Advertisement

ತೊಡೆ ತಟ್ಟಿದ “ಒಡೆಯ’

11:32 AM Dec 15, 2019 | Lakshmi GovindaRaj |

ದರ್ಶನ್‌ ಸಿನಿಮಾದಿಂದ ಅವರ ಪಕ್ಕಾ ಅಭಿಮಾನಿಗಳು, ಅದರಲ್ಲೂ ಅವರ ಮಾಸ್‌ ಅಭಿಮಾನಿಗಳು ಏನು ಬಯಸುತ್ತಾರೆ ಹೇಳಿ? ಹೈವೋಲ್ಟೆಜ್‌ ಆ್ಯಕ್ಷನ್‌, ಪಂಚಿಂಗ್‌ ಡೈಲಾಗ್‌, ಕಲರ್‌ಫ‌ುಲ್‌ ಸಾಂಗ್‌, ರುಚಿಗೆ ತಕ್ಕಷ್ಟು ಕಾಮಿಡಿ… ಇವೆಲ್ಲದರ ಮಧ್ಯೆ ಒನ್‌ಲೈನ್‌ ಸ್ಟೋರಿ. ದರ್ಶನ್‌ ಕೂಡಾ ಸಿನಿಮಾ ಒಪ್ಪಿಕೊಳ್ಳುವ ಮುಂಚೆ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ. ಅದು ರೀಮೇಕ್‌ ಆಗಲಿ, ಸ್ವಮೇಕ್‌ ಆಗಲಿ, ಅಭಿಮಾನಿಗಳು ಇಷ್ಟಪಡುತ್ತಾರಾ ಎಂಬುದು ಮುಖ್ಯವಾಗುತ್ತದೆ.

Advertisement

ಈ ವಾರ ತೆರೆಕಂಡಿರುವ “ಒಡೆಯ’ ಚಿತ್ರ ನೋಡಿದರೆ ನಿಮಗೆ ಈ ಮೇಲಿನ ಅಂಶಗಳು ಸಿಗುತ್ತವೆ. ಅದೇ ಕಾರಣದಿಂದ ಚಿತ್ರಮಂದಿರದಲ್ಲಿ ದರ್ಶನ್‌ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ ಜೋರಾಗಿದೆ. ಅದರಲ್ಲೂ ಮಾಸ್‌ ಡೈಲಾಗ್‌ಗಳ ಮೂಲಕ ಅಭಿಮಾನಿಗಳನ್ನು ಖುಷಿಪಡಿಸಲು ಚಿತ್ರತಂಡ ಸ್ವಲ್ಪ ಹೆಚ್ಚೇ ಪ್ರಯತ್ನಿಸಿದೆ. ಹಾಗಂತ “ಒಡೆಯ’ ಚಿತ್ರ ಕೇವಲ ಮಾಸ್‌ಗಷ್ಟೇ ಸೀಮಿತನಾ ಎಂದು ನೀವು ಕೇಳುವಂತಿಲ್ಲ. ಏಕೆಂದರೆ ಮಾಸ್‌ ಅಂಶಗಳ ಹಿಂದೆ ಕ್ಲಾಸ್‌ ಇದೆ.

ಆ ಕ್ಲಾಸ್‌ ಮೂಲಕ ಮಾಸ್‌ಗೆ ದೊಡ್ಡ ದಾರಿ ಸಿಗುತ್ತದೆ. ಅದೇನೆಂಬುದನ್ನು ನೀವು ತೆರೆಮೇಲೆ ನೋಡಬಹುದು. ಅಂದಹಾಗೆ, ಇದು ತಮಿಳಿನ “ವೀರಂ’ ಸಿನಿಮಾದ ರೀಮೇಕ್‌. ಮೂಲ ಕಥೆಯನ್ನಿಟ್ಟುಕೊಂಡು ಉಳಿದಂತೆ ನೇಟಿವಿಟಿಗೆ ತಕ್ಕಂತೆ ಒಂದಷ್ಟು ಬದಲಾವಣೆ ಮಾಡಿಕೊಂಡು “ಒಡೆಯ’ನನ್ನು ಕಟ್ಟಿಕೊಡಲಾಗಿದೆ. ಅದೇ ಕಾರಣದಿಂದ ಮೊದಲರ್ಧ ಮಾಸ್‌ ಆದರೆ, ದ್ವಿತೀಯಾರ್ಧ ಕ್ಲಾಸ್‌ ಎನ್ನಬಹುದು. ಇಲ್ಲಿ ತುಂಬು ಕುಟುಂಬವೊಂದರ ಖುಷಿ ಇದೆ,

ಅದರ ಹಿಂದೆಯೇ ದೊಡ್ಡ ಕಂಟಕವೊಂದರ ಛಾಯೆಯೂ ಇದೆ. ಇವೆಲ್ಲವನ್ನು ಮೆಟ್ಟಿ ನಿಲ್ಲಲು ಗಜೇಂದ್ರ ಎಂಬ ಬಲಿಷ್ಠನೊಬ್ಬನಿದ್ದಾನೆ. ಚಿತ್ರದಲ್ಲಿ ಆ್ಯಕ್ಷನ್‌ ಅತಿಯಾಯಿತೇನೋ ಎಂಬ ಭಾವನೆ ಬರುವಾಗ ಸಾಧುಕೋಕಿಲ ಪ್ರತ್ಯಕ್ಷರಾಗುತ್ತಾರೆ. ಒಮ್ಮೆ ನೈಟಿ ಹಾಕಿಕೊಂಡು ನಗಿಸಲು ಪ್ರಯತ್ನಿಸಿದರೆ, ಇನ್ನೊಮ್ಮೆ ಪಂಚೆ ಉದುರಿಸಿಕೊಂಡು ನಗಿಸುತ್ತಾರೆ. ನಗುವ ದೊಡ್ಡ ಮನಸ್ಸು ನಿಮಗೆ ಬೇಕು.

ಅದೇ ಕಾರಣದಿಂದ ನೀವು ಒಂದು ಕಮರ್ಷಿಯಲ್‌ ಸಿನಿಮಾವನ್ನು ಇಷ್ಟಪಡುವವರಾಗಿದ್ದರೆ ನಿಮಗೆ “ಒಡೆಯ’ ಇಷ್ಟವಾಗುತ್ತದೆ. ಇನ್ನು, ಮೂಲ ಚಿತ್ರದ ಅವಧಿಗಿಂತ “ಒಡೆಯ’ನ ಅವಧಿ ಕಡಿಮೆ ಇದೆ. ಇಲ್ಲೂ ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕುವ ಅವಕಾಶವಿತ್ತು. ನಟ ದರ್ಶನ್‌ ಅವರಿಗೆ ಇಂತಹ ಕಥೆಗಳು ಹೊಸದಲ್ಲ. ಈ ಹಿಂದೆಯೂ ಫ್ಯಾಮಿಲಿ ಕಂ ಮಾಸ್‌ ಎಂಟರ್‌ಟೈನರ್‌ ಸಿನಿಮಾಗಳಲ್ಲಿ ದರ್ಶನ್‌ ಅಭಿಮಾನಿಗಳನ್ನು ರಂಜಿಸಿದ್ದಾರೆ.

Advertisement

ಈ ಬಾರಿ “ಒಡೆಯ’ ಮೂಲಕ ಮತ್ತೂಮ್ಮೆ ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಂಭಾಷಣೆ, ಆ್ಯಕ್ಷನ್‌, ನಟನೆ ಮೂಲಕ ರಂಜಿಸಿದ್ದಾರೆ. ನಾಯಕಿ ಸನಾ ತಿಮ್ಮಯ್ಯ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದರೂ, ನಟನೆಯಲ್ಲಿ ಸಾಕಷ್ಟು ಪಳಗಬೇಕಿದೆ. ಉಳಿದಂತೆ ದೇವರಾಜ್‌, ಶರತ್‌ ಲೋಹಿತಾಶ್ವ, ರವಿಶಂಕರ್‌, ಚಿಕ್ಕಣ್ಣ, ಸಾಧುಕೋಕಿಲ ನಟಿಸಿದ್ದಾರೆ. ಅರ್ಜುನ್‌ ಜನ್ಯಾ ಸಂಗೀತದ ಎರಡು ಹಾಡುಗಳು ಇಷ್ಟವಾಗುತ್ತದೆ.

ಚಿತ್ರ: ಒಡೆಯ
ನಿರ್ಮಾಣ: ಎನ್‌.ಸಂದೇಶ್‌
ನಿರ್ದೇಶನ: ಎಂ.ಡಿ.ಶ್ರೀಧರ್‌
ತಾರಾಗಣ: ದರ್ಶನ್‌, ಸನಾ ತಿಮ್ಮಯ್ಯ, ದೇವರಾಜ್‌, ಶರತ್‌ ಲೋಹಿತಾಶ್ವ, ರವಿಶಂಕರ್‌, ಚಿಕ್ಕಣ್ಣ ಮತ್ತಿತರರು.

Advertisement

Udayavani is now on Telegram. Click here to join our channel and stay updated with the latest news.

Next