Advertisement

ಬೆಸ್ತರನ್ನೊಳಗೊಂಡ ಸಮುದ್ರ ಸುರಕ್ಷಾ ಸ್ಕ್ವಾಡ್‌ ರಚನೆ

02:40 AM Nov 14, 2018 | Team Udayavani |

ಕಾಸರಗೋಡು: ಪದೇ ಪದೆ ಸಂಭವಿಸುವ ಸಮುದ್ರ ಕ್ಷೋಭೆ, ಕಡಲ್ಕೊರೆತ, ನೆರೆ, ಪ್ರಳಯ ಮೊದಲಾದ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕಿದವರನ್ನು ಸಂರಕ್ಷಿಸುವ ಉದ್ದೇಶದಿಂದ ಬೆಸ್ತರನ್ನು ಸೇರ್ಪಡೆಗೊಳಿಸಿ ಸಮುದ್ರ ಸುರಕ್ಷಾ ಸ್ಕ್ವಾಡ್‌ ರೂಪಿಸಲು ಸರಕಾರ ಮುಂದಾಗಿದೆ. ಇತ್ತೀಚೆಗೆ ಕೇರಳದಲ್ಲಿ ಸಂಭವಿಸಿದ ಪ್ರಳಯದ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿ ಹಲವಾರು ಮಂದಿಯನ್ನು ರಕ್ಷಿಸಿದ ಮೀನು ಕಾರ್ಮಿಕರನ್ನೂ ಸೇರ್ಪಡೆಗೊಳಿಸಿ ಇಂತಹ ಸಂದರ್ಭಗಳು ಬಂದಲ್ಲಿ ರಕ್ಷಿಸಿಕೊಳ್ಳಲು ಸಮುದ್ರ ಸುರಕ್ಷಾ ಸ್ಕ್ವಾಡ್‌ ರಚಿಸಲಾಗುವುದು.

Advertisement

ರಾಜ್ಯದಲ್ಲಿ ಆರಂಭ ಹಂತದಲ್ಲಿ ಇಂತಹ 60 ಯೂನಿಟ್‌ಗಳನ್ನು ರೂಪಿಸಲಾಗುವುದು. ಕಾಸರಗೋಡು ಜಿಲ್ಲೆಯಲ್ಲಿ ಎಂಟು ಮೀನುಗಾರಿಕಾ ಕೇಂದ್ರಗಳಲ್ಲಿನ ದೋಣಿ ಮತ್ತು ಬೋಟ್‌ಗಳಲ್ಲಿ ದುಡಿಯುವ ಬೆಸ್ತರನ್ನು ಸೇರ್ಪಡೆಗೊಳಿಸಿ ಸುರಕ್ಷಾ ಸ್ಕ್ವಾಡ್‌ ಆರಂಭಗೊಳ್ಳಲಿದೆ. ಕಾಸರಗೋಡು, ಚೆರ್ವತ್ತೂರು, ಪಳ್ಳಿಕೆರೆ, ಕಾಂಞಂಗಾಡ್‌ ತೈಕಡಪ್ಪುರ, ಹೊಸದುರ್ಗ, ಮಂಜೇಶ್ವರ, ಕೊಯಿಪ್ಪಾಡಿ, ಕೋಟಿಕುಳಂ ಎಂಬೆಡೆಗಳಲ್ಲಿ ಪ್ರಥಮ ಹಂತದಲ್ಲಿ ಸ್ಕ್ವಾಡ್‌ ರಚಿಸಲಾಗುವುದು.

ಒಖೀ ದುರಂತದ ಹಿನ್ನೆಲೆಯಲ್ಲಿ ಸಮುದ್ರ ಸುರಕ್ಷಾ ವ್ಯವಸ್ಥೆ ಮತ್ತು ಸಮುದ್ರದಲ್ಲಿ ರಕ್ಷಣಾ ಕಾರ್ಯವನ್ನು ಬಲಪಡಿಸುವುದು ಈ ಮೂಲಕ ಸರಕಾರದ ಉದ್ದೇಶವಾಗಿದೆ. ಸಾಕಷ್ಟು ಅನು ಭವವುಳ್ಳ ಮೀನುಕಾರ್ಮಿಕರನ್ನು ಈ ಸ್ಕ್ವಾಡ್‌ಗೆ ಸೇರಿಸಿಕೊಳ್ಳಲಾಗುವುದು. ಕಡಲ್ಕೊರೆತ, ಸಮುದ್ರ ಕ್ಷೋಭೆ, ನೆರೆ, ಪ್ರಳಯ ಮೊದಲಾದ ಪ್ರಾಕೃತಿಕ ದುರಂತಗಳು ಎದುರಾದಾಗ ತುರ್ತು ರಕ್ಷಣಾ ಕಾರ್ಯಗಳಿಗೆ ಈ ಸ್ಕ್ವಾಡ್‌ಗಳನ್ನು ಬಳಸಿಕೊಳ್ಳಲಾಗುವುದು. ಯಾವುದೇ ಪ್ರಾಕೃತಿಕ ವಿಕೋಪ ಇಲ್ಲದ ಸಂದರ್ಭಗಳಲ್ಲಿ ಈ ಸ್ಕ್ವಾಡ್‌ನ‌ಲ್ಲಿರುವ ಮೀನು ಕಾರ್ಮಿಕರಿಗೆ ಮೀನುಗಾರಿಕೆಯಲ್ಲಿ ತೊಡಗಬಹುದು. ಈ ಸ್ಕ್ವಾಡ್‌ಗೆ ಸರಕಾರ ನಿಗದಿಪಡಿಸುವ ಗೌರವ ಧನವನ್ನು ನೀಡಲಾಗುವುದು. ಸ್ಕ್ವಾಡ್‌ಗಳನ್ನು ರೂಪೀಕರಿಸಲು ಎಲ್ಲಾ ಸುರಕ್ಷಾ ವ್ಯವಸ್ಥೆಗಳಿಗರುವ ದೋಣಿ, ಮೀನುಗಾರಿಕಾ ಬೋಟ್‌ಗಳ ಮಾಲಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಸ್ಕ್ವಾಡ್‌ಗೆ ಆಯ್ಕೆಯಾಗುವ ಬೆಸ್ತರಿಗೆ ಗೋವಾದಲ್ಲಿರುವ ಇನ್‌ಸ್ಟಿಟ್ಯೂಟ್‌ ಆಫ್‌ ವಾಟರ್‌ ಸ್ಟೋರ್ನಲ್ಲಿ ರಕ್ಷಣಾ ಕಾರ್ಯದ ಕುರಿತಾಗಿ ತರಬೇತಿ ನೀಡಲಾಗುವುದು.

ಕೂಡಲೇ ಅರ್ಜಿ ಸಲ್ಲಿಸಿ
ಪರಂಪರಾಗತ ಮೀನುಗಾರಿಕಾ ದೋಣಿಯ ಮಾಲಕ ಮತ್ತು ಇಬ್ಬರು ಕಾರ್ಮಿಕರು ಒಳಗೊಂಡ ಗ್ರೂಪ್‌, ಮೆಕನೈಸ್ಡ್ ವಿಭಾಗದಲ್ಲಿ ಚಾಲಕ, ಮಾಲಕ, ಪ್ರತಿನಿಧಿಗಳನ್ನೊಳಗೊಂಡ ಗ್ರೂಪ್‌ ಅರ್ಜಿ ಸಲ್ಲಿಸಬೇಕು. ದೋಣಿ ಅಥವಾ ಬೋಟ್‌ಗಳ ಮಾಲಕರಿಗೆ ಮೀನುಗಾರಿಕೆಯ ಬಗ್ಗೆ ಯಾವುದೇ ಅನುಭವಗಳಿಲ್ಲದಿದ್ದಲ್ಲಿ ಅವರ ಬದಲಿಯಾಗಿ ಅನುಭವಿ ಮೀನು ಕಾರ್ಮಿಕರನ್ನು ಸೇರಿಸಿಕೊಳ್ಳಬಹುದು. ಈ ಬಗ್ಗೆ ಅರ್ಜಿಯಲ್ಲಿ ಪ್ರತ್ಯೇಕವಾಗಿ ಸೂಚನೆಯನ್ನು ನೀಡಬೇಕು. ಅರ್ಜಿ ನಮೂನೆಗಳು ಫಿಶರೀಸ್‌ ಇಲಾಖೆಯ ಜಿಲ್ಲಾ ಕಚೇರಿ, ಫಿಶರೀಸ್‌ ಸ್ಟೇಶನ್‌ಗಳು, ಮತ್ಸ್ಯ ಭವನಗಳಲ್ಲಿ ಲಭಿಸುವುವು. ಅರ್ಜಿಯನ್ನು ನ. 15ರ ಸಂಜೆ 5 ಗಂಟೆಯವರೆಗೆ ಸ್ವೀಕರಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next