ಹರಾರೆ: ಗುರುವಾರ ಬಲವಾಯೋದಲ್ಲಿ ನಡೆಯಲಿರುವ ನಿರ್ಣಾಯಕ ಸೂಪರ್-6 ಪಂದ್ಯದಲ್ಲಿ ಸ್ಕಾಟ್ಲೆಂಡ್ ಮತ್ತು ನೆದರ್ಲೆಂಡ್ಸ್ ಸೆಣಸಾಡಲಿದ್ದು ಯಾರು ವಿಶ್ವಕಪ್ ಪ್ರವೇಶಿಸಲಿದ್ದಾರೆ ಎನ್ನುವುದು ನಿರ್ಣಯವಾಗಲಿದೆ.
ಆತಿಥೇಯ ಜಿಂಬಾಬ್ವೆಯ ವಿಶ್ವಕಪ್ ಕನಸು ಸ್ಕಾಟ್ಲೆಂಡ್ ಹೊಡೆತದಿಂದ ಛಿದ್ರಗೊಂಡಿದ್ದು, 31 ರನ್ನುಗಳ ಸೋಲುಂಡ ಜಿಂಬಾಬ್ವೆ ಕೂಟದಿಂದ ನಿರ್ಗಮಿಸಿದೆ. ನಿರ್ಣಾಯಕ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ಜಿಂಬಾಬ್ವೆ ಎದುರು ಜಯ ಸಾಧಿಸಿ ವಿಶ್ವಕಪ್ ಪ್ರವೇಶದ ಹಾದಿ ಸುಗಮ ಗೊಳಿಸಿಕೊಂಡಿದೆ. ಅದೀಗ 6 ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೆ ಏರಿದೆ. ಪ್ಲಸ್ ರನ್‌ರೇಟ್ ಹೊಂದಿದೆ (0.296). ಜಿಂಬಾಬ್ವೆ ಕೂಡ 6 ಅಂಕ
ಹೊಂದಿದೆಯಾದರೂ ರನ್‌ರೇಟ್ ಮೈನಸ್‌ನಲ್ಲಿದೆ (-0.099). ಅಲ್ಲದೇ ಜಿಂಬಾಬ್ವೆ ಎಲ್ಲ ಪಂದ್ಯಗಳನ್ನು ಆಡಿಮುಗಿಸಿದೆ.
ಸ್ಕಾಟ್ಲೆಂಡ್ ಮತ್ತು ನೆದರ್ಲೆಂಡ್ಸ್ ವಿರುದ್ಧ ನಡೆಯಲಿರುವ ಪಂದ್ಯದ ಫಲಿತಾಂಶ ನಿರ್ಣಾಯಕವಾಗಲಿದೆ. ಸ್ಕಾಟ್ಲೆಂಡ್ ಗೆ ಪಂದ್ಯದಲ್ಲಿ ಸೋತರೂ ಅರ್ಹತೆ ಪಡೆಯುವ ಸಾಧ್ಯತೆ ಇದೆ ಆದರೆ ಸೋಲಿನ ಅನಂತರ 30 ರನ್ ಗಳ ಒಳಗೆ ಇರಬೇಕು.
ನೆದರ್ಲೆಂಡ್ಸ್ 0.180 ರನ್ ರೇಟ್ ಹೊಂದಿದ್ದು, 4 ಅಂಕಗಳೊಂದಿಗೆ 4 ನೇ ಸ್ಥಾನದಲ್ಲಿದೆ. ಭರ್ಜರಿ ಗೆಲುವು ಸಾಧಿಸಿದರೆ ಮಾತ್ರ ಅರ್ಹತೆ ಪಡೆಯುವ ಸಾಧ್ಯತೆ ಇದೆ. 30 ರನ್ ಗಳಿಗಿಂತ ಹೆಚ್ಚಿನ ಅಂತರದ ಗೆಲುವು ಸಾಧಿಸುವ ಅಗತ್ಯವಿದೆ.
ಜುಲೈ 9 ರಂದು ಶ್ರೀಲಂಕಾ ವಿರುದ್ಧ ಅರ್ಹತಾ ಕೂಟದ ಫೈನಲ್ ಪಂದ್ಯ ನಡೆಯಲಿದೆ.