Advertisement

ಕಣ್ಮನ ತಣಿಸಿದ ಒಡಿಸ್ಸಿ ನೃತ್ಯ 

12:30 AM Feb 15, 2019 | Team Udayavani |

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು ಮತ್ತು ಡಾ| ಕೋಟ ಶಿವರಾಮ ಕಾರಂತ ಸಂಶೋಧನ ಮತ್ತು ಅಧ್ಯಯನ ಸಂಸ್ಥೆ (ರಿ.) ಸಾಲಿಗ್ರಾಮ ಇವರ ಸಹಯೋಗದಲ್ಲಿ ಕಾರಂತರ ಇಪ್ಪತ್ತೆರಡನೆಯ ಸ್ಮತಿ ದಿನಾಚರಣೆಯ ಪ್ರಯುಕ್ತ ಸಂಸ್ಥೆಯ ರಂಗ ವೇದಿಕೆಯಲ್ಲಿ ಬೆಂಗಳೂರಿನ ನೃತ್ಯಂತರ ಅಕಾಡೆಮಿ ಆಫ್ ಪರ್‌ಫಾರ್ಮಿಂಗ್‌ ಅರ್ಟ್ಸ್ ಇದರ ಕಲಾವಿದೆಯರಾದ ಮಧುಲಿತಾ ಮಹಾಪಾತ್ರ ಮತ್ತು ಶಿಷ್ಯೆ ಸಹನಾ ಅರ್‌. ಮಯ್ಯ ಇವರಿಂದ ಒಡಿಸ್ಸಿ ನೃತ್ಯ ಕಾರ್ಯಕ್ರಮ ಜರಗಿತು. ಮೊದಲಿಗೆ ಧ್ಯಾಯೇ ಸುಭರ್ಣಾ ಭರ್ಣ ಎನ್ನುವ ನೃತ್ಯ ರೂಪಕದಿಂದ ಆರಂಭಿಸಿದ್ದು, ಇದು ಮಂಗಳಕರವಾಗಿರುವ ದುರ್ಗಾ ದೇವಿಯನ್ನು ಅಹ್ವಾನಿಸುವುದಾಗಿದೆ. ಬಂಗಾರದ ವರ್ಣದಿಂದ ಶೋಭಿಸುತ್ತಿರುವ ಓ ದೇವಿಯೇ ನಿನ್ನ ಮೂರನೆಯ ಕಣ್ಣು ಭವಿಷ್ಯವನ್ನು ಕಾಣುತ್ತಿದೆ ಮತ್ತು ನಿನ್ನ ನಗೆಯು ಸಂತೋಷದಾಯಕವಾಗಿದೆ. ಕೈಯ್ಯಲ್ಲಿ ಶಂಖ-ಚಕ್ರವನ್ನು ಧರಿಸಿರುವ ನೀನು ಶಕ್ತಿ ಸ್ವರೂಪಿಣಿಯಾಗಿ, ಮಹಿಷಾಸುರ ಮರ್ದಿನಿ ಎನಿಸಿಕೊಂಡಿರುವೆ. ಹಾಗೆಯೇ ಪಂಚಭೂತಗಳ ಸರ್ವಶಕ್ತಿಯಾದ ನಿನ್ನನ್ನು ಶಾಂತಿ, ನೆಮ್ಮದಿಗಾಗಿ ಪೂಜಿಸುತ್ತಿರುವೆವು ಎನ್ನುವುದನ್ನು ನೃತ್ಯದ ಮೂಲಕ ಈರ್ವರೂ ಸೊಗಸಾಗಿ ಅನಾವರಣಗೊಳಿಸಿದರು. ಇದರ ಸಂಗೀತ ನಿರ್ದೇಶನ ಗುರು ಗೋಪಾಲಚಂದ್ರ ಪಾಂಡೆ ಮತ್ತು ನೃತ್ಯ ಸಂಯೋಜನೆ ಗುರು ಗಂಗಾಧರ ಪ್ರಧಾನ್‌ ಹಾಗೂ ಗುರು ಅರುಣ್‌ ಮೊಹಂತಿ ಆಗಿದ್ದರು. ಎರಡನೆಯ ನೃತ್ಯ ಜನಸಮ್ಮೊàಹಿನಿ ಪಲ್ಲವಿಯಾಗಿದ್ದು, ಇದು ಒಡಿಸ್ಸಿಯ ಮಾರ್ಗಂನಲ್ಲಿ ಆಕರ್ಷಕವಾದ ಭಾಗ ಮತ್ತು ಸುಂದರ ಸಾಹಿತ್ಯ ಭರಿತ ಶುದ್ಧ ನೃತ್ಯವಾಗಿದೆ. ಮಧುರ ಮತ್ತು ಲಯದ ಅಂಶಗಳಿಗೆ ಸಮಾನ ಒತ್ತು ಕೊಡಲಾಗಿದೆ. 

Advertisement

ಹೂ ಬಳ್ಳಿಯ ತರಹ ಪಲ್ಲವಿಯೂ ನಿಧಾನವಾಗಿ ಅದರೂ ಖಚಿತವಾಗಿ ಸಂಕೀರ್ಣತೆಯಿಂದ ಬೆಳೆಯುತ್ತದೆ. ಇದರಲ್ಲಿನ ಹಾವಭಾವಗಳು ಹಾಗೂ ದೇಹ ಚಲನೆಗಳು ಯಾವುದೇ ಕಥೆ ಅಧಾರಿತವಾಗಿರುವುದಿಲ್ಲ, ಬದಲಿಗೆ ರಚನೆಯ ಸೌಂದರ್ಯವನ್ನು ಹೆಚ್ಚಿಸಲು ಬಳಸಲಾಗುತ್ತದೆ. ಪಲ್ಲವಿಯು ಮಧುರವಾದ ಒಡಿಸ್ಸಿಯ ರಾಗವನ್ನು ಅಧರಿಸಿದ್ದು ಮತ್ತು ಅದರ ಶೀರ್ಷಿಕೆ ರಾಗದ ಹೆಸರಿನಲ್ಲಿಯೇ ಇರುತ್ತದೆ. ಕೆಲವು ಪ್ರಮುಖ ಪಲ್ಲವಿಗಳು ಶಂಕರಾಭರಣ, ಅರಭಿ, ಕಲ್ಯಾಣ, ರಾಘೇಶ್ರೀ, ಬಸಂತ ಹಾಗೂ ಅನೇಕ ಹೊಸ ಪಲ್ಲವಿಗಳ ಸಾಹಿತ್ಯ ಹಾಗೂ ನೃತ್ಯ ಸಂಯೋಜನೆಯನ್ನು ವಿಭಿನ್ನ ರಾಗಗಳಿಗೆ ರಚನೆ ಮಾಡಲಾಗಿದೆ. ಹೆಸರೇ ಸೂಚಿಸುವಂತೆ, ಈ ನಿರ್ಧಿಷ್ಟ ಪಲ್ಲವಿ ರಾಗ ಜನಸಮ್ಮೊàಹಿನಿ ಹಾಗೂ ಏಕತಾಳದಲ್ಲಿ ಸಂಯೋಜಿಸಲಾಗಿದೆ. ಇದರ ನೃತ್ಯವನ್ನು ಮಧುಲಿತಾ ಮಹಾಪಾತ್ರ ಸಂಯೋಜಿಸಿದ್ದರು. ಮುಂದಿನ ನೃತ್ಯ ಹದಿನಾರನೇ ಶತಮಾನದ ಭಕ್ತ ಕವಿ ವಲವಲಭಾಚಾರ್ಯರು ಬರೆದ ಮಧುರಾಷ್ಟಕ‌ಂ. ಇದು ಸಾಂಪ್ರದಾಯಿಕ ಸಂಸೃತ ಸಂಯೋಜನೆಯಾಗಿದ್ದು, ತೆಜೋಮಯನಾದ ಕೃಷ್ಣನ ಸೌಂದರ್ಯವನ್ನು ಅಧರಿಸಿದೆ. ಕೃಷ್ಣನ ಅದರವು, ಮುಖ, ಕಣ್ಣುಗಳು ಹಾಗೂ ಅವನ ಮುಗುಳ್ನಗೆ ಎಲ್ಲವೂ ಸುಂದರಮಯವಾಗಿರುತ್ತದೆ. ಅವನು ನಡೆವ ರೀತಿ, ತಿನ್ನುವ ರೀತಿ ಹಾಗೂ ನಿದ್ರಿಸುವ ರೀತಿ ಎಲ್ಲವೂ ಸುಂದರಮಯ. ಅವನ ಪಾದದ ಅಡಿಯ ಧೂಳಿನ ಕಣಗಳೂ ಸುಂದರ. ಶಿಶುವಾದ ಕೃಷ್ಣ ತನ್ನ ಸ್ನೇಹಿತರೊಂದಿಗೆ ಆಟವಾಡುವುದು, ಗೋಪಿಯರ ವಸ್ತ್ರ ಅಪಹರಿಸುವುದು, ಬೆಣ್ಣೆ ಕದಿಯುವುದು, ಹೋಳಿ ಆಡುವುದು ಮತ್ತು ದುಷ್ಟ ಕಾಳಿಂಗನನ್ನು ಸದೆಬಡೆದಿದ್ದು ಎಲ್ಲವೂ ಸುಂದರಮಯ ಎನ್ನುವುದನ್ನು ವಿಸ್ತಾರವಾಗಿ ತೋರಿಸಲಾಗಿದೆ. ಇದು ಮಧುಲಿತಾರ ಸೋಲೋ ನೃತ್ಯವಾಗಿದ್ದು, ಸಂಗೀತ ಸಂಯೋಜನೆ ಗುರು ಹರಿಹರಪಾಂಡ ಮತ್ತು ನೃತ್ಯ ಸಂಯೋಜನೆ ಗುರು ಪಂಕಜಚರಣದಾಸ್‌ ಅವರದ್ದಾಗಿತ್ತು. ಕೊನೆಯಲ್ಲಿ ಪುರಂದರದಾಸರ ಹರಿಸ್ಮರಣೆ ಮಾಡೋ ನಿರಂತರ ಎನ್ನುವ ಕೃತಿ ಅಧರಿಸಿದ ನೃತ್ಯವಿದ್ದಿತು. ಇಲ್ಲಿ ಪ್ರಭು ವಿಷ್ಣುವಿನ ಸ್ಮರಣೆ ಮಡುತ್ತಾ ಕಾರ್ಯಕ್ರಮವು ಆರಂಭಗೊಳ್ಳುತ್ತದೆ. ಮೋಕ್ಷ ಪಡೆಯಲು ನಿರಂತರ ಹರಿಧ್ಯಾನವೊಂದೇ ಸಾಕು. ತನ್ನನ್ನು ಆಶ್ರಯಿಸಿದವರನ್ನು ರಕ್ಷಿಸುತ್ತಾನೆ ಎನ್ನುವುದರೊಂದಿಗೆ ಹರಿಯ ದಯೆಯಿಂದಾಗಿ ಮೊಸಳೆಯ ಹಿಡಿತದಿಂದ ಪಾರಾಗುವ ಕರಿರಾಜ, ಪ್ರಹ್ಲಾದನ ಭಕ್ತಿಗೆ ಮೆಚ್ಚಿ ಅವನನ್ನು ಕಾಪಾಡಿ ಹಿರಣ್ಯಕಶಿಪುವನ್ನು ಸಂಹರಿಸಿದ ಮತ್ತು ದ್ರೌಪದಿಗೆ ಅಕ್ಷಯಾಂಬರ ನೀಡಿದ, ಹಾಗೆಯೇ ದಶಾವತಾರವನ್ನು ಬಹಳ ಮನೋಜ್ಞವಾಗಿ ತೋರಿಸಲಾಗಿತ್ತು. 

 ಕೆ. ದಿನಮಣಿ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next