ಹೊಸದಿಲ್ಲಿ: ಒಡಿಶಾದ ಬುಡಕಟ್ಟು ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಧನ್ಯವಾದ ರೂಪದಲ್ಲಿ 100 ರೂ ಹಸ್ತಾಂತರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ ಪ್ರಧಾನಿ ಮೋದಿಯವರು, ‘ನಾರಿ ಶಕ್ತಿ’ಯ ಆಶೀರ್ವಾದವು ‘ವಿಕಸಿತ ಭಾರತ’ವನ್ನು ನಿರ್ಮಿಸುವ ಕೆಲಸ ಮಾಡಲು ಪ್ರೇರೇಪಿಸುತ್ತಿದೆ ಎಂದು ಹೇಳಿದ್ದಾರೆ.
ಒಡಿಶಾದ ಸುಂದರ್‌ಗಢ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಪಕ್ಷದ ಸದಸ್ಯತ್ವ ಅಭಿಯಾನದ ಬಿಜೆಪಿ ಉಪಾಧ್ಯಕ್ಷ ಬೈಜಯಂತ್ ಜಯ್ ಪಾಂಡಾ ಅವರು ಬುಡಕಟ್ಟು ಮಹಿಳೆಯನ್ನು ಭೇಟಿಯಾದರು. ಈ ವೇಳೆ ಆಕೆ “ಧನ್ಯವಾದಗಳನ್ನು ತಿಳಿಸಲು” ಹಣವನ್ನು ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಪಾಂಡಾ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
“ಈ ಆದಿವಾಸಿ ಮಹಿಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ‘ಧನ್ಯವಾದಗಳನ್ನು ತಿಳಿಸಲು’ ಒತ್ತಾಯಿಸಿ ನನಗೆ 100 ರೂ ನೀಡಿದರು. ಇದು ಒಡಿಶಾ ಮತ್ತು ಭಾರತ ಅನುಭವಿಸುತ್ತಿರುವ ರೂಪಾಂತರದ ಪ್ರತಿಬಿಂಬವಾಗಿದೆ” ಎಂದು ಐದು ಬಾರಿ ಸಂಸದರಾಗಿದ್ದ ಬೈಜಯಂತ್ ಜಯ್ ಪಾಂಡಾ ತಮ್ಮ ಪೋಸ್ಟ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಎಕ್ಸ್ ನಲ್ಲಿನ ಪೋಸ್ಟ್‌ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ, “ಈ ವಾತ್ಸಲ್ಯದಿಂದ ತುಂಬಾ ಸಂತಸವಾಗಿದೆ. ನನ್ನನ್ನು ಯಾವಾಗಲೂ ಆಶೀರ್ವದಿಸುತ್ತಿರುವುದಕ್ಕಾಗಿ ನಾನು ನಮ್ಮ ನಾರಿ ಶಕ್ತಿಗೆ ನಮಸ್ಕರಿಸುತ್ತೇನೆ. ಅವರ ಆಶೀರ್ವಾದವು ವಿಕಸಿತ ಭಾರತವನ್ನು ನಿರ್ಮಿಸಲು ಕೆಲಸ ಮಾಡಲು ನನಗೆ ಸ್ಫೂರ್ತಿ ನೀಡುತ್ತದೆ” ಎಂದು ಬರೆದುಕೊಂಡಿದ್ದಾರೆ.