Advertisement

ಒಬಿಸಿ ಮೀಸಲಾತಿ: ರಾಜ್ಯ- ಕೇಂದ್ರದ ವೈರುಧ್ಯ; ನವೋದಯಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಅತಂತ್ರ!

09:59 AM Jul 31, 2020 | mahesh |

ಹೆಬ್ರಿ: ಕೇಂದ್ರ ಸರಕಾರದ ವ್ಯಾಪ್ತಿಯ ಜವಾಹರ ನವೋದಯ ವಿದ್ಯಾಲಯಗಳಿಗೆ ಆಯ್ಕೆಯಾಗಿದ್ದರೂ ರಾಜ್ಯ ಮತ್ತು ಕೇಂದ್ರ ಸರಕಾರಗಳ ಒಬಿಸಿ ಮೀಸಲಾತಿ ಪಟ್ಟಿಯಲ್ಲಿರುವ ವ್ಯತ್ಯಾಸದಿಂದಾಗಿ ಪ್ರವೇಶ ಪಡೆಯಲು ಸಾಧ್ಯವಾಗದೆ ಹಲವು ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.

Advertisement

ರಾಜ್ಯ ಸರಕಾರವು ಬಂಟರು ಯಾನೆ ನಾಡವರ ಜಾತಿಗೆ ಒಬಿಸಿ ಪ್ರಮಾಣಪತ್ರ ನೀಡುತ್ತದೆ. ಆದರೆ ಕೇಂದ್ರ ಸರಕಾರವು ಮೇ ಯಲ್ಲಿ ಜಾರಿಗೊಳಿಸಿದ ಹೊಸ ನಿಯಮದಂತೆ ಬಂಟರು ಒಬಿಸಿ ಅಡಿಯಲ್ಲಿ ಬರುವುದಿಲ್ಲ. ಉಡುಪಿ ಜಿಲ್ಲೆಯ ಚಾರ ಜವಾಹರ ನವೋದಯ ವಿದ್ಯಾಲಯದಲ್ಲಿ 2020-21ನೇ ಸಾಲಿನ 6ನೇ ತರಗತಿಗೆ ಆಯ್ಕೆಯಾದ ಬಂಟ ಸಮುದಾಯದ ಹಲವು ವಿದ್ಯಾರ್ಥಿಗಳು ಸಮಸ್ಯೆಗೊಳಗಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ವೀರಶೈವರು ಹಾಗೂ ಇತರ ಜಿಲ್ಲೆಗಳಲ್ಲಿ ಬೇರೆ ಬೇರೆ ಜಾತಿಯವರಿಗೆ ಈ ಸಮಸ್ಯೆ ಎದುರಾಗಿದೆ.

ಪೋಷಕರ ಆಕ್ರೋಶ
ಹಿಂದುಳಿದ ವರ್ಗಕ್ಕೆ ಒಳಪಡುವ ಇತರ ಜಾತಿಯವರಿಗೆ ರಾಜ್ಯದಿಂದ ದೊರೆತ ಒಬಿಸಿ ಪ್ರಮಾಣ ಪತ್ರ ಸ್ವೀಕೃತವಾಗುತ್ತಿದ್ದು ಬಂಟರದ್ದು ಮಾತ್ರ ಯಾಕೆ ಆಗುತ್ತಿಲ್ಲ ಎಂಬುದು ಪೋಷಕರ ಪ್ರಶ್ನೆ. ನಾವು ಒಬಿಸಿಗೆ ಒಳಪಡದಿದ್ದಲ್ಲಿ ಆಯ್ಕೆ ಮಾಡಿದ್ದೇಕೆ. ಮಕ್ಕಳನ್ನು ಹಿಂದಿನ ಶಾಲೆಯಿಂದ ಬಿಡಿಸಿ ವರ್ಗಾವಣೆ ಪ್ರಮಾಣ ಪತ್ರ ಪಡೆದು ನವೋದಯ ಶಾಲೆಗೆ ನೀಡಿದ್ದೇವೆ. ಈಗ ಸೇರ್ಪಡೆ ಅಸಾಧ್ಯವೆಂದರೆ ಮಕ್ಕಳ ಭವಿಷ್ಯ ಏನು ಎಂದು ಪೋಷಕಿ ಶಿವಪುರದ ಹೇಮಾ ಶೆಟ್ಟಿ ಪ್ರಶ್ನಿಸಿದ್ದಾರೆ.

ಆಯ್ಕೆ ಪ್ರಕ್ರಿಯೆ ಹೇಗೆ?
ಖಾಸಗಿ ಹಾಗೂ ಸರಕಾರಿ ಶಾಲೆಗಳ 5ನೇ ತರಗತಿ ವಿದ್ಯಾರ್ಥಿಗಳು ನವೋದಯ ಪ್ರವೇಶ ಪರೀಕ್ಷೆ ಬರೆಯಬಹುದಾಗಿದ್ದು ತೇರ್ಗಡೆಯಾದವರನ್ನು ಜನರಲ್‌, ಗ್ರಾಮೀಣ, ಒಬಿಸಿ, ಪರಿಶಿಷ್ಟ ಜಾತಿ/ಪಂಗಡದ ಆಧಾರದಲ್ಲಿ 6ನೇ ತರಗತಿಗೆ ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಉಡುಪಿ ಜಿಲ್ಲೆಯಲ್ಲಿ 80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 57 ಮಂದಿ ಒಬಿಸಿ ವರ್ಗದವರು. ಆದರೆ ಬಂಟ ವಿದ್ಯಾರ್ಥಿಗಳ ಒಬಿಸಿ ಪ್ರಮಾಣ ಪತ್ರವನ್ನು ತಿರಸ್ಕರಿಸಲಾಗಿದ್ದು, ಪ್ರವೇಶ ನಿರಾಕರಿಸಲಾಗಿದೆ.

ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಿಂದ ಬಂಟರನ್ನು ಹೊರಗಿಟ್ಟಿರುವುದರಿಂದ ಕರಾವಳಿಯಲ್ಲಿ ಬಂಟ ಸಮುದಾಯದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ನವೋದಯ ಕೇಂದ್ರದ ಗಮನಕ್ಕೆ ತರಲಾಗಿದೆ.
– ಪಳನೀವೇಲು, ಪ್ರಾಂಶುಪಾಲರು, ಜವಾಹರ ನವೋದಯ ವಿದ್ಯಾಲಯ, ಚಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next