Advertisement

ದಢೂತಿ ದೇಹ ನಿಮ್ಮ ಸ್ವಾಸ್ಥ್ಯವನ್ನು ಬಾಧಿಸುವ ದೀರ್ಘಾವಧಿ ಕಾಯಿಲೆ!

05:52 PM Mar 02, 2021 | Team Udayavani |

ದಶಕಗಳಿಂದಲೂ ಭಾರತದಲ್ಲಿ ದಢೂತಿ ಖಾಯಿಲೆ ಹೆಚ್ಚಾಗುತ್ತಿದ್ದು ಈ ವಿಷಯವನ್ನು ಯಾರೂ ಅಲ್ಲಗೆಳೆಯಲಾಗದು. ದಢೂತಿ ದೇಹ ಜೀವನದ ಗುಣಮಟ್ಟದ ಮೇಲೆ ನೇರವಾದ ಪ್ರಭಾವ ಬೀರಿ ಹೃದ್ರೋಗ, ಕ್ಯಾನ್ಸರ್, ಮೂಳೆಗಳ ಉರಿಯೂತ ಮತ್ತು ಮಧುಮೇಹದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅನೇಕ ವೇಳೆ ಜನರು ದಢೂತಿ ಖಾಯಿಲೆಯನ್ನು ತೂಕ ಹೆಚ್ಚಾಗಿರುವುದು ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಅದು ಸಂಕೀರ್ಣವಾದ ಪರಿಸ್ಥಿತಿಯಾಗಿದೆ. ಇದೊಂದು ದೀರ್ಘಾವಧಿ ಸ್ಥಿತಿಯಾಗಿದ್ದು, ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗುವಿಕೆಯಿಂದ ದೇಹವು ಕೊಬ್ಬನ್ನು ಶೇಖರಿಸಿ ಶಕ್ತಿಯನ್ನು ಬಳಸಿಕೊಳ್ಳುವ ವಿಧಾನದಲ್ಲಿ ಸಮಸ್ಯೆಗಳನ್ನು ಏರ್ಪಡಿಸುತ್ತದೆ.

Advertisement

ಇದನ್ನೂ ಓದಿ:ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ-2021 ಪ್ರಕಟಿಸಿದ ಡಿಸಿಎಂ ಅಶ್ವತ್ಥನಾರಾಯಣ

ದಢೂತಿ ಖಾಯಿಲೆ ಇರುವ ಜನರು ಅನೇಕ ಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ಹೃದಯ ಮತ್ತು ಧಮನಿಗಳ ಕಾಯಿಲೆ ಏರ್ಪಡುವುದರ ಜೊತೆಗೆ ನಿದ್ರಾಹೀನತೆ, ಏರು ರಕ್ತದೊತ್ತಡ, ಟೈಪ್ 2 ಮಧುಮೇಹ, ಜೀರ್ಣಕ್ರಿಯೆ ಕಾಯಿಲೆಗಳು, ಮತ್ತು ಅಥೆರೊಸ್ಕ್ಲೆರೋಸಿಸ್ ನಂತಹ ಕಾಯಿಲೆಗಳೂ ಆರಂಭವಾಗುತ್ತದೆ. ಶೈಶವಾವಸ್ಥೆಯಲ್ಲಿನ ದಢೂತತೆಯು ಈ ಪ್ರಕ್ರಿಯೆಯನ್ನು ಆರಂಭಿಸಬಹುದು ಎಂದು ಸಂಶೋಧನೆಗಳು ಸೂಚಿಸುತ್ತವೆ. ಇದು, ಜೀವನದ ನಂತರದ ಕಾಲದಲ್ಲಿ ನೀವು ಪ್ರಾಣಾಪಾಯ ತಂದೊಡ್ಡುವ ಹೃದಯದ ಕಾಯಿಲೆಯ ಪರಿಸ್ಥಿತಿಗಳನ್ನು ಎದುರಿಸುವ ಮುನ್ನವೇ ಹೃದಯ ಅಥವಾ ಧಮನಿಗಳ ಹಾನಿಯನ್ನು ಆರಂಭಿಸಿರುತ್ತದೆ.

ಅನೇಕ ಆರೋಗ್ಯಶುಶ್ರೂಷಾ ಕಾರ್ಯಕರ್ತರು ಹಾಗೂ ಅಧ್ಯಯನಗಳ ಪ್ರಕಾರ, ಒಬ್ಬ ವ್ಯಕ್ತಿ 10 ಕೆಜಿವರೆಗೆ ತೂಕ ಹೆಚ್ಚಳ ಹೊಂದಿದರೆ, ಆತ ಅಥವಾ ಆಕೆ ತಮ್ಮ ರಕ್ತದ ಒತ್ತಡದಲ್ಲಿ ಸ್ವಲ್ಪವೇ ಮಟ್ಟಿನ ಹೆಚ್ಚಳ ಎದುರಿಸಬಹುದಾದರೂ, ಇದು ಹೃದಯದ ಕಾಯಿಲೆಗಳ ಅಪಾಯವನ್ನು ಸರಿಸುಮಾರು ಶೇಕಡ 12ರಷ್ಟು ಹೆಚ್ಚಿಸಬಹುದಾಗಿದೆ. ಏರು ರಕ್ತದೊತ್ತಡವು ಹೃದಯಾಘಾತದ ಸಾಮಾನ್ಯ ಕಾರಣವಾಗಿದ್ದು, ದುರಾದೃಷ್ಟವಶಾತ್, ಇದು ದಢೂತಿ ವ್ಯಕ್ತಿಗಳಲ್ಲಿ ಅತ್ಯಂತ ಸಾಮಾನ್ಯವಾಗಿರುತ್ತದೆ. ವಿವಿಧ ಕೋಶಗಳಿಗೆ ಆಮ್ಲಜನಕ ಹಾಗೂ ಪೋಷಕಾಂಶಗಳನ್ನು ಸರಬರಾಜು ಮಾಡಲು ಅವರಿಗೆ ಹೆಚ್ಚಿನ ರಕ್ತದ ಅಗತ್ಯವೇರ್ಪಡುವುದರಿಂದ, ರಕ್ತದ ಒತ್ತಡ ಹೆಚ್ಚಾಗುತ್ತದೆ. ಈ ರಕ್ತವನ್ನು ದೇಹದೆಲ್ಲೆಡೆ ಪಸರಿಸಲು ದೇಹಕ್ಕೂ ಹೆಚ್ಚುವರಿ ಒತ್ತಡದ ಅಗತ್ಯವೇರ್ಪಡುತ್ತದೆ. ದಢೂತತೆಯು ಕೆಟ್ಟ ಕೊಬ್ಬು ಮತ್ತು ಟ್ರೈಗ್ಲಿಸರೈಡ್ ಮಟ್ಟಗಳನ್ನು ಹೆಚ್ಚಿಸುವುದಕ್ಕೆ ಕಾರಣವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಕಡಿಮೆ ತಿಳಿದ ವಿಷಯವೇನೆಂದರೆ, ಇದು ಅಧಿಕ ತೀವ್ರತೆಯ ಕೊಬ್ಬು(ಹೈ ಡೆನ್ಸಿಟಿ ಲಿಪೋಪ್ರೋಟೀನ್ಸ್ ಹೆಚ್ಡಿಎಲ್) ಕಡಿಮೆಯಾಗುವುದಕ್ಕೂ ಕಾರಣವಾಗುತ್ತದೆ.

ಕೆಟ್ಟ ಕೊಬ್ಬನ್ನು ನಿವಾರಿಸುವುದಕ್ಕೆ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುವ ಕಾರ್ಯಾಚರಣೆ ನಡೆಸುವುದಕ್ಕೆ ಹೆಚ್ ಡಿಎಲ್ ಕೊಬ್ಬು ಅತ್ಯಗತ್ಯವಾದುದು. ದಢೂತತೆಯು ಮಧುಮೇಹ ಮತ್ತು ಏರು ರಕ್ತದೊತ್ತಡದ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಮತ್ತು ಈ ಸ್ಥಿತಿಗಳು ಹೃದ್ರೋಗದೊಂದಿಗೆ ನಿಕಟ ಸಂಬಂಧ ಹೊಂದಿವೆ. ಮಧುಮೇಹ ಇರುವ ವ್ಯಕ್ತಿಗಳು, ಎರಡರಿಂದ ನಾಲ್ಕು ಪಟ್ಟು ಹೆಚ್ಚಿಗೆ ಹೃದ್ರೋಗಕ್ಕೆ ಒಳಗಾಗುವ ಅಪಾಯವನ್ನು ಹೊಂದಿರುತ್ತಾರೆ. ಹೆಚ್ಚಿನ ತೂಕವು ಕೀಲುಗಳ ಮೇಲೆ ಅದರಲ್ಲೂ ವಿಶೇಷವಾಗಿ ಮಂಡಿಯ ಮೇಲೆ ಭಾರ ಬೀಳುವುದಕ್ಕೆ ಕಾರಣವಾಗುವುದರಿಂದ, ದಢೂತಿ ವ್ಯಕ್ತಿಗಳಲ್ಲಿ ಕೀಲಿನ ಆಸ್ಟಿಯೋಆರ್ತರೈಟಿಸ್ ಅತ್ಯಂತ ಸಾಮಾನ್ಯವಾಗಿರುತ್ತದೆ ಮತ್ತು ಇಂತಹ ಜನರಲ್ಲಿ ಮಂಡಿಗಳ ಶಸ್ತ್ರಚಿಕಿತ್ಸೆಯ ನಂತರ ಚೇತರಿಕೆ ಕೂಡ ಕಷ್ಟವಾಗುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ. ತೆಳ್ಳಗಿರುವವರಿಗೆ ಹೋಲಿಸಿದರೆ, ದಢೂತಿ ವ್ಯಕ್ತಿಗಳಲ್ಲಿ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಸಂಭಾವ್ಯತೆ ಹೆಚ್ಚಾಗಿರುತ್ತದೆ.

Advertisement

ಆಹಾರ ಸೇವನೆ ಮತ್ತು ಶಕ್ತಿಯ ಹೊರಹರಿವಿನ ನಡುವಿನ ಸೂಕ್ಷ್ಮ ಸಮತೋಲನವನ್ನು ಕಾಯ್ದುಕೊಳ್ಳುವುದರಿಂದ ದಢೂತತೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ಪರಿಣಾಮಕಾರಿಯಾಗಿ ತಗ್ಗಿಸಬಹುದು. ಜನರು ತಮ್ಮ ಒಟ್ಟಾರೆ ಆರೋಗ್ಯ, ಪೌಷ್ಟಿಕತೆ, ತಿನ್ನುವ ಅಭ್ಯಾಸಗಳು, ದೈಹಿಕ ಚಟುವಟಿಕೆ ಮತ್ತು ತೂಕ ಇಳಿಸುವಿಕೆ ಪ್ರಯತ್ನಗಳ ಇತಿಹಾಸದ ಸಂಪೂರ್ಣ ವಿಶ್ಲೇಷಣೆ ಮಾಡಿಸಿಕೊಳ್ಳುವುದು ಉತ್ತಮ.

ಕೇವಲ ಹೆಚ್ಚಿಗೆ ತಿನ್ನುವುದರಿಂದ ದಢೂತತೆಯು ಉಂಟಾಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕೆ ವಂಶವಾಹಿ ಕಾರಣಗಳು, ಪರಿಸರ ಮತ್ತು ನಡವಳಿಕೆಯಂತಹ ಅನೇಕ ಕಾರಣಗಳಿರುತ್ತವೆ. ಇದು ಒಬ್ಬರೇ ಹೋರಾಡಲು ಕಷ್ಟವಾಗುವಂತಹ ಪರಿಸ್ಥಿತಿ. ರೋಗಿ ಮತ್ತು ವೈದ್ಯರು ಇಬ್ಬರೂ ಜೊತೆಗೂಡಿ ಜೀವನಶೈಲಿ, ಇಚ್ಛೆಗಳು ಹಾಗು ಪರಿಸ್ಥಿತಿಗೆ ಹೊಂದುವಂತಹ ವೈದ್ಯಕೀಯವಾಗಿ ತೀವ್ರತರವಾದ  ಚಿಕಿತ್ಸಾ ಯೋಜನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಈ ಯೋಜನೆಯು ಔಷಧಗಳ ಪರಿಶೀಲನೆ ಮತ್ತು ಸರಿಪಡಿಸುವಿಕೆ, ಪೌಷ್ಟಿಕತೆ ಬೆಂಬಲ, ಹೆಚ್ಚಿದ ದೈಹಿಕ ಚಟುವಟಿಕೆಗಳು, ಸಮಾಲೋಚನೆ ಮತ್ತು ನೀವು ಸೂಕ್ತವಾದ ಅಭ್ಯರ್ಥಿಯಾಗಿದ್ದಲ್ಲಿ, ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಮುಂತಾದವುಗಳನ್ನು ಒಳಗೊಂಡಿರಬಹುದು. ಆರಂಭಿಕ ಹಂತದಲ್ಲೇ ದಢೂತತೆಯ ಸಮಸ್ಯೆಯಿಂದ ಹೊರಬರಲು, ನಿಮ್ಮ ವೈದ್ಯರಿಂದ ತಜ್ಞ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.

ಡಾ.ಅರ್ಪಣ್ ದೇವ್ ಭಟ್ಟಾಚಾರ್ಯ,

Consultant Diabetologist and Endocrinology

Manipal Hospitals, Bangalore

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next