ಕಿಯೋಂಜರ್ : ಒಡಿಶಾದ ಬಿಜೆಪಿ ಶಾಸಕ ಮತ್ತು ಚೀಫ್ ವಿಪ್ ಆಗಿರುವ ಮೋಹನ್ ಚರಣ್ ಮಾಝಿ ಅವರು ಬಾಂಬ್ ದಾಳಿಯಲ್ಲಿ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಭಾನುವಾರ ನಡೆದಿದೆ.
ಕಿಯೋಂಜರ್ ಪೊಲೀಸ್ ಠಾಣಾ ವ್ಯಾಪ್ತಿಯ ಮಂಡುವಾ ಎಂಬಲ್ಲಿ ದಾಳಿ ನಡೆದಿದ್ದು, ಶಾಸಕ ಮೋಹನ್ ಚರಣ್ ಮಾಝಿ ಅವರು ಕಾರ್ಮಿಕ ಸಂಘಟನೆಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮನೆಗೆ ವಾಪಾಸಾಗುತ್ತಿದ್ದ ವೇಳೆ ಬೈಕ್ ನಲ್ಲಿ ಬೆನ್ನಟ್ಟಿದ ದುಷ್ಕರ್ಮಿಗಳಿಬ್ಬರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇಬ್ಬರು ದುಷ್ಕರ್ಮಿಗಳು ಬಾಂಬ್ ಎಸೆದಿದ್ದು, ಮೋಹನ್ ಚರಣ್ ಮತ್ತು ಭದ್ರತಾ ಸಿಬ್ಬಂದಿ ಪಾರಾಗಿದ್ದು, ಕಾರು ಜಖಂಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನನಗೆ 20 ವರ್ಷಗಳಿಂದ ರಾಜಕೀಯದಲ್ಲಿ ಸೈದ್ಧಾಂತಿಕ ವಿರೋಧಿಗಳು ಇದ್ದಾರೆ ಆದರೆ, ವೈಯಕ್ತಿಕ ಬದುಕಿನಲ್ಲಿ ಯಾರೂ ವಿರೋಧಿಗಳಿಲ್ಲ ಎಂದು ಬುಡಕಟ್ಟು ಸಮುದಾಯದ ಶಾಸಕ ಮೋಹನ್ ಚರಣ್ ಮಾಧ್ಯಮಗಳಿಗೆ ಘಟನೆ ಬಳಿಕ ಹೇಳಿಕೆ ನೀಡಿದ್ದಾರೆ.
ಸ್ಥಳೀಯ ಬಿಜೆಡಿ ಪಕ್ಷದ ನಾಯಕರು ಈ ದಾಳಿ ಮಾಡಿಸಿದ್ದಾರೆ ಎಂದು ಮೋಹನ್ ಚರಣ್ ಆರೋಪಿಸಿದ್ದಾರೆ.
ಮೋಹನ್ ಚರಣ್ ಅವರ ಬೆಂಬಲಿಗರು ಆಕ್ರೋಶ ಹೊರಹಾಕಿದ್ದು, ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.