೆ ಸ್ಥಳಾಂತರಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ.
ರವಿಶಂಕರ್, ವಲಯ ಆಯುಕ್ತರು,
ಸುರತ್ಕಲ್ ವಿಭಾಗ