Advertisement

NCC ಉದ್ಯಾವರದಲ್ಲಿ ಸಾಗರ ನೌಕಾಯಾನ ಸಾಹಸಯಾತ್ರೆ: 72 ಮಂದಿಗೆ ತರಬೇತಿ

12:33 AM Sep 19, 2023 | Team Udayavani |

ಉಡುಪಿ: ಭಾರತೀಯ ಸೇನೆಗೆ ಸೇರಬಯಸುವ ಎನ್‌ಸಿಸಿ ವಿದ್ಯಾರ್ಥಿಗಳಿಗೆ ಸಾಗರ ನೌಕಾಯಾನ ಸಾಹಸಯಾತ್ರೆ (ಓಶಿಯನ್‌ ಸೈಲಿಂಗ್‌ ಎಕ್ಸ್‌ಪೆಡಿಶನ್‌)ಯನ್ನು ಸೆ. 13ರಿಂದ 22ರ ವರೆಗೆ ಉದ್ಯಾವರದ ಹಿನ್ನೀರಿನಲ್ಲಿ ಹಮ್ಮಿಕೊಳ್ಳಲಾಗಿದೆ.

Advertisement

ಶಿಬಿರದಲ್ಲಿ ಉಡುಪಿ, ದ.ಕ., ಮೈಸೂರು, ಬೆಂಗಳೂರು, ಕಾರವಾರ ಹಾಗೂ ಗೋವಾದ 6 ನೇವಲ್‌ ಎನ್‌ಸಿಸಿ ಯುನಿಟ್‌ನ 36 ಹುಡುಗಿಯರು ಹಾಗೂ 36 ಹುಡುಗರು ಇದ್ದಾರೆ. 100 ವರ್ಷಕ್ಕೂ ಅಧಿಕ ಹಳೆಯ ಡಿಕೆ ವೇಲರ್‌ ಬೋಟ್‌ನಲ್ಲಿ 5 ಪುಲ್ಲರ್‌ ಹಾಗೂ ಅವರನ್ನು ನಿಯಂತ್ರಿಸುವ ಕಾಕ್ಸನ್‌ (ಕ್ಯಾಪ್ಟನ್‌)ಗಳು ಉದ್ಯಾವರದ 21ನೇ ಕರ್ನಾಟಕ ನೇವಲ್‌ ಎನ್‌ಸಿಸಿ ಯುನಿಟ್‌ನ ಬೋಟ್‌ ಪೂಲ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಏನಿದು ಸೈಲಿಂಗ್‌
ಎಕ್ಸ್‌ಪೆಡಿಶನ್‌?
ಎನ್‌ಸಿಸಿ ಕೆಡೆಟ್‌ಗಳು ದೋಣಿಯಲ್ಲಿ ಹುಟ್ಟು ಹಾಗೂ ಸೈಲ್‌ (ಅಗಲವಾದ ಬಟ್ಟೆ) ಬಳಸಿಕೊಂಡು ಸ್ವಯಂ ಸಮುದ್ರ ಹಾಗೂ ವಾತಾವರಣದ ಹವಾಗುಣಕ್ಕೆ ಸಮನವಾಗಿ ಬೋಟನ್ನು ನಡೆಸಬೇಕಾಗುತ್ತದೆ. ಸಾಮಾನ್ಯವಾಗಿ ನದಿಗಳಲ್ಲಿ ನೀರು ಶಾಂತವಾಗಿ ಹರಿಯುತ್ತಿರುವುದರಿಂದ ಈ ಕಾರ್ಯ ಸುಲಭವೆನಿಸಿದರೂ ಕ್ಷಣಕ್ಷಣ ಬದಲಾಗುತ್ತಿರುವ ಆಳ ಸಮುದ್ರದಲ್ಲಿ ಇದು ಅಗ್ನಿ ಪರೀಕ್ಷೆಯಾಗಿರುತ್ತದೆ. ಗಾಳಿಯ ದಿಕ್ಕನ್ನು ಅರಿತು ಕೈಯಲ್ಲಿರುವ ಹಗ್ಗದಿಂದ ಸೈಲ್‌ ಅನ್ನು ನಿಯಂತ್ರಿಸಿಕೊಂಡು ನಿಗದಿತ ಗುರಿಯ ಕಡೆಗೆ ಸೈಲರ್‌ಗಳು (ಕೆಡೆಟ್‌ಗಳು) ಬೋಟನ್ನು ಮುನ್ನುಗ್ಗಿಸಿಕೊಂಡು ಸಾಗಬೇಕಾಗುತ್ತದೆ.ಇಂತಹ ಕಠಿನ ಕಾರ್ಯಕ್ಕೆ 72 ಕೆಡೆಟ್‌ಗಳು ಮಂಗಳೂರಿನ 5ನೇ ನೇವಲ್‌ ಯುನಿಟ್‌ನ ಕಮಾಂಡಿಂಗ್‌ ಆಫೀಸರ್‌ ಆಗಿರುವ ಶಿಬಿರದ ಕ್ಯಾಂಪ್‌ ಕಮಾಂಡೆಂಟ್‌ ಕಮಾಂಡರ್‌ ಕ್ಲೋಡಿ ಲೋಬೋ ಹಾಗೂ ಡೆಪ್ಯುಟಿ ಕ್ಯಾಂಪ್‌ ಕಮಾಂಡೆಂಟ್‌ ಭರತ್‌ ಕುಮಾರ್‌ ಅವರ ಉಸ್ತುವಾರಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಶಿಬಿರದ ಉದ್ದೇಶ
ಭಾರತೀಯ ನೌಕಾದಳಕ್ಕೆ ಸೇರಬಯಸುವ ಎನ್‌ಸಿಸಿ ಕೆಡೆಟ್‌ಗಳಿಗೆ ಈ ತರಬೇತಿ ಬಹಳಷ್ಟು ಉಪಯೋಗಕಾರಿಯಾಗಿದೆ. ಪ್ರಸ್ತುತ ಇಂಡಿಯನ್‌ ನೇವಿಯಲ್ಲಿ ಅತ್ಯಾಧುನಿಕ ಹಡಗುಗಳಿದ್ದು, ಅಲ್ಲಿ ಇಂತಹ ಸೈಲಿಂಗ್‌ ಅನುಭವ ಸಿಗುವ ಸಾಧ್ಯತೆ ಕಡಿಮೆ. ಇಲ್ಲಿ ನೌಕಾಯಾನದ ಪ್ರಾಥಮಿಕ ಅನುಭವವನ್ನು ಕೆಡೆಟ್‌ಗಳಿಗೆ ಕಲಿಸಲಾಗುತ್ತದೆ. ಬೋಟ್‌ ಪುಲ್ಲಿಂಗ್‌, ಸೈಲ್‌ ಅಳವಡಿಸುವುದು, ನಿಯಂತ್ರಿಸುವುದು, ಸಮುದ್ರ ಶಿಸ್ತು, ನೇವಿಗೇಶನ್‌, ಅವಘಡ ಸಂಭವಿಸಿದಾಗ ಜೀವ ರಕ್ಷಣೆ, ದೈತ್ಯ ಅಲೆಗಳನ್ನು ಭೇದಿಸಿಕೊಂಡು ಬೋಟ್‌ ನಡೆಸುವುದು, ದೈಹಿಕ ಹಾಗೂ ಮಾನಸಿಕ ಕ್ಷಮತೆ ಬೆಳೆಸುವುದಲ್ಲದೆ ಈ ತರಬೇತಿ ಪಡೆದ ಕೆಡೆಟ್‌ಗಳಲ್ಲಿ ಇತರರಿಗಿಂತ ಹೆಚ್ಚಿನ ಆತ್ಮವಿಶ್ವಾಸ ಬೆಳೆಯಲಿದೆ.

ವಿವಿಧ ಚಟುವಟಿಕೆ
10 ದಿನಗಳ ಈ ಶಿಬಿರದಲ್ಲಿ ಕೆಡೆಟ್‌ಗಳು ಸೈಲಿಂಗ್‌, ಬೀಚ್‌ ಸ್ವಚ್ಛತೆ, ಗ್ರಾಮಗಳಿಗೆ ತೆರಳಿ ಪರಿಸರ ಸ್ವಚ್ಛತೆ, ಟ್ರೆಕ್ಕಿಂಗ್‌, ಪ್ರಥಮ ಚಿಕಿತ್ಸೆ, ಅಗ್ನಿ ಆಕಸ್ಮಿಕ ಪ್ರಾತ್ಯಕ್ಷಿಕೆ, ರಸ್ತೆ ಸುರಕ್ಷತೆ, ಕಾಲೇಜುಗಳಿಗೆ ತೆರಳಿ ಮಾದಕ ದ್ರವ್ಯ ವಿರೋಧಿ ಅಭಿಯಾನ ನಡೆಸುವುದು, ಸೈಬರ್‌ ಕ್ರೈಂ ಬಗ್ಗೆ ಮಾಹಿತಿ, ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ, ಸಾಂಸ್ಕೃತಿಕ ವಿನಿಮಯ ಮೊದಲಾದ ಚಟುವಟಿಕೆಗಳನ್ನು ನಡೆಸಲಿದ್ದಾರೆ.

Advertisement

ಪ್ರಸ್ತುತ ಉದ್ಯಾವರದ ಹಿನ್ನೀರಿನಲ್ಲಿ ಸೈಲಿಂಗ್‌ ತರಬೇತಿ ಪಡೆಯುತ್ತಿರುವ ಕೆಡೆಟ್‌ಗಳು ಶಿಬಿರದ ಕೊನೆಯ ದಿನಗಳಲ್ಲಿ ಸಮುದ್ರ ಮಾರ್ಗದಿಂದ ಸೈಂಟ್‌ ಮೇರಿಸ್‌ ದ್ವೀಪಕ್ಕೆ ತೆರಳುವ ಯೋಜನೆ ಹಾಕಿಕೊಂಡಿದ್ದಾರೆ. ಸಮುದ್ರದಲ್ಲಿ ಸೈಲಿಂಗ್‌ ನಡೆಸುವುದು ಅತ್ಯಂತ ಕ್ಲಿಷ್ಟಕರ ಸನ್ನಿವೇಶವಾಗಿದ್ದು, ಇದನ್ನು ಕೆಡೆಟ್‌ಗಳು ಹೇಗೆ ನಿಭಾಯಿಸುತ್ತಾರೆ ಎಂದು ತಿಳಿಯಲು ಈ ಶಿಬಿರ ಸಹಕಾರಿಯಾಗಲಿದೆ.
-ಕ್ಲೋಡಿ ಲೋಬೊ, ಕ್ಯಾಂಪ್‌ ಕಮಾಂಡರ್‌


Advertisement

Udayavani is now on Telegram. Click here to join our channel and stay updated with the latest news.

Next