ಭುವನೇಶ್ವರ: ಸರ್ಕಾರದಿಂದ ಗುದ್ದಲಿ ಪೂಜೆಯಾಗಿದ್ದರೂ ನಿರ್ಮಾಣವಾಗದ ಸೇತುವೆಯನ್ನು ದೋಣಿಗಾರನೊಬ್ಬ ತನ್ನ ಜಮೀನನ್ನೇ ಅಡವಿಟ್ಟು, ನಿರ್ಮಾಣ ಮಾಡಿದ್ದಾನೆ.
ಒಡಿಶಾದ ಕೊರಾಪುತ್ ಜಿಲ್ಲೆಯ ಬಸುಲಿ ಗ್ರಾಮದ ಜಯದೇವ್ ಭತ್ರಾ(55) ಈ ಕೆಲಸ ಮಾಡಿರುವ ದೋಣಿಗಾರ. ಕೊರಾಪುತ್ ಜಿಲ್ಲೆ ಮತ್ತು ನಬರಂಗ್‌ಪುರ ಜಿಲ್ಲೆಯ ನಡುವೆ ಹರಿಯುತ್ತಿರುವ ಇಂದ್ರಾವತಿ ನದಿಯಲ್ಲಿ ಜಯದೇವ್ ದೋಣಿಗಾರನಾಗಿ ಕೆಲಸ ಮಾಡುತ್ತಿದ್ದಾನೆ.
ಆದರೆ ಪ್ರತಿನಿತ್ಯ ಜನರು ದೋಣಿಗಾಗಿ ಪರದಾಡುವುದನ್ನು ಕಂಡು ದುಃಖೀಸಿದ್ದ ಆತ, ಮೂರು ವರ್ಷಗಳ ಹಿಂದೆಯೇ ಬಿದಿರಿನ ಸೇತುವೆ ಮಾಡುವ ಕಾಮಗಾರಿಗೆ ಕೈ ಹಾಕಿದ್ದಾನೆ. ಸೇತುವೆಗೆಂದು ತನ್ನ 3 ಎಕರೆ ಜಮೀನನ್ನು 1 ಲಕ್ಷ ರೂಪಾಯಿಗೆ ಅಡವಿಟ್ಟಿದ್ದಾನೆ. ಬೈಕ್‌ನ್ನು ತೆಗೆದುಕೊಂಡು ಹೋಗುವಂತಹ ಸೇತುವೆ ನಿರ್ಮಿಸಿ ಅದನ್ನು ನ.7ರಂದು ಉದ್ಘಾಟಿಸಿದ್ದಾನೆ.
ಇದನ್ನೂ ಓದಿ:ಬಾಂಬೆ ಹೈ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ
ಈ ಸೇತುವೆ ನಿರ್ಮಾಣಕ್ಕೆಂದು 2016ರಲ್ಲಿಯೇ ರಾಜ್ಯ ಸರ್ಕಾರ ಗುದ್ದಲಿ ಪೂಜೆ ನಡೆಸಿ, 2018ರೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿತ್ತು. ಅದಾದ ನಂತರ ಗಡುವನ್ನು 2019ಕ್ಕೆ, 2021ಕ್ಕೆ ವಿಸ್ತರಿಸಲಾಗಿತ್ತು. ಆದರೆ ಇದುವರೆಗೂ ಅಲ್ಲಿ ಸಣ್ಣ ಕಾಮಗಾರಿಯೂ ಆರಂಭವಾಗಿಲ್ಲ ಎನ್ನಲಾಗಿದೆ.