Advertisement

Obstructive sleep apnea:ನಿದ್ರಾಶ್ವಾಸ ಸ್ತಂಭನವನ್ನು ಶಸ್ತ್ರಚಿಕಿತ್ಸೆಯಿಂದ ಗುಣಪಡಿಸಬಹುದೇ

11:45 AM Oct 08, 2023 | Team Udayavani |

ರಾತ್ರಿ ನಿದ್ದೆಯಲ್ಲಿ ಉಸಿರುಗಟ್ಟಿದಂತಾಗಿ ಹಠಾತ್ತನೆ ಎದ್ದು ಉಸಿರಿಗಾಗಿ ಕಷ್ಟಪಡುವುದು ಒಂದು ಅಪಾಯಕಾರಿ ಲಕ್ಷಣ. ಇದು ನಿದ್ರಾ ಶ್ವಾಸಸ್ತಂಭನ (ಒಬ್‌ಸ್ಟ್ರಕ್ಟಿವ್‌ ಸ್ಲೀಪ್‌ ಅಪ್ನಿಯಾ- ಒಎಸ್‌ಎ) ಆಗಿರಬಹುದು! ಒಎಸ್‌ಎ ಎಂದರೇನು? ಶ್ವಾಸಾಂಗದ ಮೇಲ್ಭಾಗವು ನಾವು ನಿದ್ದೆ ಹೋಗಿರುವಾಗ ಮುಚ್ಚಿಕೊಳ್ಳುವ ತೊಂದರೆ ಇದು. ಇದರಿಂದಾಗಿ ನಿದ್ದೆಗೆ ತೊಂದರೆಯಾಗಿ ಜೀವನ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು.

Advertisement

ಮಾತ್ರವಲ್ಲದೆ ಒಎಸ್‌ ಎಯಿಂದ ಅಧಿಕ ರಕ್ತದೊತ್ತಡ, ಹೃದ್ರೋಗಗಳು ಮತ್ತು ಲಕ್ವಾ ಉಂಟಾಗುವ ಅಪಾಯ ಹೆಚ್ಚುತ್ತದೆ. ಒಎಸ್‌ಎಯು ಇತರರ ಜತೆಗೆ ಸೌಹಾರ್ದ ಸಂಬಂಧದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುವ ಮೂಲಕ ಶಾಲೆ ಅಥವಾ ಉದ್ಯೋಗ ಸ್ಥಳದಲ್ಲಿ ಕಳಪೆ ಸಾಧನೆಗೆ ಕಾರಣವಾಗಬಹುದು. ರಸ್ತೆ ಅಪಘಾತ ಹೆಚ್ಚಳವಾಗಲು ಸಾಧ್ಯ. ಸ್ತ್ರೀ ಮತ್ತು ಪುರುಷರಿಬ್ಬರಲ್ಲಿಯೂ ಒಎಸ್‌ಎ ಕಂಡುಬರಬಹುದಾದರೂ 40ಕ್ಕಿಂತ ಹೆಚ್ಚು ವಯಸ್ಸಿನ ಪುರುಷರಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ.

ಸಾಮಾನ್ಯವಾಗಿ ಬಾಧಿತ ವ್ಯಕ್ತಿಯು ನಿದ್ರಾವಸ್ಥೆಯಲ್ಲಿರುವಾಗ ಜತೆಯಲ್ಲಿ ಮಲಗಿರುವ ಸಂಗಾತಿ, ಕುಟುಂಬ ಸದಸ್ಯರು ಅಥವಾ ಗೆಳೆಯ-ಗೆಳತಿಯರು ಮೊದಲ ಬಾರಿಗೆ ನಿದ್ರಾ ಶ್ವಾಸಸ್ತಂಭನದ ಲಕ್ಷಣಗಳನ್ನು ಗುರುತಿಸುತ್ತಾರೆ. ಒಎಸ್‌ಎಯ ಸಾಮಾನ್ಯ ಲಕ್ಷಣಗಳೆಂದರೆ:

„ ಗಟ್ಟಿಯಾದ ಗೊರಕೆ

„ ನಿದ್ದೆಯಿಂದ ಹಠಾತ್ತನೆ ಎದ್ದು ಉಸಿರಾಡಲು ಕಷ್ಟಪಡುವುದು

Advertisement

„ ಹಗಲು ನಿದ್ದೆ ತೂಗುವುದು

„ ಬೆಳಗ್ಗೆ ತಲೆನೋವು

„ ಉದ್ಯೋಗ ಅಥವಾ ಶಾಲೆಯಲ್ಲಿ ಕಳಪೆ ಸಾಧನೆ

„ ಸ್ಮರಣ ಶಕ್ತಿ ಕೊರತೆ

„ ಖನ್ನತೆ

ನಾವು ನಿದ್ದೆ ಹೋದಾಗ ಶ್ವಾಸಾಂಗದ ಮೇಲ್ಭಾಗದ ಸ್ನಾಯುಗಳು ವಿಶ್ರಮಿಸುತ್ತವೆ. ಆದರೆ ಒಎಸ್‌ಎಗೆ ತುತ್ತಾಗಿರುವವರಲ್ಲಿ ಇಂತಹ ಸ್ನಾಯು ಸಂಕುಚನದ ಪ್ರಮಾಣವು ಕೆಳಗೆ ನೀಡಲಾಗಿರುವ ಕಾರಣಗಳಿಂದಾಗಿ ಹೆಚ್ಚು ಪ್ರಮಾಣದಲ್ಲಿರುತ್ತದೆ:

„ ಹೆಚ್ಚು ದೇಹತೂಕ: ದೇಹದಲ್ಲಿ ಅತಿಯಾದ ತೂಕ, ಕೊಬ್ಬು ಶೇಖರಣೆಯಾದಾಗ ಕುತ್ತಿಗೆ ಭಾಗದಲ್ಲಿ ಮೃದು ಅಂಗಾಂಶ ರಾಶಿ ಹೆಚ್ಚುತ್ತದೆ.

„ ಮತ್ತು ಬರುವಂತಹ ಔಷಧಗಳು, ಮದ್ಯಪಾನ ಅಥವಾ ಧೂಮಪಾನ

„ ದೇಹರಚನೆಯಲ್ಲಿ ಅಡೆತಡೆಗಳು: ಮೂಗಿನ ಹೊಳ್ಳೆಗಳು ಮತ್ತು ಶ್ವಾಸಾಂಗ ಓರೆಕೋರೆಯಾಗಿರುವುದು ಮತ್ತು ಅಡಚಣೆಯಿಂದ ಕೂಡಿರುವುದು (ಗ್ರಾಸ್‌ ಡೀವಿಯೇಟೆಡ್‌ ನೇಸಲ್‌ ಸೆಪ್ಟಮ್‌ ವಿತ್‌ ಟರ್ಬಿನೇಟ್‌ ಹೈಪರ್‌ಟ್ರೊಫಿ), ದೊಡ್ಡ ಗಾತ್ರದ ಟಾನ್ಸಿಲ್‌ಗ‌ಳು, ಅಡೆನಾಯ್ಡಗಳು, ದೊಡ್ಡ ನಾಲಗೆ ಮತ್ತು ದವಡೆ ಮುಂಚಾಚಿರುವುದು.

„ ನಿದ್ರಾ ಶ್ವಾಸಸ್ತಂಭನ ರೋಗಪತ್ತೆಗೆ ಸಂಯೋಜಿತ ವಿಶ್ಲೇಷಣೆ ಅಗತ್ಯವಾಗಿರುತ್ತದೆ. ರೋಗಿಗಳಿಗೆ ಶ್ವಾಸಾಂಗದ ಮೇಲ್ಭಾಗದ ಎಂಡೊಸ್ಕೊಪಿ, ಇಡೀ ರಾತ್ರಿಯ ಪಾಲಿಸೊಮ್ನೊಗ್ರಫಿ (ನಿದ್ದೆಯ ಅಧ್ಯಯನ) ಮತ್ತು ಡ್ರಗ್‌ ಇಂಡ್ನೂಸ್ಡ್ ಸ್ಲಿàಪ್‌ ಎಂಡೊಸ್ಕೊಪಿ (ಡಿಐಎಸ್‌ಇ) ನಡೆಸಬೇಕಾಗುತ್ತದೆ.

„ ಶ್ವಾಸಾಂಗದ ಒಳಭಾಗದಲ್ಲಿ ಸಂರಚನೆಯ ಅಸಹಜತೆಗಳೇನಾದರೂ ಇವೆಯೇ ಎಂಬುದನ್ನು ತಿಳಿಯಲು ಶ್ವಾಸಾಂಗದ ಮೇಲ್ಭಾಗದ ಎಂಡೊಸ್ಕೊಪಿ ನಡೆಸಬೇಕಾಗುತ್ತದೆ.

„ ಪಾಲಿಸೊಮ್ನೊಗ್ರಫಿಯಿಂದ ವ್ಯಕ್ತಿಯು ನಿದ್ದೆಯಲ್ಲಿರುವಾಗ ವಿವಿಧ ಮನೋಶಾಸ್ತ್ರೀಯ ಘಟನೆಗಳ ಏಕಕಾಲಿಕ ದಾಖಲೆಯನ್ನು ಒದಗಿಸುತ್ತದೆ. ನಿದ್ದೆಯ ಸ್ಥಿತಿ ಮತ್ತು ಉಸಿರಾಟದಲ್ಲಿ ಅಸಹಜತೆಗಳ ವಿವರವಾದ ಮಾಹಿತಿಯನ್ನು ಇದು ಒದಗಿಸುತ್ತದೆ.

„ ಔಷಧಶಾಸ್ತ್ರೀಯವಾಗಿ ಬರಿಸಿದ ನಿದ್ದೆಯ ಸಂದರ್ಭದಲ್ಲಿ ಶ್ವಾಸಾಂಗದಲ್ಲಿ ಉಂಟಾಗಿರುವ ಅಡಚಣೆಯ ಸ್ಥಳ, ಗಂಭೀರತೆ ಮತ್ತು ಶೈಲಿಯನ್ನು ತಿಳಿದುಕೊಳ್ಳಲು ಡ್ರಗ್‌ ಇಂಡ್ನೂಸ್ಡ್ ಸ್ಲೀಪ್‌ ಎಂಡೊಸ್ಕೊಪಿ ಸಹಾಯ ಮಾಡುತ್ತದೆ. ಶಸ್ತ್ರಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಯೋಜಿಸಲು ಇದು ನೆರವಾಗುತ್ತದೆ.

ನಿದ್ದೆಯ ಸಂದರ್ಭದಲ್ಲಿ ಉಸಿರಾಟವು ಅಡಚಣೆಮುಕ್ತವಾಗಿರಬೇಕೆ ನ್ನುವುದು ಒಎಸ್‌ ಎಗೆ ಚಿಕಿತ್ಸೆ ನೀಡುವುದರ ಗುರಿಯಾಗಿದೆ. ಚಿಕಿತ್ಸೆಯ ಆಯ್ಕೆಗಳು ಈ ಕೆಳಗಿನಂತಿವೆ:

„ ಜೀವನ ಶೈಲಿಯಲ್ಲಿ ಬದಲಾವಣೆಗಳು

„ ಬೊಜ್ಜು ಕೂಡ ಹೊಂದಿರುವವರಿಗೆ ತೂಕ ನಿಯಂತ್ರಣ ವಿಧಾನಗಳು ಮತ್ತು ವ್ಯಾಯಾಮಗಳನ್ನು ಅನುಸರಿಸಲು ಶಿಫಾರಸು ಮಾಡಲಾಗುತ್ತದೆ.

„ ಧೂಮಪಾನ, ಮತ್ತು ಬರುವ ಔಷಧಗಳು ಮತ್ತು ಧೂಮಪಾನ ತ್ಯಜಿಸಲು ಸೂಚಿಸಲಾಗುತ್ತದೆ.

„ ಒಂದು ಬದಿಗೆ ಮಲಗಿ ನಿದ್ದೆ ಮಾಡಲು ಸೂಚಿಸಲಾಗುತ್ತದೆ.

ಶ್ವಾಸಾಂಗದಲ್ಲಿ ಸತತ ಸಕ್ರಿಯ ಒತ್ತಡ

ಇದರಲ್ಲಿ ಒಂದು ಮಾಸ್ಕ್ ಮೂಲಕ ಶ್ವಾಸಾಂಗದಲ್ಲಿ ಸತತವಾಗಿ ಸಕ್ರಿಯ ಒತ್ತಡ ಇರುವಂತೆ ನೋಡಿಕೊಳ್ಳಲಾಗುತ್ತದೆ. ಇದರಿಂದಾಗಿ ನಿದ್ದೆ ಮಾಡಿರುವಾಗ ಶ್ವಾಸಮಾರ್ಗವು ಸಂಕುಚನಗೊಳ್ಳುವುದು ತಪ್ಪುತ್ತದೆ.

ಬಾಯಿಗೆ ಸಲಕರಣೆಗಳು

ನಾಲಗೆಯನ್ನು ಹಿಡಿದಿರಿಸಿಕೊಳ್ಳುವ ಸಲಕರಣೆಗಳು ಅಥವಾ ಮ್ಯಾಂಡಿಬ್ಯುಲಾರ್‌ ಅಡ್ವಾನ್ಸ್‌ಮೆಂಟ್‌ ಸಲಕರಣೆಗಳು ನಾಲಗೆ ಮತ್ತು ದವಡೆಯನ್ನು ಮುಂದಕ್ಕೆ ನೂಕಿ ಹಿಡಿದಿರಿಸಿಕೊಳ್ಳುವುದರಿಂದ ಗಂಟಲಿನಲ್ಲಿ ಸ್ಥಳಾವಕಾಶ ಹೆಚ್ಚುತ್ತದೆ.

ಶಸ್ತ್ರಚಿಕಿತ್ಸೆ

ಶ್ವಾಸಾಂಗದ ಸಂರಚನೆಯಲ್ಲಿಯೇ ಅಡಚಣೆ ಇದ್ದಲ್ಲಿ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆಯ ಮೂಲಕ ನಿರ್ವಹಣೆಗೆ ಹಂತಹಂತವಾದ ಕಾರ್ಯಾಚರಣೆ ಅಗತ್ಯವಾಗುತ್ತದೆ. ಶ್ವಾಸಾಂಗದಲ್ಲಿ ಅಡಚಣೆ ಇರುವ ಸ್ಥಾನವನ್ನು ಡಿಐಎಸ್‌ಇಯ ಮೂಲಕ ಖಚಿತಪಡಿಸಿಕೊಂಡು ಯಾವ ವಿಧದ ಶಸ್ತ್ರಚಿಕಿತ್ಸೆ ಮತ್ತು ಎಷ್ಟರ ಮಟ್ಟಿಗೆ ನಡೆಸಬೇಕು ಎಂದು ನಿರ್ಧರಿಸಲಾಗುತ್ತದೆ. ಕೆಲವು ರೋಗಿಗಳಿಗೆ ಒಂದಕ್ಕಿಂತ ಹೆಚ್ಚು ಬಾರಿ ಶಸ್ತ್ರಚಿಕಿತ್ಸೆ ನಡೆಸಬೇಕಾಗಬಹುದು. ಒಎಸ್‌ಎಗೆ ಶಸ್ತ್ರಚಿಕಿತ್ಸೆಯು ಮೂಗು, ಟಾನ್ಸಿಲ್‌, ಅಡೆನಾಯ್ಡ, ಮೃದು ಅಂಗುಳ ಮತ್ತು ನಾಲಗೆಯನ್ನು ಕೇಂದ್ರೀಕರಿಸಿ ನಡೆಯಬಹುದು.

ಮೂಗಿನಲ್ಲಿ, ಕೇಂದ್ರ ಎಲುಬಿನಿಂದ ಸ್ಥಾನವು ವ್ಯತ್ಯಸ್ಥವಾಗಿದ್ದರೆ ಸೆಪ್ಟೊಪ್ಲಾಸ್ಟಿಯ ಮೂಲಕ ಸರಿಪಡಿಸಬಹುದು. ಮೂಗಿನಲ್ಲಿ ದುರ್ಮಾಂಸ ಅಥವಾ ಪಾಲಿಪ್ಸ್‌ ಇದ್ದರೆ ಎಂಡೊಸ್ಕೊಪಿಕ್‌ ಸೈನಸ್‌ ಶಸ್ತ್ರಚಿಕಿತ್ಸೆಯ ಮೂಲಕ ನಿವಾರಿಸಬಹುದಾಗಿದೆ. ಸಣ್ಣ ಮಕ್ಕಳಲ್ಲಿ ಮೂಗಿನ ಹಿಂಭಾಗದಲ್ಲಿ ಅಡೆನಾಯ್ಡ ಇದ್ದಲ್ಲಿ ಅಡೆನಾಯ್ಡೊಕ್ಟೊಮಿಯ ಮೂಲಕ ನಿಭಾಯಿಸಬಹುದಾಗಿದೆ.

ದೊಡ್ಡ ಗಾತ್ರದ ಟಾನ್ಸಿಲ್‌ಗ‌ಳು ಇದ್ದಲ್ಲಿ ಅವು ಕೂಡ ಗಮನಾರ್ಹ ಅಡಚಣೆಯನ್ನು ಉಂಟು ಮಾಡಬಹುದಾಗಿದ್ದು, ಟಾನ್ಸಿಲೆಕ್ಟೊಮಿ ಮೂಲಕ ನಿಭಾಯಿಸಬಹುದಾಗಿದೆ.

ಮೃದು ಅಂಗುಳವನ್ನು ನಿರ್ವಹಿಸಬಹುದಾದ ಅನೇಕ ಶಸ್ತ್ರಚಿಕಿತ್ಸಾತ್ಮಕ ವಿಧಾನಗಳಿವೆ. ಪಾಲೇಟಲ್‌ ಇಂಪ್ಲಾಂಟ್‌ ಮತ್ತು ಎಲೆಕ್ಟ್ರೊಕಟ್ರಿಯ ಮೂಲಕ ಮೃದು ಅಂಗುಳವನ್ನು ಗಡುಸಾಗಿಸಬಹುದು. ಉವುಲೊಪಾ ಲೇಟೊಫ್ಯಾರಿಂಜೊಪ್ಲಾಸ್ಟಿ, ಲೇಸರ್‌ ಮತ್ತು ಕೊಬ್ಲೇಟರ್‌ ಸಹಾಯದಿಂದ ಉವುಲೊಪ್ಲಾಸ್ಟಿ, ಬಾರ್ಬ್ಡ್‌ ವೈರ್‌ ಫಾರಿಂಜೊಪ್ಲಾಸ್ಟಿ ಮತ್ತು ಪಲೇಟಲ್‌ ಅಡ್ವಾನ್ಸ್‌ ಮೆಂಟ್‌ ಸರ್ಜರಿ ಇತರ ವಿಧಾನಗಳಾಗಿವೆ.

ನಾಲಗೆ ಅಂಗಾಂಶಗಳನ್ನು ತೆಗೆದುಹಾಕುವುದು ಅಥವಾ ಲೇಸರ್‌ ಉಪಯೋಗಿಸಿ ಲಿಂಫಾಯ್ಡ ಅಂಗಾಂಶಗಳನ್ನು ತೆಗೆದುಹಾಕುವ ಮೂಲಕ ನಾಲಗೆಯ ಗಾತ್ರವನ್ನು ತಗ್ಗಿಸುವುದು ನಾಲಗೆಯ ಮೇಲೆ ನಡೆಸುವ ಶಸ್ತ್ರಚಿಕಿತ್ಸೆಯ ಉದ್ದೇಶಗಳಾಗಿವೆ.

ಒಎಸ್‌ಎಗೆ ಶಸ್ತ್ರಚಿಕಿತ್ಸೆಗಳನ್ನು ಪರಿಗಣಿಸುವಾಗ, ಹಂತಹಂತವಾದ ವಿಧಾನವನ್ನು ಅನುಸರಿಸಬೇಕು. ಮೂಗು, ಧ್ವನಿಪೆಟ್ಟಿಗೆ, ಟಾನ್ಸಿಲ್‌ಗ‌ಳು ಮತ್ತು ನಾಲಗೆಯ ಸಂರಚನೆಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸುವುದರಿಂದ ರೋಗಿಗೆ ಪ್ರಯೋಜನವಾಗುವುದು ನಿಶ್ಚಿತ. ತೊಂದರೆಯು ಗಂಭೀರ ಸ್ವರೂಪದಲ್ಲಿದ್ದಾಗ ಅಥವಾ ಚಿಕಿತ್ಸೆಗೆ ಸ್ಪಂದಿಸದ ರೋಗಿಗಳಲ್ಲಿ ಮಾತ್ರ ಟ್ರೇಕಿಯೊಸ್ಟೊಮಿ (ಶ್ವಾಸನಾಳವನ್ನು ತೆರೆಯುವುದು) ಕೊನೆಯ ಆಯ್ಕೆಯಾಗಿ ಪರಿಗಣಿಸಬೇಕು. ರೋಗಶಮನದ ಪ್ರಗತಿಯನ್ನು ತಿಳಿದುಕೊಳ್ಳುವುದಕ್ಕಾಗಿ ಶಸ್ತ್ರಚಿಕಿತ್ಸೆಯ ಬಳಿಕದ ನಿದ್ರಾ ವಿಶ್ಲೇಷಣೆಯನ್ನು ನಡೆಸಬೇಕು.

ನಿದ್ರಾ ಶ್ವಾಸಸ್ತಂಭನದ ತೊಂದರೆಯನ್ನು ನಿವಾರಿಸಿಕೊಂಡು ಉತ್ತಮ ಗುಣಮಟ್ಟದ ಜೀವನವನ್ನು ನಡೆಸಲು ಆದಷ್ಟು ಬೇಗನೆ ಚಿಕಿತ್ಸೆ ಪಡೆದುಕೊಳ್ಳುವುದು, ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಸೂಕ್ತ

ನಿದ್ದೆಯಲ್ಲಿರುವಾಗ ಶ್ವಾಸಾಂಗದ ಮೇಲ್ಭಾಗ ಮುಚ್ಚಿಕೊಳ್ಳುವುದರ ಪರಿಣಾಮವಾಗಿ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಆಗ ಮಿದುಳು ವ್ಯಕ್ತಿಯನ್ನು ನಿದ್ದೆಯಿಂದ ಎಬ್ಬಿಸುವುದರ ಮೂಲಕ ಶ್ವಾಸಾಂಗ ಮತ್ತೆ ತೆರೆದುಕೊಳ್ಳುವಂತೆ ಹಾಗೂ ಸಹಜ ಉಸಿರಾಟ ಸಾಧ್ಯವಾಗುವಂತೆ ಮಾಡುತ್ತದೆ. ಇದರಿಂದಾಗಿ ವ್ಯಕ್ತಿಗೆ ಪದೇ ಪದೆ ನಿದ್ರಾಭಂಗ ಉಂಟಾಗಿ ಹಗಲಿನಲ್ಲಿ ಆತ ಅಥವಾ ಆಕೆ ತುಂಬಾ ದಣಿಯುತ್ತಾರೆ, ತೂಕಡಿಸುತ್ತಾರೆ ಮತ್ತು ಆಲಸ್ಯದಿಂದ ಇರುತ್ತಾರೆ.

-ಡಾ| ಮನೀಶಾ ಎನ್‌.

ಇಎನ್‌ಟಿ ಸರ್ಜನ್‌ ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಇಎನ್‌ಟಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next