ಲಾಹೋರ್: ಪಾಕಿಸ್ತಾನದ ಮಹಿಳಾ ಶಾಸಕಿಯೊಬ್ಬರ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು, ಶಾಸಕಿ ಸೈಬರ್ ಕ್ರೈಮ್ ವಂಚನೆಗೊಳಗಾಗಿರುವುದಾಗಿ ದೂರು ನೀಡಿದ್ದಾರೆ. ಪಾಕಿಸ್ತಾನದ ಪಂಜಾಬ್ ನ ತಕ್ಷಿಲಾ ವಿಧಾನಸಭಾ ಕ್ಷೇತ್ರದ ಶಾಸಕಿ ಸಾನಿಯಾ ಆಶಿಖ್ ಸೈಬರ್ ಕ್ರೈಮ್ ಗೆ ಬಲಿಪಶುವಾಗಿರುವುದಾಗಿ ವರದಿ ತಿಳಿಸಿದೆ.
ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಜ್(ಪಿಎಂಎಲ್ ಎನ್) ಪಕ್ಷದ ಶಾಸಕಿ ಸಾನಿಯಾ ಅಶ್ಲೀಲ ವಿಡಿಯೋದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ್ದ ಪೊಲೀಸರು ಇತ್ತೀಚೆಗೆ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ವರದಿ ಹೇಳಿದೆ.
ಮಾಧ್ಯಮಗಳ ವರದಿ ಪ್ರಕಾರ, ಕಳೆದ ತಿಂಗಳು ಎಲ್ಲೆಡೆ ವೈರಲ್ ಆಗಿದ್ದ ವಿಡಿಯೋದ ಕುರಿತು ಸಾನಿಯಾ ಗಮನಕ್ಕೆ ಬಂದಿತ್ತು. ವಿಡಿಯೋದ ಬಗ್ಗೆ ಶಾಸಕಿ ಸಾನಿಯಾ ಪಾಕ್ ಸರ್ಕಾರ ಹಾಗೂ ತನಿಖಾ ಸಂಸ್ಥೆಗೆ ಮಾಹಿತಿ ನೀಡಿದ್ದರು.
ಪಾಕಿಸ್ತಾನದ ಆರಿ ನ್ಯೂಸ್ ವರದಿ ಪ್ರಕಾರ, ಕಳೆದ ಕೆಲವು ದಿನಗಳಿಂದ ಕಾಮಪ್ರಚೋದನೆಯ, ಅಶ್ಲೀಲ ದೃಶ್ಯವನ್ನೊಳಗೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ದುರುದ್ದೇಶದಿಂದ ತಿರುಚಿ ಮಾಡಿರುವ ವಿಡಿಯೋವಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಸಾನಿಯಾ ಫೆಡರಲ್ ಇನ್ವೆಷ್ಟಿಗೇಷನ್ ಸಂಸ್ಥೆಗೆ ದೂರು ನೀಡಿದ್ದರು.
ಅಶ್ಲೀಲ ವಿಡಿಯೋದಲ್ಲಿ ಪಿಎಂಎಲ್ ಎನ್ ಶಾಸಕಿ ಸಾನಿಯಾ ಇದ್ದಿರುವುದಾಗಿ ಆರೋಪಿಸಲಾಗಿತ್ತು. ಆದರೆ ಶಾಸಕಿ ಆರೋಪವನ್ನು ಅಲ್ಲಗಳೆದಿದ್ದಾರೆ. ದೂರಿನ ನಂತರ ಪಂಜಾಬ್ ಪ್ರಾಂತ್ಯದ ಎಫ್ ಐಎ ಅಧಿಕಾರಿಗಳು ತನಿಖೆಯನ್ನು ಕೈಗೆತ್ತಿಕೊಂಡಿದ್ದರು. ನಂತರ ಪೊಲೀಸರು ಲಾಹೋರ್ ಮೂಲದ ವ್ಯಕ್ತಿಯನ್ನು ಬಂಧಿಸಿದ್ದರು. ಆದರೆ ಪೊಲೀಸರು ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಿಲ್ಲ. ಆದರೆ ವಿಡಿಯೋದಲ್ಲಿರುವುದು ಸಾನಿಯಾ ಅಥವಾ ಬೇರೆ ಮಹಿಳೆಯೇ ಎಂಬ ಬಗ್ಗೆ ಪೊಲೀಸರು ಸ್ಪಷ್ಟಪಡಿಸಿಲ್ಲ ಎಂದು ವರದಿ ತಿಳಿಸಿದೆ. ಪ್ರಕರಣದ ಬಗ್ಗೆ ಹೊಸ ಎಫ್ ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.