Advertisement

ಅ.14ರಿಂದ 26ರವರೆಗೆ ಅಧಿವೇಶನ

11:39 PM Sep 18, 2019 | Team Udayavani |

ಬೆಂಗಳೂರು: ಅ.14ರಿಂದ 26ರವರೆಗೆ ವಿಧಾನಮಂಡಲ ಅಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸಲು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಹಾಗಾಗಿ, ಈ ಬಾರಿ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಸುವ ಸಾಧ್ಯತೆ ಕಡಿಮೆ.

Advertisement

ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಬೆಳಗಾವಿಯಲ್ಲಿ ನೆರೆಯಿಂದಾಗಿ ಸಾಕಷ್ಟು ಹಾನಿಯಾಗಿದ್ದು, ಜಿಲ್ಲಾಡಳಿತ ಪರಿಹಾರ ಹಾಗೂ ಪುನರ್‌ನಿರ್ಮಾಣ ಕಾರ್ಯದಲ್ಲಿ ನಿರತವಾಗಿದೆ. ಸದ್ಯ ಬೆಂಗಳೂರಿನಲ್ಲಿ ನಡೆಯುವ ಅಧಿವೇಶನದಲ್ಲಿ ಹೊಸ ಬಜೆಟ್‌ ಮಂಡನೆಗಿಂತ ಪ್ರಸಕ್ತ ಸಾಲಿನ ಬಜೆಟ್‌ಗೆ ಅನುಮೋದನೆ ಪಡೆಯುವ ಸಾಧ್ಯತೆ ಹೆಚ್ಚು. ಪೂರಕ ಅಂದಾಜು ಇರಲಿದೆ ಎಂದು ಹೇಳಿದರು.

ನಿಲುವು ಬದಲು: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಒಬ್ಬ ಸದಸ್ಯರನ್ನು ಧಾರವಾಡದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡುವ ನಿರ್ಧಾರದಿಂದ ಹಿಂದೆ ಸರಿದಿರುವ ಸರ್ಕಾರ, ಆಯೋಗಕ್ಕೆ ಪೂರ್ಣ ಪ್ರಮಾಣದಲ್ಲಿ ಬೆಂಗಳೂರಿನಲ್ಲೇ ಕಾರ್ಯ ನಿರ್ವಹಿಸಲು ಅವಕಾಶ ನೀಡಲು ಬುಧವಾರ ನಡೆದ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಉತ್ತರ ಕರ್ನಾಟಕ ಭಾಗದ ಧಾರವಾಡಕ್ಕೆ ಆಯೋಗದ ಒಬ್ಬ ಸದಸ್ಯರನ್ನು ನಿಯೋಜಿಸಿ, ಸ್ಥಳೀಯವಾಗಿ ವಿಚಾರಣೆಗೆ ಅವಕಾಶ ಕಲ್ಪಿಸುವ ಬಗ್ಗೆ ಈ ಹಿಂದೆ ನಿರ್ಧರಿಸಲಾಗಿತ್ತು.

ಆದರೆ, ಅಧ್ಯಕ್ಷರು ಸೇರಿದಂತೆ ಇಬ್ಬರು ಸದಸ್ಯರು ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೇ ಕಾರ್ಯ ನಿರ್ವಹಣೆಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಆರು ತಿಂಗಳ ಮೊದಲೇ ದಿನಾಂಕ ನಿಗದಿಪಡಿಸಿ ಸಂಚಾರಿ ಪೀಠದ ಮಾದರಿಯಲ್ಲಿ ನಿಗದಿತ ದಿನದಂದು, ನಿರ್ದಿಷ್ಟ ಪ್ರದೇಶದಲ್ಲಿ ವಿಚಾರಣೆ ನಡೆಸುವ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

“ಸ್ಥಗಿತ’ ಕಾಮಗಾರಿಗೆ 1,500 ಕೋಟಿ ರೂ. ಬಿಡುಗಡೆ
ಬೆಂಗಳೂರು: ಲೋಕೋಪಯೋಗಿ ಇಲಾಖೆ ಯಲ್ಲಿ ಕೆಲ ಕಾರಣಕ್ಕೆ ಮುಖ್ಯ ಮಂತ್ರಿಗಳ ಸೂಚನೆಯಂತೆ ಸ್ಥಗಿತಗೊಳಿ ಸಲಾಗಿದ್ದ ಕಾಮಗಾರಿಗಳನ್ನು ಮುಂದು ವರಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದ್ದು, ಅದರಂತೆ 1,500 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ಸೂಚಿಸಿದೆ. ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಅನುಮೋದನೆ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದರು ಎಂದು ಹೇಳಿದರು.

Advertisement

ಬಳಿಕ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಕೆಲ ಕಾಮಗಾರಿಗಳು ಟೆಂಡರ್‌ ಹಂತದಲ್ಲಿದ್ದರೆ, ಇನ್ನೂ ಕೆಲವು ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. ಈ ಹಂತದಲ್ಲಿ ಸ್ಥಗಿತಗೊಳಿಸಿದರೆ ತೊಂದರೆಯಾಗಲಿದೆ ಎಂದು ಮನವಿ ಮಾಡಿದ್ದರು. ಹೀಗಾಗಿ ನಿಯಮ ಬದ್ಧವಾಗಿರುವ ಕಾಮಗಾರಿಗಳನ್ನು ಮುಂದುವರಿಸಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ, ಪಂಗಡದವರ ಕಲ್ಯಾಣಕ್ಕೆ ಸಂಬಂಧಪಟ್ಟಂತೆ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ, ಕಾಯ್ದಿರಿಸಿರುವ ಅನುದಾನವನ್ನು ಎಲ್ಲೆಲ್ಲಿ ಬಳಸಲು ಸಾಧ್ಯವಿಲ್ಲವೋ, ಆ ಹಣವನ್ನು ಆದ್ಯತೆ ಮೇರೆಗೆ ಪ್ರವಾಹಪೀಡಿತ ಪ್ರದೇಶದಲ್ಲಿನ ಪರಿಶಿಷ್ಟ ಜಾತಿ, ಪಂಗಡದ ಸಂತ್ರಸ್ತರಿಗೆ ಮನೆ ನಿರ್ಮಾಣ, ರಸ್ತೆ ನಿರ್ಮಾಣಕ್ಕೆ ವಿನಿಯೋಜಿಸಲು ತೀರ್ಮಾನಿಸಲಾಗಿದೆ. ಇದರಲ್ಲಿ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.

ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆಯಡಿ ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಪರಿಶಿಷ್ಟ ಜಾತಿ, ಪಂಗಡದವರ ಕಲ್ಯಾಣಕ್ಕಾಗಿ ಶೇ.24.12ರಷ್ಟು ಅನುದಾನ ಕಾಯ್ದಿರಿಸಲಾಗಿತ್ತು. ನಗರ ಪ್ರದೇಶ ಸೇರಿದಂತೆ ಇನ್ನಿತರ ಕಡೆ ಉಪಯೋಗಿಸುವುದಕ್ಕಿಂತ ತುರ್ತು ಅಗತ್ಯವಿರುವ ನೆರೆ ಪ್ರದೇಶದಲ್ಲಿ ಅದೇ ಸಮುದಾಯದ ಸಂತ್ರಸ್ತರ ನೆರವಿಗೆ ವಿನಿಯೋಗಿಸಲು ನಿರ್ಧರಿಸಲಾಗಿತ್ತು ಎಂದು ಹೇಳಿದರು.

ಬಯಲು ಸೀಮೆ ಶಾಸಕರಿಗೆ ಅನುದಾನ: ಬಯಲು ಸೀಮೆ ಅಭಿವೃದ್ಧಿ ಮಂಡಳಿಯಿಂದ ಬಯಲು ಸೀಮೆ ಪ್ರದೇಶದ ಸುಮಾರು 96- 97 ಶಾಸಕರಿಗೆ ತಲಾ ಒಂದು ಕೋಟಿ ರೂ. ಅನುದಾನ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಈಗಾಗಲೇ ಸಲ್ಲಿಕೆಯಾಗಿರುವ ಹಾಗೂ ಸಲ್ಲಿಸಲಿರುವ ಕ್ರಿಯಾ ಯೋಜನೆಗೆ ಪೂರಕವಾಗಿ ಅನುದಾನ ಬಿಡುಗಡೆಯಾಗಲಿದೆ. ಹಿಂದಿನ ಮುಖ್ಯಮಂತ್ರಿಗಳು ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಘೋಷಿಸಿದ್ದರೂ ಬಯಲು ಸೀಮೆ ಪ್ರದೇಶದ ಯಾವ ಶಾಸಕರಿಗೂ ಅನುದಾನ ಬಿಡುಗಡೆಯಾಗಿರಲಿಲ್ಲ ಎಂದು ಜೆ.ಸಿ. ಮಾಧುಸ್ವಾಮಿ ಹೇಳಿದರು.

10 ಕೋಟಿ ರೂ.ಅನುದಾನಕ್ಕೆ ಅನುಮೋದನೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯದ 10 ಜಿಲ್ಲಾಸ್ಪತ್ರೆಗಳಲ್ಲಿ ಸ್ತನ ಕ್ಯಾನ್ಸರ್‌ ಹಾಗೂ ಗರ್ಭಕೋಶ ಕ್ಯಾನ್ಸರ್‌ ಪತ್ತೆ ಉಪಕರಣಗಳನ್ನು ತಲಾ ಒಂದು ಕೋಟಿ ರೂ.ವೆಚ್ಚದಲ್ಲಿ ಅಳವಡಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮಂಗಳೂರು, ತುಮಕೂರು, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಚಿಕ್ಕಮಗಳೂರು, ಹಾವೇರಿ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗಳಲ್ಲಿ ಡಿಜಿಟಲ್‌ ಮ್ಯಾಮೋಗ್ರಫಿ ಹಾಗೂ “ಪ್ಯಾಪ್‌ ಸ್ಮಿಯರ್‌’ ವ್ಯವಸ್ಥೆ ಆರಂಭಿಸಲು ತಲಾ 1 ಕೋಟಿ ರೂ.ನಂತೆ 10 ಕೋಟಿ ರೂ.ಅನುದಾನ ನೀಡಲು ಸಂಪುಟ ಅನುಮೋದನೆ ನೀಡಿದೆ.

ಪ್ರಮುಖ ನಿರ್ಧಾರಗಳು
-ಕರ್ನಾಟಕ ಸಚಿವಾಲಯದ ನಾನಾ ಇಲಾಖೆಗಳ ಹಾರ್ಡ್‌ವೇರ್‌, ಸಾಫ್ಟ್ವೇರ್‌ ನಿರ್ವಹಣಾ ವ್ಯವಸ್ಥೆಗೆ 9.55 ಕೋಟಿ ರೂ.ವೆಚ್ಚಕ್ಕೆ ಒಪ್ಪಿಗೆ.

-ಕೇಂದ್ರ ಸರ್ಕಾರದ “ಪೋಷಣ್‌’ ಅಭಿಯಾನದಡಿ 11 ಜಿಲ್ಲೆಗಳಲ್ಲಿ ಮಕ್ಕಳ ಕುಂಠಿತ ಬೆಳವಣಿಗೆ ತಡೆ ಹಾಗೂ ಇತರ ನಿಯಂತ್ರಣ ಕ್ರಮಗಳಿಗೆ ಪೂರಕವಾಗಿ ಸ್ಮಾರ್ಟ್‌ಪೋನ್‌, ಪವರ್‌ ಬ್ಯಾಂಕ್‌, ಸ್ಟೇಡಿಯೋ ಮೀಟರ್‌, ಇನ್‌ಫಾಂಟೋಮೀಟರ್‌, ವೇಯಿಂಗ್‌ ಸ್ಕೇಲ್‌ ಖರೀದಿ. ಇದನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲು ಒಪ್ಪಿಗೆ.

Advertisement

Udayavani is now on Telegram. Click here to join our channel and stay updated with the latest news.

Next