ಕಲಬುರಗಿ: ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಖ್ಯಾತ ಕಾದಂಬರಿಗಾರ್ತಿ ಡಾ| ಗೀತಾ ನಾಗಭೂಷಣ ಅವರ ನಿಧನಕ್ಕೆ ಗಣ್ಯರು, ಸಾಹಿತಿಗಳು ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರಿಂದ ಹಿಡಿದು ಹಲವರು ಶೋಕ ವ್ಯಕ್ತಪಡಿಸಿದ್ದಾರೆ.
ಹಿರಿಯ ಲೇಖಕಿ ನಾಡೋಜ ಗೀತಾ ನಾಗಭೂಷಣ ನಿಧನದ ಸುದ್ದಿ ಕೇಳಿ ದುಃಖವಾಯಿತು. ಸಾಮಾಜಿಕ ಕ್ಷೇತ್ರದಲ್ಲಿಯೂ ಕ್ರಿಯಾಶೀಲರಾಗಿದ್ದ ಅವರ ಅಗಲಿಕೆಯಿಂದ ಮಹಿಳಾ ಪರವಾದ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಗಟ್ಟಿ ದನಿಯೊಂದು ಮೌನವಾದಂತಾಗಿದೆ. ಅವರ ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದ ನಾಡೋಜ ಗೀತಾ ನಾಗಭೂಷಣ ಅವರ ನಿಧನದಿಂದ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಾಹಿತಿ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ನಾಡೋಜ ಪ್ರಶಸ್ತಿ, ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎನ್ನುವ ಗೌರವಕ್ಕೆ ಪಾತ್ರರಾಗಿದ್ದ ಡಾ| ಗೀತಾ ನಾಗಭೂಷಣ ಅಗಲಿಕೆ ಸಾಹಿತ್ಯಲೋಕಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಸಂಸದ ಡಾ| ಉಮೇಶ ಜಾಧವ ತಿಳಿಸಿದ್ದಾರೆ. ಗೀತಾ ನಾಗಭೂಷಣ ನಿಧನದಿಂದ ಸಾಹಿತ್ಯ ಕ್ಷೇತ್ರ ಅದರಲ್ಲೂ ಕಲಬುರಗಿಯ ಸಾಹಿತ್ಯ ವಲಯ ಒಬ್ಬರು ಉತ್ಕೃಷ್ಟ ಬರಹಗಾರ್ತಿಯನ್ನು ಕಳೆದುಕೊಂಡಂತಾಗಿದೆ. ಕಲಬುರಗಿಯ ಗಟ್ಟಿ ಭಾಷೆಯನ್ನೇ ತಮ್ಮ ಕಥೆ, ಕಾದಂಬರಿ ಹಾಗೂ ಬರಹಗಳಲ್ಲಿ ಬಳಸುವ ಮೂಲಕ ಕಲಬುರಗಿ ಕನ್ನಡಕ್ಕೆ ಖದರ್ ತಂದುಕೊಟ್ಟಿದ್ದರು ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ವಿಶಿಷ್ಟತೆಯನ್ನು ಗೀತಾ ನಾಗಭೂಷಣ ನೀಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ರಾಜ್ಯದ ಮೊದಲ ಮಹಿಳಾ ಸಾಹಿತಿ ಎಂಬುದು ಹೆಮ್ಮೆಯ ವಿಚಾರವಾಗಿದೆ. ಅಗಲಿದ ಮಹಾನ್ ಚೇತನಕ್ಕೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ ತಿಳಿಸಿದ್ದಾರೆ.
ರಾಜ್ಯಸಭೆ ಮಾಜಿ ಸದಸ್ಯ ಕೆ.ಬಿ. ಶಾಣಪ್ಪ, ಶಾಸಕ ಡಾ| ಅಜಯ ಸಿಂಗ್, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು, ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಸಾಹಿತಿ ಡಾ| ಸ್ವಾಮಿರಾವ್ ಕುಲಕರ್ಣಿ, ಖಾತ್ಯ ಕಲಾವಿದ ವಿ.ಜಿ. ಅಂದಾನಿ, ಮೀನಾಕ್ಷಿ ಬಾಳಿ, ಕೆ.ನೀಲಾ, ಮಡಿವಾಳಪ್ಪ ನಾಗರಹಳ್ಳಿ, ವಿಜಯಕುಮಾರ ತೇಗಲತಿಪ್ಪಿ, ರಾಜಗೋಪಾಲರೆಡ್ಡಿ ಸೇರಿದಂತೆ ಅನೇಕ ಗಣ್ಯರು ಅಗಲಿದ ಸಾಹಿತಿಗೆ ಅಂತಿಮ ಗೌರವ ಸೂಚಿಸಿದ್ದಾರೆ