Advertisement
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ ಸಿಎಸ್‌ಆರ್ ಅನುದಾನದ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ಡಿ.ಕೆ.ಸುರೇಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ನಡೆದ ಸಭೆಯ ಬೆನ್ನಲ್ಲೇ ಆಕ್ಷೇಪ ಹಾಗೂ ಅನುಮಾನಗಳು ಸೃಷ್ಟಿಯಾಗುತ್ತಿವೆ. ಖಾಸಗಿ ಹಾಗೂ ಕಾರ್ಪೋರೇಟ್ ಮಾಫಿಯಾಗಳು ಈ ಮೂಲಕ ಸರ್ಕಾರಿ ಶಾಲೆಗಳ ವಿಶಾಲ ಭೂಮಿಯ ಮೇಲೆ ಕಣ್ಣು ಹಾಕಿದಂತಾಗಿದೆ ಎಂಬ ವ್ಯಾಖ್ಯಾನ ಕೇಳಿ ಬಂದಿದೆ.
ಸುಮಾರು 2800 ಕೋಟಿ ರೂ. ಸಿಎಸ್‌ಆರ್ ನೆರವು ಇದರಿಂದ ಹರಿದು ಬರಬಹುದೆಂಬುದು ಸರ್ಕಾರದ ಲೆಕ್ಕಾಚಾರ. ಇದರಿಂದ 2000 ಹೊಸ ಮಾದರಿ ಶಾಲೆಗಳನ್ನು ನಿರ್ಮಿಸುವ ಬಗ್ಗೆ ಮೊದಲ ಸಭೆಯಲ್ಲಿ ಚರ್ಚಿಸಲಾಗಿದ್ದು, ಇದರ ಲೆಕ್ಕಾಚಾರಗಳು ಹೀಗಿವೆ….
Related Articles
– ಸುಮಾರು 2800 ಕೋಟಿ ರೂ. ಸಿಎಸ್‌ಆರ್ ನಿಧಿಯನ್ನು ಇದಕ್ಕೆ ಬಳಕೆ ಮಾಡಿಕೊಳ್ಳಬಹುದೆಂಬ ಲೆಕ್ಕಾಚಾರ.
– ಪ್ರಾಥಮಿಕ, ಉನ್ನತ ಶಿಕ್ಷಣ, ಐಟಿಬಿಟಿ, ವಾಣಿಜ್ಯ, ಕೌಶಲ್ಯಾಭಿವೃದ್ಧಿ ಇಲಾಖೆಯನ್ನು ಒಳಗೊಂಡ ಸಮಿತಿ ರಚನೆ
– ಶಿಕ್ಷಣ ಇಲಾಖೆಯಿಂದ ತುರ್ತು ಕ್ರಿಯಾ ಯೋಜನೆಗೆ ಸೂಚನೆ
– ಹೊಸದಾಗಿ ನಿರ್ಮಾಣವಾಗುವ ಶಾಲೆಗಳು ಒಂದೇ ಮಾದರಿಯಲ್ಲಿರಬೇಕು.
Advertisement
ಆಕ್ಷೇಪಗಳೇನು ? :– ಶಾಲೆ ನಿರ್ಮಾಣದ ಬಳಿಕ ಅದರ ಒಡೆತನ ಸೇರುವುದು ಯಾರಿಗೆ ?
– ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುವುದು ಸರ್ಕಾರವೋ, ಖಾಸಗಿಯೋ ?
– ಹೊಸದಾಗಿ ನಿರ್ಮಾಣಗೊಂಡ ಶಾಲೆಗೆ ಅನುದಾನ ನೀಡಿದ ಸಂಸ್ಥೆಯ ಹೆಸರಿಡಲಾಗುತ್ತದೆಯೇ ?
– ಸರ್ಕಾರಿ ಶಾಲೆಗಳ ಶಿಕ್ಷಕರ ನೇಮಕಕ್ಕೆ ನಿರ್ದಿಷ್ಟ ವಿಧಾನ ಹಾಗೂ ಅರ್ಹತೆ ಇದೆ. ಖಾಸಗಿಯವರು ಇದನ್ನು ಪಾಲಿಸುತ್ತಾರೆಯೇ ?
– ಇದು ಸರ್ಕಾರಿ ಶಾಲೆಗಳ ಖಾಸಗಿಕರಣದ ಭಾಗವಲ್ಲವೇ ?
– ಮಾತೃ ಭಾಷಾ ಶಿಕ್ಷಣದ ಸ್ಥಿತಿ ಏನು ? ಈ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಇದರಿಂದ ಆರ್ಥಿಕ ಹೊರೆಯಾಗುವುದಿಲ್ಲ ಎಂಬುದನ್ನು ಮೊದಲು ಖಾತ್ರಿ ಕೊಡಬೇಕು. ಶಾಲೆಯನ್ನು ಕಟ್ಟುವ ಸಂಸ್ಥೆಗಳು ಶೈಕ್ಷಣಿಕ ಚಟುವಟಿಕೆಯ ಭಾಗವಾಗಿರುವುದಿಲ್ಲ, ಸರ್ಕಾರವೇ ಅದರ ಜವಾಬ್ದಾರಿ ಹೊರತ್ತದೆ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು.
ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸ್ಪೀಕರ್. ಸಿಎಸ್‌ಆರ್ ನಿಧಿಯಲ್ಲಿ ಖಾಸಗಿ ಶಾಲೆಗಳು ಹಾಗೂ ಕಾರ್ಪೋರೇಟ್ ಸಂಸ್ಥೆಗಳ ನೆರವಿನೊಂದಿಗೆ ಕಟ್ಟುವ ಶಾಲೆಗಳು ಖಾಸಗಿಯವರದ್ದಾಗಿರುತ್ತದೋ ಅಥವಾ ಸರ್ಕಾರದ್ದಾಗಿರುತ್ತದೋ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ಈ ಬಗ್ಗೆ ನೀತಿ ರೂಪಿಸುವುದಕ್ಕೆ ಮುನ್ನ ವಿಪಕ್ಷಗಳು ಹಾಗೂ ಶಿಕ್ಷಣ ತಜ್ಞರ ಜತೆಗೆ ಚರ್ಚೆ ನಡೆಸಲಿ. ಸರ್ಕಾರದ ಈ ನಿರ್ಧಾರದಿಂದ ಶಿಕ್ಷಣ ದುಬಾರಿಯಾಗುವ ಜತೆಗೆ ಖಾಸಗಿಕರಣಕ್ಕೆ ಬಾಗಿಲು ತೆರೆದಂತಾಗುತ್ತದೆ. ಮಾತೃ ಭಾಷಾ ಶಿಕ್ಷಣಕ್ಕೆ ಧಕ್ಕೆಯಾಗುತ್ತದೆ.
ಎನ್.ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ. ಖಾಸಗಿ ಶಾಲೆಗಳನ್ನು ನಡೆಸುವ ಸಚಿವರುಗಳೇ ಸಿಎಸ್‌ಆರ್ ನೆರವಿನೊಂದಿಗೆ ಸರ್ಕಾರಿ ಜಾಗದಲ್ಲಿ ಮಾದರಿ ಶಾಲೆ ನಿರ್ಮಿಸುತ್ತೇವೆ ಎಂದು ಹೇಳುವುದು ಹಿತಾಸಕ್ತಿಗಳ ಸಂಘರ್ಷವಾಗುತ್ತದೆ. ಸಂವಿಧಾನದಲ್ಲಿ ನಂಬಿಕೆ ಇಟ್ಟವರು ಇಂಥ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಪ್ರಬುದ್ಧತೆ ಇಲ್ಲದ ಕೆಟ್ಟ ಪ್ರಸ್ತಾಪ. ಬಹುಶಃ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ಈ ವಿಚಾರ ಬಂದಿಲ್ಲದೇ ಇರಬಹುದು. ಖಾಸಗಿ ಶಿಕ್ಷಣ ಸಂಸ್ಥೆಗಳ ಮಾರುಕಟ್ಟೆ ವಿಸ್ತರಣೆಗೆ ಸರ್ಕಾರ ನೆರವು ನೀಡಲು ಹೊರಟಿದೆಯೇ ? ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರೆಲ್ಲರೂ ಈ ಪ್ರಸ್ತಾಪವನ್ನು ವಿರೋಧಿಸಬೇಕು.
ಪಿ.ವಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞರು. ರಾಘವೇಂದ್ರ ಭಟ್