ಹುಬ್ಬಳ್ಳಿ: ಒಬಿಸಿಗೆ ಹಿಂದಿನಿಂದಲೂ ರಕ್ಷಣೆ ಇತ್ತು. ಅಲ್ಲದೆ ಸಮಾನತೆಗೋಸ್ಕರ ಮೀಸಲಾತಿ ಇತ್ತು. ಒಬಿಸಿಗೆ ಮೀಸಲಾತಿ ಇಲ್ಲಾ ಅಂದರೆ ನಮಗೆ ಅನ್ಯಾಯವಾಗುತ್ತದೆ. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತಂದು ಮೀಸಲಾತಿ ಉಳಿಸಬೇಕು ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋಟ್೯ ಹಿಂದುಳಿದವರಿಗೆ ಯಾವ ಆಧಾರದ ಮೇಲೆ ಮೀಸಲಾತಿ ಕೊಡುತ್ತೀರಾ ಎಂದು ಪ್ರಶ್ನೆ ಮಾಡಿದೆ? ಕೇಂದ್ರ ಕೂಡಲೇ ಇದನ್ನು ಸರಿಪಡಿಸಬೇಕು ಎಂದರು.
ಸಚಿವ ಕೆ.ಎಸ್. ಈಶ್ವರಪ್ಪನವರ ಬಗ್ಗೆ ನಾನು ಹೆಚ್ಚು ಹೇಳಲು ಹೋಗುವುದಿಲ್ಲ. ಡಿಸಿಎಂ ಆಗಿದ್ದವರು. ಈ ರೀತಿ ಹೇಳಿಕೆ ನೀಡಬಾರದಿತ್ತು. ಯಾವಾಗ ಅವರಿಗೆ ರಾಜಕೀಯ ಅಭದ್ರತೆ ಬರುತ್ತದೋ ಆವಾಗ ಈ ರೀತಿ ಮಾತನಾಡುತ್ತಾರೆ. ಹಿಂದೆಯೂ ರಾಯಣ್ಣ ಬ್ರಿಗೇಡ್ ಮಾಡಿದ್ದರು. ಈಗ ಸಂಪುಟದಿಂದ ಹಿರಿಯರನ್ನು ಕೈ ಬಿಡುತ್ತಾರೆ ಎನ್ನುವ ಸುದ್ದಿ ಹಿನ್ನಲೆ ತಮ್ಮ ಸ್ಥಾನ ಉಳಿಸಿಕೊಳ್ಳಲು ದೇಶಭಕ್ತಿ ಹೇಳಿಕೆ ನೀಡುತ್ತಿದ್ದಾರೆ. ರಾಜಕೀಯವಾಗಿ ಸಮಸ್ಯೆ ಆಗುತ್ತದೆ ಎನ್ನುವಾಗ ರಾಯಣ್ಣ ನೆನಪಿಗೆ ಬಂದರು. ಮಹಾನ್ ದೇಶಭಕ್ತನ ರೀತಿ ಮಾತನಾಡುತ್ತಾರೆ. ತಮ್ಮ ಉಳಿವಿಗಾಗಿ ಏನು ಮಾಡಬೇಕು ಅದನ್ನು ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ:2008ರ ಅಹಮದಾಬಾದ್ ಸರಣಿ ಸ್ಫೋಟ ಕೇಸ್: 38 ಆರೋಪಿಗಳಿಗೆ ಮರಣದಂಡನೆ ಶಿಕ್ಷೆ
ಹಿಜಾಬ್ ವಿಚಾರ ನ್ಯಾಯಾಲದಲ್ಲಿದೆ. ಹೀಗಾಗಿ ಆ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ. ಆದರೆ ಇದನ್ನು ಈ ಮಟ್ಟಿಗೆ ಬೆಳೆಯಲು ಬಿಡಬಾರದಿತ್ತು. ಇದರಲ್ಲಿ ಸರ್ಕಾರದ ನ್ಯೂನ್ಯತೆ ಇದೆ. ಬಿಜೆಪಿಯವರಿಗೆ ತಮ್ಮ ಸರಕಾರದ ಸಾಧನೆ ಕೇಳಿದರೆ ಏನು ಮಾತನಾಡಲ್ಲ. ಕೇವಲ ಜನರ ಭಾವನೆ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.