Advertisement

ಅ.23 ರಿಂದ 25: ಮಳೆ ನಡುವೆಯೂ ಕಿತ್ತೂರು ಉತ್ಸವಕ್ಕೆ ಭರದ ಸಿದ್ಧತೆ

05:24 PM Oct 22, 2024 | Team Udayavani |

ಉದಯವಾಣಿ ಸಮಾಚಾರ
ಚನ್ನಮ್ಮನ ಕಿತ್ತೂ ರು: ಅ.23 ರಿಂದ 25 ರವರೆಗೆ ಜರುಗುವ ಐತಿಹಾಸಿಕ ಚನ್ನಮ್ಮಾಜಿಯ ಕಿತ್ತೂರು ಉತ್ಸವಕ್ಕೆ ಕಿತ್ತೂರು ಪಟ್ಟಣ ಸಜ್ಜಾಗಿದ್ದು, ಮಳೆಯ ನಡುವೆಯೂ ಸಿದ್ಧತೆಗಳು ಭರದಿಂದ ಸಾಗಿವೆ. ಉದ್ಘಾಟನೆ ಮತ್ತು ಸಮಾರೋಪ ಸಮಾರಂಭ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಕೋಟೆ ಆವರಣದಲ್ಲಿರುವ ರಾಣಿ ಚನ್ನಮ್ಮ ಮುಖ್ಯ ವೇದಿಕೆ ಸಿದ್ಧಗೊಂಡಿದ್ದು 180×300 ಅಡಿ ಅಳತೆಯ ವಾಟರ್‌ಪ್ರೂಫ್‌ ಪೆಂಡಾಲ್‌ ಸಿದ್ಧವಾಗಿದೆ.

Advertisement

ಅಂದಾಜು 12,000 ಆಸನ ವ್ಯವಸ್ಥೆ ಮಾಡಲಾಗಿದ್ದು, ವೇದಿಕೆ ಮುಂಭಾಗದಲ್ಲಿ ರಾಜಕೀಯ ಮುಖಂಡರು, ವಿಐಪಿಗಳು, ಸಾಧು-ಸಂತರು, ಮಾಧ್ಯಮದವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಲ್ಲಿ ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ ಎಂದು ಮುರಗೋಡ ಪೆಂಡಾಲ್‌ ಮತ್ತು ಡೆಕೋರೇಟರ್‌ನ ಮಾಲೀಕ ಕೃಷ್ಣಾ ಬಾಳೇಕುಂದರಗಿ ತಿಳಿಸಿದ್ದಾರೆ. ವೇದಿಕೆ ಹಿಂಬಾಗದಲ್ಲಿ ಮಾಧ್ಯಮ ಕೇಂದ್ರ ತೆರೆಯಲಾಗಿದೆ.

ಮದುವಣಗಿತ್ತಿಯಂತೆ ಶೃಂಗಾರ: ಪಟ್ಟಣದ ಮುಖ್ಯ ರಸ್ತೆಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಕಿತ್ತೂರು ಚನ್ನಮ್ಮಾಜಿಯ ಸಾಹಸಗಾಥೆಯ ಚಿತ್ರಗಳನ್ನು ಕಲಾವಿದರು ಬಿಡಿಸಿದ್ದಾರೆ. ಕೋಟೆ ಆವರಣದಲ್ಲಿರುವ ಎಲ್ಲ ಸ್ಮಾರಕಗಳಿಗೆ ವಿದ್ಯುತ್‌ ಅಲಂಕಾರ ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಸಚಿವರು, ಸಂಸದರು, ಶಾಸಕರು, ಶ್ರೀಗಳು ಭಾಗವಹಿಸಲಿದ್ದು, ಇವರೆಲ್ಲರ ಸ್ವಾಗತಕ್ಕೆ ಕಿತ್ತೂರು ಪಟ್ಟಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.

Advertisement

ಕಿತ್ತೂರು ಪ್ರವೇಶಿಸುವ ನಾಲ್ಕೂ ದಿಕ್ಕುಗಳಲ್ಲಿ ಸ್ವಾಗತ ಕಮಾನು ನಿರ್ಮಿಸಲಾಗಿದೆ. ಮಳೆಯ ನಡುವೆಯೂ ಭರದ ಸಿದ್ಧತೆ ಮಾಡಲಾಗುತ್ತಿದ್ದು, ನಾಡಿನ ಹೆಸರಾಂತ ಸಾಹಿತಿಗಳು, ಕಲಾವಿದರು, ನಟರು, ರಾಜ್ಯ-ರಾಷ್ಟ್ರಮಟ್ಟದ ನೃತ್ಯ
ಕಲಾವಿದರು ಭಾಗವಹಿಸಲಿದ್ದಾರೆ.

ವಿವಿಧ ಕ್ರೀಡೆ ಆಯೋಜನೆ: ಮೂರು ದಿನಗಳವರೆಗೆ ನಡೆಯುವ ಉತ್ಸವದಲ್ಲಿ ಸೈಕ್ಲಿಂಗ್‌, ವಾಲಿಬಾಲ್‌, ಕಬಡ್ಡಿ, ಹಗ್ಗ ಜಗ್ಗಾಟ, ರಾಷ್ಟ್ರ-ಅಂತಾರಾಷ್ಟ್ರ ಮಟ್ಟದ ಜಟ್ಟಿಗಳಿಂದ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿದೆ.ಜತೆಗೆ ಮ್ಯಾರಾಥಾನ್‌ ಆಯೋಜಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನಿನಲ್ಲಿ ಕುಸ್ತಿ ಅಖಾಡಾ ಸಿದ್ಧಪಡಿಸಲಾಗಿದೆ. ಕಬಡ್ಡಿ, ವಾಲಿಬಾಲ್‌ ಹಾಗೂ ಸಾಹಸ ಕ್ರೀಡೆಗಳಿಗೆ ಗುರುಸಿದ್ದೇಶ್ವರ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ತಯಾರಿ ಮಾಡಿಕೊಳ್ಳಲಾಗಿದೆ.

ಉತ್ಸವ ಅಂಗವಾಗಿ ವಿಚಾರ ಸಂಕಿರಣ ಏರ್ಪಡಿಸಿದ್ದು, ನಾಡಿನ ಹೆಸರಾಂತ ಸಾಹಿತಿಗಳು ಭಾಗವಹಿಸಲಿದ್ದಾರೆ. ವಸ್ತು ಪ್ರದರ್ಶನ, ವಿವಿಧ ರೀತಿಯ ಖಾದ್ಯ ಮಾರಲು ಸುಮಾರು 140ಕ್ಕೂ ಹೆಚ್ಚು ಮಳಿಗೆ ತೆರೆಯಲಾಗಿದೆ. ಉತ್ಸವದ ಕೊನೆ ದಿನ ಕಿತ್ತೂರ ಕೋಟೆ ಆವಣರದಲ್ಲಿ ದೀಪೋತ್ಸವ,ಸಿಡಿಮದ್ದು ಪ್ರದರ್ಶನ ಏರ್ಪಡಿಸಲಾಗಿದೆ.

ಊಟೋಪಚಾರ ವ್ಯವಸ್ಥೆ: ಜ್ಯೋತಿಯೊಂದಿಗೆ ಬರುವ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸುವ ಸರ್ವರಿಗೂ ನಿಚ್ಚಣಕಿಯ ಶ್ರೀ ಮಡಿವಾಳೇಶ್ವರ ಮಠದಲ್ಲಿ ಊಟೋಪಚಾರ ವ್ಯವಸ್ಥೆ ಇದೆ, ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಗಣ್ಯರಿಗೆ, ಪೊಲೀಸ್‌ ಇಲಾಖೆಗೆ ಗದ್ದಿ ಓಣಿಯ ಶ್ರೀ ರಾಘವೇಂದ್ರ ಮಠದಲ್ಲಿ ಊಟ-ವಸತಿ ವ್ಯವಸ್ಥೆ ಮಾಡಲಾಗಿದೆ
.
ವ್ಯಾಪಾರಿಗಳ ದಂಡು: ಪ್ರತಿವರ್ಷದಂತೆ ಬೇರೆ ಬೇರೆ ಊರುಗಳಿಂದ ಆಗಮಿಸುವ ವ್ಯಾಪಾರಿಗಳ ದಂಡು ಕಿತ್ತೂರಿನಲ್ಲಿ ಬೀಡು ಬಿಟ್ಟಿದೆ. ಉತ್ಸವಕ್ಕಾಗಿ ಬೇರೆ ಬೇರೆ ಭಾಗಗಳಿಂದ ಆಗಮಿಸುವ ಜನರಿಗೆ ತೊಂದರೆಯಾಗದಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಬಗೆ ಬಗೆಯ ತಿರುಗುವ ತೊಟ್ಟಿಲುಗಳು, ರೈಲು, ಕುದುರೆ, ಬೈಕ್‌, ಕಾರುಗಳು ಸೇರಿದಂತೆ ಅನೇಕ ಆಟ ಮತ್ತು ಮನರಂಜನಾ ಸಾಮಗ್ರಿ, ಮಾರಾಟದ ವಸ್ತುಗಳು ಹಿರಿಯರು-ಕಿರಿಯರನ್ನು ಕೈಬೀಸಿ ಕರೆಯುತ್ತಿವೆ.

ಮೂಲಸೌಕರ್ಯ: ಪಟ್ಟಣದಲ್ಲಿ ಚರಂಡಿ, ರಸ್ತೆಗಳ ಸ್ವತ್ಛತಾ ಕಾರ್ಯ ಭರದಿಂದ ಸಾಗಿದೆ. ಬೀದಿ ದೀಪಗಳ ದುರಸ್ತಿ ಕಾರ್ಯ ನಡೆದಿದೆ. ಹೆಸ್ಕಾಂದಿಂದ ಹೆಚ್ಚಿನ ಪ್ರಮಾಣದಲ್ಲಿ ತಾತ್ಕಾಲಿಕ ವಿದ್ಯುತ್‌ ಪರಿವರ್ತಕಗಳನ್ನು ಅಗತ್ಯ ಸ್ಥಳಗಳಲ್ಲಿ ಅಳವಡಿಸಲಾಗಿದೆ. ವಾಹನ ನಿಲುಗಡೆಗೆ ಸ್ಥಳಗಳನ್ನು ನಿಗದಿಪಡಿಸಲಾಗಿದೆ.

ರಾಣಿ ಚನ್ನಮ್ಮಾಜಿಯ 200ನೇ ವಿಜಯೋತ್ಸವ ನಮ್ಮ ಜೀವನದಲ್ಲಿ ಬಂದಿರುವುದು ನಮ್ಮೆಲ್ಲರ ಪೂರ್ವ ಜನ್ಮದ ಪುಣ್ಯ. ಐತಿಕಾಸಿಕ ನಾಡಿನ ಉತ್ಸವದಲ್ಲಿ ಸರ್ವರೂ ಉತ್ಸಾಹದಿಂದ ಪಾಲ್ಗೊಳುವ ಮೂಲಕ ಉತ್ಸವಕ್ಕೆ ಮೆರಗು ತರಬೇಕು. ದೇಶದ
ನಾನಾ ಭಾಗಗಳಿಂದ ನಮ್ಮ ನಿರೀಕ್ಷೆಗೂ ಮೀರಿ ಜನ ಆಗಮಿಸುವ ಸಾಧ್ಯತೆ ಇದೆ.

ಸ್ಥಳೀಯರಾದ ನಾವು ಉತ್ಸವಕ್ಕೆ ಬರುವ ಜನರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು. ಅವರಿಗೆ ಮೊದಲ ಆದ್ಯತೆ ನೀಡುವ ಮೂಲಕ ಗೌರವಿಸಬೇಕು. ರಾಣಿ ಚನ್ನಮ್ಮನ 200ನೇ ವಿಜಯೋತ್ಸವ ನನ್ನ ಅಧಿಕಾರವಧಿಯಲ್ಲಿ ಬಂದಿರುವುದು ನನ್ನ ಪೂರ್ವ ಜನ್ಮದ ಪುಣ್ಯ.
*ಬಾಬಾಸಾಹೇಬ ಪಾಟೀಲ, ಶಾಸಕರು

ಚನ್ನಮ್ಮನ ಕಿತ್ತೂರು

*ಬಸವರಾಜ ಚಿನಗುಡಿ

Advertisement

Udayavani is now on Telegram. Click here to join our channel and stay updated with the latest news.

Next