ಭುವನೇಶ್ವರ: ತೀವ್ರ ಆತಂಕಕ್ಕೆ ಕಾರಣವಾಗಿದ್ದ ಫೋನಿ ಹೆಸರಿನ ಚಂಡಮಾರುತವು ಶುಕ್ರವಾರ ಬೆಳಗ್ಗೆ ಪುರಿ ಜಿಲ್ಲೆಯ ಕರಾವಳಿಗೆ ಅಪ್ಪಳಿಸಿದ್ದು, ಒಡಿಸ್ಸಾದಲ್ಲಿ ಭಾರೀ ಗಾಳಿ ಮಳೆ ಮತ್ತು ಭೂಕುಸಿತಗಳು ಸಂಭವಿಸಿದ್ದು, ಈಗಾಗಲೇ ಐವರು ಬಲಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಪರಿಹಾರಕ್ಕಾಗಿ 1,000 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನಾನು ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯುತ್ತಿದ್ದೇನೆ. ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಹೇಳಿದ್ದಾರೆ.
ಚಂಡಮಾರುತದ ಪರಿಣಾಮದಿಂದ ಉಂಟಾಗುತ್ತಿರುವ ಭಾರೀ ಮಳೆಗೆ ಪುರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ತಲೆದೋರಿದೆ. ಯಾವುದೆ ಅಪಾಯಗಳನ್ನು ಸಮರ್ಥವಾಗಿ ಎದುರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಸರ್ವಸನ್ನದ್ಧವಾಗಿ ಈ ಭಾಗದಲ್ಲಿ ಬೀಡುಬಿಟ್ಟಿವೆ.
13 ಜಿಲ್ಲೆ ಗಳ ಸೈಕ್ಲೋನ್ ಅಪಾಯ ಎದುರಾಗಿರುವ ಪ್ರದೇಶಗಳಲ್ಲಿನ 11.5 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಭಾರೀ ಗಾಳಿ ಮತ್ತು ಮಳೆ ಬೀಳುತ್ತಿದ್ದು, ಪುರಿಯ ಸಮೀಪದ ಗೋಪಾಲಪುರದಲ್ಲಿ ಭೂಕುಸಿತ ಸಂಭವಿಸಿದೆ. ಇನ್ನಷ್ಟು ಕಡೆ ಭೂಕುಸಿತ ಸಂಭವಿಸುವ ಆತಂಕ ಎದುರಾಗಿದೆ. ಹಲವೆಡೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ.
ಒಟ್ಟು 200 ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಒಡಿಶಾ ಸಂಪೂರ್ಣ ಸ್ತಬ್ಧವಾಗಿದೆ. ತಂಡಗಳು ಸರ್ವ ಸನ್ನದ್ಧವಾಗಿದ್ದು, ಯವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ದವಾಗಿವೆ.
ಆಂಧ್ರದ ಕರಾವಳಿಯಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿಯೂ ಭಾರೀ ಮಳೆ ಬೀಳುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.