ದೇವನಹಳ್ಳಿ: ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಮೇಲೆ ಅಂದಿನ ಜಿಲ್ಲಾಕಾರಿ, ಭೂ ಮತ್ತು ಗಣಿ ಇಲಾಖೆ ಹಾಗೂ ತಾಲೂಕು ಕಂದಾಯ ಇಲಾಖೆಯ ಅಧಿಕಾರಿಗಳು ಕಲ್ಲು ಗಣಿಗಳ ಮೇಲೆ ದಾಳಿ ನಡೆಸಿ ವಶ ಪಡಿಸಿಕೊಂಡಿದ್ದ ಕಲ್ಲು ದಿಮ್ಮಿಗಳು ಮಾಯ ವಾಗುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
2015 ರಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ವ್ಯಾಪಕ ದೂರ ಬಂದ ಹಿನ್ನಲೆ ಕೋಟ್ಯಾಂತರ ರೂ ಬೆಲೆ ಬಾಳುವ ಸುಮಾರು 5 ಸಾವಿರಕ್ಕೂ ಹೆಚ್ಚಿನ ಅಕ್ರಮ ಕಲ್ಲು ದಿಮ್ಮಿಗಳನ್ನು ವಿವಿಧ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಕಲ್ಲು ಕಳ್ಳತನಕ್ಕೆ ಸರಳ: ವಶ ಪಡಿಸಿಕೊಂಡ ಕಲ್ಲು ದಿಮ್ಮಿಗಳು ವಿಶ್ವನಾಥಪುರ ಪೊಲೀಸ್ ಠಾಣೆ ಸುತ್ತ ಮುತ್ತ, ಆಯಾ ಗ್ರಾಮಗಳ ಒಳಗೆ ರಸ್ತೆ ಪಕ್ಕ ಹಾಗೂ ಜಮೀನು ಸೇರಿದಂತೆ ಎಲ್ಲೆಂದರಲ್ಲಿ ಕಲ್ಲು ದಿಮ್ಮಿಗಳು ಬಿದ್ದಿದ್ದು, ಅದಕ್ಕೆ ಕಾವಲುಗಾರರು ಇಲ್ಲ. ಇದರಿಂದ ಕಲ್ಲು ಕಳ್ಳತನ ಮಾಡುವವರಿಗೆ ಸರಳವಾಗಿದೆ ಎಂಬುದು ಸ್ಥಳೀಯರ ಮಾತಾಗಿದೆ.
ನಡೆಯದ ಹರಾಜು: ವಶಪಡಿಸಿಕೊಂಡ ಕಲ್ಲು ದಿಮ್ಮಿ ಗಳನ್ನು ಜಿಲ್ಲಾ ಮತ್ತು ಗಣಿ ಇಲಾಖೆ ಬಹಿರಂಗ ಹರಾಜು ಮಾಡಲು 2016 ರ ಏ.11ರಂದು ದಿನ ಪತ್ರಿಕೆಯಲ್ಲಿ ಪ್ರಕಟಣೆ ನೀಡಿತ್ತು. ಕೋಯಿರಾ, ಚಿಕ್ಕಗೊಲ್ಲಹಳ್ಳಿ, ಮೀಸಗಾನ ಹಳ್ಳಿ, ಮಾಯ ಸಂದ್ರ, ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮ ವಾಗಿ ತೆಗೆಯಲಾದ 2.848 ಗ್ರೇ ಗ್ರಾನೈಟ್‌ಗಳ ಹರಾ ಜಿಗೆ ಕನಿಷ್ಠ ಖನಿಜ ಮಾರಾಟದ ಬೆಲೆ ಮೊತ್ತ 38.28 ಕೋಟಿ ರೂ, ನಿಗದಿಪಡಿಸಿತ್ತು. ಹರಾಜಿನಲ್ಲಿ ಭಾಗ ವಹಿಸುವವರು ಒಟ್ಟು ಮೊತ್ತ ಶೇ.25 ರಷ್ಟು ಇಎಮ್‌ಡಿ ಹಣವನ್ನು ಡಿಡಿ ಮೂಲಕ ಹರಾಜು ಪ್ರಕ್ರಿಯೆ ಮುಗಿದ ನಂತರ ಬೀಡ್ ಪಡೆದವರು ನೀಡಬೇಕು ಎಂಬ ಷರತ್ತು ಹಾಕಲಾಗಿತ್ತು. ಹರಾಜು ಪ್ರಕ್ರಿಯೆ ಇಲಾಖೆ ನಿಯಮದಂತೆ ನಡೆಯದ ಕಾರಣ ಅದನ್ನು ಕೈಬಿಟ್ಟದ್ದರು ಎಂದು ಸ್ಥಳಿಯ ಮುಖಂಡರು ಹೇಳುತ್ತಾರೆ.
ಪ್ರತಿಯೊಂದು ದಿಮ್ಮಿ ಕಲ್ಲಿನ ಅಗಲ ಎತ್ತರ ಮತ್ತು ಉದ್ದವನ್ನು ಅಳತೆ ಮಾಡಿ ಆಯಾ ಗ್ರಾಮಗಳ ವ್ಯಾಪ್ತಿಯ ಸರ್ವೇ ನಂಬರ್ ಅನ್ವಯ ದಿಮ್ಮಿಗಳ ಮೇಲೆ ಸಂಖ್ಯೆ ನಮೋದಿಸಲಾಗಿತ್ತು. ಅಂದು ವಶ ಪಡಿಸಿಕೊಂಡಿದ್ದ ಶೇ.50 ರಷ್ಟು ದಿಮ್ಮಿಗಳು ಈಗ ಇಲ್ಲ. ಕಲ್ಲು ಗಣಿ ಮಾಫಿಯಾ ಅವರಿಗೆ ಗಣಿ ಇಲಾಖೆ ಅಧಿಕಾರಿಗಳ ಪರೋಕ್ಷ ಬೆಂಬಲದಿಂದ ದಿಮ್ಮಿಳನ್ನು ರಾತ್ರೋ ರಾತ್ರಿ ಸಾಗಿಸುತ್ತಿರುವುದು ಮತ್ತು ಬಿದ್ದಿರುವ ದಿಮ್ಮಿಗಳನ್ನೇ ಸೀಳಿ ತಂತಿ ಬೇಲಿಗೆ ಉಪಯೋಗಿಸುವ ಕಲ್ಲು ಕಂಬಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಸ್ಥಳೀಯ ಗ್ರಾಮಸ್ಥರ ಆರೋಪವಾಗಿದೆ.