ಹಂಬಂತೋಟ: ಸಾಂಘಿಕ ಪ್ರದರ್ಶನ ನೀಡಿದ ಅಫ್ಘಾನಿಸ್ಥಾನ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಭರ್ಜರಿಯಾಗಿ ಮಣಿಸಿ 1-0 ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಸರಿಯಾಗಿ 50 ಓವರ್‌ಗಳಲ್ಲಿ 268ಕ್ಕೆ ಆಲೌಟಾದರೆ, ಅಫ್ಘಾನ್ 46.5 ಓವರ್‌ಗಳಲ್ಲಿ 4 ವಿಕೆಟಿಗೆ 269 ರನ್ ಬಾರಿಸಿ ಜಯ ಸಾಧಿಸಿತು.
ಆರಂಭಕಾರ ಇಬ್ರಾಹಿಂ ಜದ್ರಾನ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಅಫ್ಘಾನ್‌ನ ಯಶಸ್ವಿ ಚೇಸಿಂಗ್‌ನಲ್ಲಿ ಮಹತ್ವದ ಪಾತ್ರ ವಹಿಸಿತು. ಭರ್ತಿ 30 ಓವರ್‌ಗಳ ತನಕ ಕ್ರೀಸ್ ಆಕ್ರಮಿಸಿಕೊಂಡ ಜದ್ರಾನ್ ಶತಕಕ್ಕೆ ಕೇವಲ 2 ರನ್ ಅಗತ್ಯವಿದ್ದಾಗ ಔಟಾದರು. ಅವರು ಎಸೆತಕ್ಕೊಂದರಂತೆ 98 ರನ್ ಬಾರಿಸಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ, 2 ಸಿಕ್ಸರ್ ಸೇರಿತ್ತು.
ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳೂ ಲಂಕಾ ದಾಳಿಯನ್ನು ದಿಟ್ಟ ರೀತಿಯಲ್ಲಿ ಎದುರಿಸಿದರು. ರೆಹಮತ್ ಶಾ 55, ನಾಯಕ ಹಶ್ಮತುಲ್ಲ ಶಾಹಿದಿ 38, ಮೊಹಮ್ಮದ್ ನಬಿ ಔಟಾಗದೆ 27 ರನ್ ಹೊಡೆದರು. ಜದ್ರಾನ್-ರೆಹಮತ್ ಜೋಡಿ ದ್ವಿತೀಯ ವಿಕೆಟಿಗೆ 146 ರನ್ ಸೇರಿಸಿ ಲಂಕಾ ಬೌಲರ್‌ಗಳಿಗೆ ಬೆವರಿಳಿಸಿದರು.
ಶ್ರಿಲಂಕಾ ಅಗ್ರ ಕ್ರಮಾಂಕದ ಕುಸಿತಕ್ಕೆ ಸಿಲುಕಿತು. 84ಕ್ಕೆ 4 ವಿಕೆಟ್ ಬಿತ್ತು. ಆದರೆ 5ನೇ ವಿಕೆಟಿಗೆ ಜತೆಗೂಡಿದ ಚರಿತ ಅಸಲಂಕ (91) ಮತ್ತು ಧನಂಜಯ ಡಿ ಸಿಲ್ವ (51) ಸೇರಿಕೊಂಡು ಹೋರಾಟವನ್ನು ಜಾರಿಯಲ್ಲಿರಿಸಿದರು.
ಅಫ್ಘಾನ್ ಪರ ಬೌಲಿಂಗ್ ದಾಳಿಗಿಳಿದ ಎಲ್ಲ 6 ಮಂದಿ ವಿಕೆಟ್ ಉರುಳಿಸಲು ಯಶಸ್ವಿಯಾದರು.