ತಿರುವನಂತಪುರ: ಭಾರತ ತಂಡವು ರವಿವಾರ ನಡೆದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಶ್ರೀಲಂಕಾ ತಂಡದೆದುರು ದಾಖಲೆ ಅಂತರದ ಜಯ ಸಾಧಿಸಿ ಸರಣಿ ಕ್ಲೀನ್ ಸ್ವೀಪ್ ಗೈದಿದೆ.
ಟಾಸ್ ಗೆದ್ದ ಭಾರತಕ್ಕೆ ಗಿಲ್ ಮತ್ತು ರೋಹಿತ್ ಭರ್ಜರಿ ಆರಂಭ ಒದಗಿಸಿ ಕೊಟ್ಟರು. ಮೊದಲ ವಿಕೆಟ್ ಗೆ 95 ರನ್ ಪೇರಿಸಿದರು. ರೋಹಿತ್ 42 ರನ್ ಗಳಿಸಿ ಔಟಾದರೆ, ಅಮೋಘ ಆಟವಾಡಿದ ಗಿಲ್ 97 ಎಸೆತದಲ್ಲಿ 14 ಬೌಂಡರಿ ಎರಡು ಸಿಕ್ಸರ್ ನೆರವಿನಿಂದ 116 ರನ್ ಗಳಿಸಿದರು. ಅಯ್ಯರ್ 38 ರನ್ ಕೊಡುಗೆ ಸಲ್ಲಿಸಿದರು.
ಅತ್ಯಮೋಘ ಆಟವಾಡಿದ ವಿರಾಟ್ ಕೊಹ್ಲಿ 166 ರನ್ ಗಳಿಸಿ ಅಜೇಯರಾಗಿ ಉಳಿದರು. ಹಲವು ದಾಖಲೆಗಳ ಪಟ್ಟಿಗೆ ಹೊಸದನ್ನೂ ಸೇರಿಸಿ ಕೊಂಡರು.
ಇದನ್ನೂ ಓದಿ : ತಿರುವನಂತಪುರಂನಲ್ಲಿ ವಿರಾಟ್-ಗಿಲ್ ಶತಕದಬ್ಬರ: ಲಂಕಾಗೆ ಕಠಿಣ ಗುರಿ
ಇವರಿಬ್ಬರ ಶತಕದ ನೆರವಿನಿಂದ ಭಾರತ ತಂಡ ಐದು ವಿಕೆಟ್ ನಷ್ಟಕ್ಕೆ 390 ರನ್ ಗಳಿಸಿ ಸರಣಿ ಕಳೆದುಕೊಂಡಿದ್ದ ಲಂಕಾಕ್ಕೆ ಕಠಿಣ ಗುರಿ ಮುಂದಿಟ್ಟಿತ್ತು.391 ರನ್ ಗಳ ಗುರಿ ಬೆನ್ನಟ್ಟಿದ ಲಂಕಾ ಭಾರತದ ಬಿಗು ಬೌಲಿಂಗ್ ಗೆ ಸಿಲುಕಿ ಕೇವಲ 73 ರನ್ ಗಳಿಗೆ ಆಲೌಟಾಗುವ ಮೂಲಕ ಭಾರಿ ಸೋಲಿನ ಅಘಾತಕ್ಕೆ ಸಿಲುಕಿತು. ಭಾರತ 317 ರನ್‌ಗಳ ಜಯ ಸಾಧಿಸಿತು.
ಭಾರತದ ಪರ ಮೊಹಮ್ಮದ್ ಸಿರಾಜ್ 4 ವಿಕೆಟ್ , ಶಮಿ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರು.