ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳ ಕಣ್ಣೀರು ಹಾಗೂ ಆಕ್ರೋಶದ ಗೋಳಾಟದ ನಡುವೆ ಮಂಗಳವಾರ ಜಯನಗರ ವಾಣಿಜ್ಯ ಸಂಕೀರ್ಣದ ಬಳಿ ಪಾಲಿಕೆ ಅಧಿಕಾರಿಗಳು ಪಾದಚಾರಿ ಮಾರ್ಗದಲ್ಲಿ ಒತ್ತುವರಿ ತೆರವು ಕಾರ್ಯಚರಣೆ ನಡೆಸಿದರು.
ಜಯನಗರ ವಾಣಿಜ್ಯ ಸಂಕೀರ್ಣದ 9ನೇ ಮುಖ್ಯರಸ್ತೆ, 10ನೇ ಮುಖ್ಯಸ್ತೆ ಹಾಗೂ 27ನೇ ಅಡ್ಡರಸ್ತೆ, 27ನೇ ಎ ಅಡ್ಡರಸ್ತೆ, 30ನೇ ಅಡ್ಡರಸ್ತೆ ಸುತ್ತಮುತ್ತಲಿನ ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ಜೆಸಿಬಿ ಯಂತ್ರದ ಮೂಲಕ ಒತ್ತುವರಿ ತೆರವು ನಡೆಯಿತು. ಗೂಡಂಗಡಿಗಳ ಮೇಲೆ ಜೆಸಿಬಿ ಯಂತ್ರಗಳ ಗರ್ಜನೆ ಆರಂಭಿಸುತ್ತಿದಂತೆ ಬೀದಿ ವ್ಯಾಪಾರಿಗಳು ಕಣ್ಣೀರು ಹಾಕಿದ್ದು ಮನ ಕಲಕುವಂತಿತ್ತು. ಉತ್ಛ ನ್ಯಾಯಾಲಯ ಹೊರಡಿಸಿರುವ ಆದೇಶ ದನುಸಾರ ಪೊಲೀಸರ ಭದ್ರತೆಯೊಂದಿಗೆ ಜಯ ನಗರ ವಾಣಿಜ್ಯ ಸಂಕೀರ್ಣದ ಸುತ್ತಮುತ್ತಲಿನ ಪಾದಚಾರಿ ಮಾರ್ಗದಲ್ಲಿ ಒತ್ತುವರಿ ತೆರವು ಕಾರ್ಯಚರಣೆಯನ್ನು ನಡೆಸಲಾಯಿತು.
ಸುಗಮ ಸಂಚಾರಕ್ಕೆ ಪಾದಚಾರಿ ಮಾರ್ಗ ಮುಕ್ತ: ಪಾದಚಾರಿ ಮಾರ್ಗದಲ್ಲಿಟ್ಟಿರುವ ಅನಧಿಕೃತ ಪೆಟ್ಟಿ ಅಂಗಡಿ ಮುಂಗಟ್ಟುಗಳು, ಅನುಪಯುಕ್ತ ತಳ್ಳುವ ಗಾಡಿ ಗಳು, ಹಣ್ಣಿನ ಬಾಕ್ಸ್‌ಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಲಾಯಿತು.
ಧ್ವನಿವರ್ಧಕದ ಮೂಲಕ ಸೂಚನೆ: ಕಾರ್ಯಾಚರಣೆ ನಡೆಯುವ ಮುನ್ನ ಒತ್ತುವರಿ ಮಾಡದಂತೆ ಧ್ವನಿವರ್ಧಕ ಮುಖಾಂತರ ವ್ಯಾಪಾರಿಗಳ ಗಮನಕ್ಕೆ ತರಲಾಗಿದ್ದರೂ ಈ ರಸ್ತೆಗಳಲ್ಲಿ 1 ಕಿ.ಮೀ.ನಷ್ಟು ಉದ್ದದ ಪಾದಚಾರಿ ಹಾಗೂ ರಸ್ತೆಯಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳನ್ನು ತೆರವು ಗೊಳಿಸಲಾಯಿತು. ಹಲವು ಬಾರಿ ಎಚ್ಚರಿಕೆ ನೀಡಿದ್ದೆವು: 200 ಅನ ಧಿಕೃತ ಮಳಿಗೆಗಳನ್ನು ತೆಗೆದುಹಾಕಲಾಗಿದೆ. ಆರು ತಿಂಗಳ ಹಿಂದೆ ತೆರವು ಕಾರ್ಯಾಚರಣೆ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.
ಬಳಿಕ ಮೂರು ತಿಂಗಳ ಹಿಂದೆ ಮತ್ತೆ ಎಚ್ಚರಿಕೆ ನೀಡಲಾಗಿತ್ತು. ನ.4ರಂದು ನಾವು ಈ ಪ್ರದೇಶದಲ್ಲಿ ತೆರೆದ ಮೈಕ್ ಬಳಸಿ, ಅಕ್ರಮ ಮಳಿಗೆಗಳನ್ನು ತೆರವುಗೊಳಿಸುವುದಾಗಿ ಹೇಳಿ ದ್ದೆವು. ಈ ಹಿನ್ನೆಲೆ ಫುಟ್‌ಪಾತ್‌ಗಳಲ್ಲಿನ ಅಕ್ರಮ ಅಂಗಡಿಗಳನ್ನು ನೆಲಸಮಗೊಳಿಸಿದ್ದೇವೆ ಎಂದು ಪಾಲಿಕೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಲವಂತವಾಗಿ ತೆರವು ಮಾಡಿದ್ದಾರೆ: ಈ ವೇಳೆ ಮಾತನಾಡಿ ಬೀದಿ ಬದಿ ವ್ಯಾಪಾರಿಗಳು, ಯಾವುದೇ ಪರ್ಯಾಯ ಜಾಗಗಳನ್ನು ನೀಡದೇ ಪಾಲಿಕೆ ಅಧಿಕಾರಿ ಗಳು ಪೊಲೀಸರ ನೆರವಿನೊಂದಿಗೆ ಬಲವಂತ ವಾಗಿ ತೆರವು ನಡೆಸಿದ್ದಾರೆ ಎಂದು ಸಿಟ್ಟು ಹೊರಹಾಕಿದರು. ತೆರವು ಕಾರ್ಯಾಚರಣೆಯಲ್ಲಿ ಪಾಲಿಕೆ ಕಾರ್ಯ ಪಾಲಕ ಅಭಿಯಂತರರು, ಸಹಾಯಕ ಕಾರ್ಯ ಪಾಲಕ ಅಭಿಯಂತರರು, ಆರೋಗ್ಯಾಧಿಕಾರಿಗಳು, ಮಾರುಕಟ್ಟೆ ವಿಭಾಗದ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು, ಸಂಚಾರಿ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮಾರ್ಷಲ್‌ಗಳು ಪಾಲ್ಗೊಂಡಿದ್ದರು.