ಒಡಿಶಾ: ಒಡಿಶಾದ ಬಾಲಾಸೋರ್ ನಲ್ಲಿ ಸಂಭವಿಸಿದ ಭೀಕರ ರೈಲು ಅವಘಡದಲ್ಲಿ ಸುಮಾರು 261 ಮಂದಿ ಮೃತಪಟ್ಟಿದ್ದು 900 ಕ್ಕೂ ಹೆಚ್ಚು ಮಂದಿ ಗಾಯಗೊಂಡು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ನೀಡಲಾಗುತ್ತಿದೆ, ಗಾಯಗೊಂಡ ಗಾಯಾಳುಗಳಿಗೆ ರಕ್ತದ ಅವಶ್ಯಕತೆ ಎದುರಾಗಿದ್ದು ಇದನ್ನು ಅರಿತ ಜಿಲ್ಲೆಯ ಸಾವಿರಾರು ಮಂದಿ ಆಸ್ಪತ್ರೆಯ ಮುಂದೆ ಜಮಾಯಿಸಿ ರಕ್ತದಾನ ಮಾಡಲು ಮುಂದಾಗಿ ಮಾನವೀಯತೆ ಮೆರೆದಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿಗಳು ದಾನಿಗಳಿಂದ 500 ಯೂನಿಟ್ ನಷ್ಟು ರಕ್ತಗಳನ್ನು ಸಂಗ್ರಹಿಸಿದ್ದಾರೆ ಅಲ್ಲದೆ ರಕ್ತದಾನ ಮಾಡಿದ ಎಲ್ಲಾ ದಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ರೈಲು ಅವಘಡದಲ್ಲಿ ಗಾಯಗೊಂಡ ಹೆಚ್ಚಿನ ಗಾಯಾಳುಗಳಿಗೆ ರಕ್ತದ ಅವಶ್ಯಕತೆ ಇದ್ದು ಈ ವಿಚಾರ ಅರಿತ ಜಿಲ್ಲೆಯ ಸಾವಿರಾರು ಮಂದಿ ತಾವೇ ಸ್ವತಃ ಆಸ್ಪತ್ರೆಗೆ ಬಂದು ರಕ್ತದಾನ ಮಾಡಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದ್ದಾರೆ.
ಶನಿವಾರ ರಾತ್ರಿ ಒಡಿಶಾದ ಬಾಲಾಸೋರ್ ಬಳಿ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳ ನಡುವೆ ಭೀಕರ ಅವಘಡ ಸಂಭವಿಸಿ ಸಾಕಷ್ಟು ಸಾವುನೋವು ಸಂಭವಿಸಿದ್ದು ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಗಾಯಾಳುಗಳೇ ತುಂಬಿಕೊಂಡಿದ್ದರೆ. ವೈದ್ಯರ ತಂಡದಿಂದ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ.