Advertisement

ಒಖಿ ಪರಿಣಾಮ ಮೀನು-ಮಾಂಸ ದುಬಾರಿ

10:36 AM Dec 08, 2017 | Team Udayavani |

ಮಂಗಳೂರು : ಒಖೀ ಚಂಡಮಾರುತ ಸಮುದ್ರತೀರದ ನಿವಾಸಿಗಳನ್ನು ಮಾತ್ರ ಕಂಗೆಡಿಸಿದ್ದಲ್ಲ, ಮಾಂಸ ಪ್ರಿಯರನ್ನೂ ಕಂಗೆಡಿಸಿದೆ.  ಕರಾವಳಿಯಲ್ಲಿ ಕಳೆದೊಂದು ವಾರ ದಿಂದ ಮೀನುಗಾರಿಕೆಗೆ ದೋಣಿಗಳು ತೆರಳದ್ದರಿಂದ ಮೀನು ಬೆಲೆ ಏಕಾಏಕಿ ಏರಿಕೆಯಾಗಿದ್ದು, ಇದರ ಪರಿಣಾಮ ಕೋಳಿ ಮಾಂಸದ ಬೆಲೆಯ ಮೇಲೂ ಆಗಿದೆ. ಮೀನುಗಳ ಬೆಲೆಯಲ್ಲಿ ಕೆ.ಜಿ.ಗೆ 200 ರೂ.ನಿಂದ 400 ರೂ.ಗಳ ತನಕ ಬೆಲೆ ಏರಿಕೆಯಾಗಿ, ಜನಸಾಮಾನ್ಯರಿಗೆ ಮೀನು ಕೈಗೆಟಕದಂತಾಗಿದೆ.

Advertisement

ಪೀಸ್‌ ಲೆಕ್ಕದಲ್ಲಿ ಮಾರಾಟ!
ಬೂತಾಯಿ, ಬಂಗುಡೆಯಂತಹ ಮೀನುಗಳನ್ನು ಕೆ.ಜಿ. ಬದಲಿಗೆ ಪೀಸ್‌ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ. ವಾರದ ಹಿಂದೆ 100 ರೂ.ಗೆ 30-40 ಬೂತಾಯಿ ಸಿಗುತ್ತಿದ್ದರೆ, ಈಗ ಕೇವಲ 10 ಬೂತಾಯಿ ಮಾತ್ರ ಸಿಗುತ್ತಿದೆ. 100 ರೂ.ಗೆ 10 ಬಂಗುಡೆ ಸಿಗುತ್ತಿದ್ದರೆ, ಈಗ 3ಕ್ಕೆ ಇಳಿದಿದೆ. ಕೆ.ಜಿ.ಗೆ 400-500 ರೂ.ಗಳಿದ್ದ ಅಂಜಲ್‌ ಬೆಲೆ 800 ರೂ.ಗೆ ತಲುಪಿದೆ. ಕೆ.ಜಿ.ಗೆ ಸುಮಾರು 400 ರೂ.ಗಳಿದ್ದ ಎಟ್ಟಿ ಬೆಲೆ 550  ರೂ.ಗೆ ತಲುಪಿದೆ.

ಬೂತಾಯಿ ಬಾಕ್ಸ್‌ಗೆ 1,300 ರೂ.!
ಬಾಕ್ಸ್‌ಗೆ 500  ರೂ. ಇದ್ದ ಬೂತಾಯಿ ಬೆಲೆ ಏಕಾಏಕಿ 1,800ಕ್ಕೇರಿದೆ. ಆ ಮೂಲಕ ಒಂದೇ ವಾರದಲ್ಲಿ 1300 ರೂ. ಹೆಚ್ಚಳವಾದಂತಾಗಿದೆ. ಇದರಿಂದ ಮೀನುಗಾರ ಮಹಿಳೆಯರು ಮೀನು ತರಲಾಗದೆ ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿದ್ದಾರೆ.   ಸ್ಟೇಟ್‌ಬ್ಯಾಂಕ್‌ ಮೀನು ಮಾರುಕಟ್ಟೆಯೊಂದರಲ್ಲೇ 400ಕ್ಕೂ ಹೆಚ್ಚು ಮಹಿಳೆಯರು ಮೀನು ಮಾರಾಟ ಮಾಡುತ್ತಿದ್ದರೆ, ಈಗ 200 ಮಂದಿಯಷ್ಟೇ ಇದ್ದಾರೆ.

ಖರ್ಚು ಮಾಡಿದ ಹಣವೂ ಸಿಗುತ್ತಿಲ್ಲ
“ದಿನಕ್ಕೆ ಕನಿಷ್ಠವೆಂದರೂ 500 ರೂ. ಮೀನಿನ ನಿರ್ವಹಣೆಗಾಗಿ ಖರ್ಚಾಗು ತ್ತದೆ. ಒಳ್ಳೆ ವ್ಯಾಪಾರ ಕುದುರುವ ವೇಳೆ ದಿನಕ್ಕೆ ಸುಮಾರು 1,000 ರೂ. ವರೆಗೂ ಸಂಪಾದಿಸುತ್ತೇವೆ. ಆದರೀಗ ಮೀನು ಲಭ್ಯತೆ ಇಲ್ಲದ್ದರಿಂದ ಖರ್ಚು ಮಾಡಿದ ಹಣವೂ ದೊರಕುತ್ತಿಲ್ಲ’ ಎಂದು ಮೀನುಗಾರ ಮಹಿಳೆಯರು ಅಳಲು ತೋಡಿಕೊಳ್ಳುತ್ತಾರೆ. 

ಕೋಳಿ ಬೆಲೆಯೂ ಏರಿಕೆ
ಮೀನು ಬೆಲೆ ಒಂದೇ ಸಮನೆ ಏರಿಕೆ ಯಾದ್ದರಿಂದ ಕೋಳಿ ಮಾಂಸಕ್ಕೆ ಬೇಡಿಕೆ ಕುದುರಿದೆ. ಪರಿಣಾಮ ಬೆಲೆಯೂ ಏರಿಕೆಯಾಗಿದೆ. ಮೂರ್‍ನಾಲ್ಕು ದಿನಗಳ ಹಿಂದೆ ಕೆಜಿಗೆ 90-95 ರೂ. ಗಳಿದ್ದ ಬಾಯ್ಲರ್‌ ಕೋಳಿಯ ಬೆಲೆ ಪ್ರಸ್ತುತ 110 ರೂ. ತಲುಪಿದೆ. 120 ರೂ.ಗಳಿದ್ದ ಟೈಸನ್‌ ಕೋಳಿ ಬೆಲೆ 135 ರೂಪಾಯಿಗಳಾಗಿವೆ ಎಂದು ಕೋಸ್ಟಲ್‌ ಚಿಕನ್‌ ಸಂಸ್ಥೆಯ ಸಿಬಂದಿ ತಿಳಿಸಿದ್ದಾರೆ.

Advertisement

ಮೊಟ್ಟೆಗೆ 6.5 ರೂ.!
ಮೊಟ್ಟೆಯೂ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ. 15 ದಿನಗಳ ಹಿಂದೆ 3.50 ರೂ. ಇದ್ದ ಮೊಟ್ಟೆ ಬೆಲೆ 6.5 ರೂ. ಆಗಿದೆ. ಮೊಟ್ಟೆ ಬೆಲೆ ಏರಿಕೆಗೆ ನಿಖರ ಕಾರಣ ತಿಳಿಯದಿದ್ದರೂ ಮುಂಬರುವ ಕ್ರಿಸ್ಮಸ್‌ ಹಬ್ಬದ ಕೇಕ್‌ ತಯಾರಿಸಲು ಮೊಟ್ಟೆ ಬಳಸುವುದರಿಂದ ಬೇಡಿಕೆ ಇರುವುದೂ ಮೊಟ್ಟೆ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. 

ಆದಾಯವಿಲ್ಲದೆ ಆತಂಕ
“ಮೀನಿನ ಅಲಭ್ಯತೆಯಿಂದಾಗಿ ಮೀನಿನ ಬೆಲೆ ಏರಿಕೆಯಾಗಿದೆ. ಗ್ರಾಹಕರೂ ಕಡಿಮೆ ಸಂಖ್ಯೆ ಯಲ್ಲಿರುವುದರಿಂದ ಮೀನು ವ್ಯಾಪಾರದಲ್ಲಿ ತೀವ್ರ ಕುಸಿತವಾ ಗಿದ್ದು, ಆದಾಯವಿಲ್ಲದೆ ಆತಂಕ ದಲ್ಲಿ ದ್ದಾರೆ. ಮೀನಿಗೆ ವ್ಯಾಪಾರ ಉತ್ತಮ ವಾಗಿದ್ದಾಗ ನಮ್ಮಲ್ಲಿ ಕೈಚೀಲ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿತ್ತು. ಆದರೆ ಈಗ ಅದೂ ಕಡಿಮೆಯಾಗಿದೆ.   
– ಗೀತಾ ಬಾಯಿ, ಕೈಚೀಲ ಮಾರಾಟಗಾರರು, ಸ್ಟೇಟ್‌ಬ್ಯಾಂಕ್‌ ಮೀನು ಮಾರುಕಟ್ಟೆ

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next