Advertisement
ಬೆಂಗಳೂರು: ಮೆಜೆಸ್ಟಿಕ್ ಸುತ್ತಮುತ್ತಲೇನಾದರು ಮಹಿಳಾ ದೌರ್ಜನ್ಯ, ವೇಶ್ಯಾವಾಟಿಕೆಗೆ ಪ್ರಚೋದನೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ತಕ್ಷಣ “ಓಬವ್ವ’ ಪ್ರತ್ಯಕ್ಷವಾಗುತ್ತಾಳೆ. ದುಷ್ಕರ್ಮಿಗಳ ಹೆಡೆಮುರಿ ಕಟ್ಟುತ್ತಾಳೆ!
Related Articles
Advertisement
ಈ ಪಡೆ ಈಗಾಗಲೇ ಪ್ರಾಯೋಗಿಕವಾಗಿ ಕೆಲಸ ಆರಂಭಿಸಿದ್ದು, ಪ್ರತ್ಯೇಕ ವಾಹನ ಕೂಡ ನೀಡಲಾಗುತ್ತದೆ. 30-40 ಮಂದಿ ಓಬವ್ವ ಪಡೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಒಬ್ಬರು ಮಹಿಳಾ, ಮೂವರು ಪುರುಷ ಪಿಎಸ್‌ಐಗಳು ಇದರಲ್ಲಿರುತ್ತಾರೆ. ಮೂರು ಪಾಳಿಯಲ್ಲಿ ತಂಡಗಳು ಕೆಲಸ ಮಾಡುತ್ತವೆ.
ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳಾದ ಕಾತ್ಯಾಯಿನಿ ಮಹಿಳಾ ತಂಡದ ಹೊಣೆ ಹೊತ್ತರೆ, ರಾಜೇಂದ್ರ ಅವರು ಕಳ್ಳರು, ಶಂಕಿತ ವ್ಯಕ್ತಿಗಳ ಪಟ್ಟಿ ಸಿದ್ದಪಡಿಸುವ ಜವಾಬ್ದಾರಿ ನಿರ್ವಹಿಸುತ್ತಾರೆ. ರಾಮಕೃಷ್ಣಯ್ಯ ಬೀಟ್ ಹೊಣೆಗಾರಿಕೆ ಮತ್ತು ಶಿವಾನಂದ ಅಪರಾಧ ವಿಭಾಗದ ಜವಾಬ್ದಾರಿ ಹೊರಲಿದ್ದಾರೆ.
ಈ ತಂಡಗಳು ಮೆಜೆಸ್ಟಿಕ್, ಕೆ.ಜಿ.ರಸ್ತೆ, ಗಾಂಧಿನಗರ, ಸಿಟಿ ಮಾರುಟ್ಟೆ, ಬ್ಯಾಟರಾಯನಪುರ ಸೇರಿ ಪಶ್ಚಿಮ ವಲಯದ ಎಲ್ಲ ಭಾಗಗಳಲ್ಲಿ ಕಾರ್ಯನಿರ್ವಹಿಸಲಿವೆ. ಪ್ರಮುಖವಾಗಿ ಮೆಜೆಸ್ಟಿಕ್, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ನಡೆಯುವ ಮಹಿಳಾ ಕಿರುಕುಳ, ವೇಶ್ಯಾವಾಟಿಕೆ ದಂಧೆ ಸೇರಿ ಎಲ್ಲ ರೀತಿಯ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಓಬವ್ವ ಸಜ್ಜಾಗಿದ್ದಾಳೆ.
ಪ್ರಾತ್ಯಕ್ಷಿಕೆ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಉಪ್ಪಾರಪೇಟೆ ಹೊರ ಠಾಣೆಯಲ್ಲಿ ಓಬವ್ವ ಪಡೆ ಸಿಬ್ಬಂದಿ 24*7 ಮಾದರಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮಹಿಳೆಯರು ಮಾತ್ರವಲ್ಲದೆ, ಎಲ್ಲರೂ ಇಲ್ಲಿ ದೂರು ನೀಡಬಹುದು. ಆರೋಪಿಗಳ ಪ್ರಾತ್ಯಕ್ಷಿಕೆ ಅಷ್ಟೇ ಅಲ್ಲದೆ, ಉಪ್ಪಾರಪೇಟೆ ಹೊರ ಠಾಣೆಯಲ್ಲಿ ಆರೋಪಿಗಳ ಕುರಿತ ಪ್ರಾತ್ಯಕ್ಷಿಕೆ ತೋರಿಸಲಾಗುತ್ತದೆ.
ಒಂದು ವೇಳೆ ಪಿಕ್‌ಪಾಕೆಟ್, ದರೋಡೆ, ವೇಶ್ಯಾವಾಟಿಕೆಗೆ ಪ್ರಚೋದನೆ, ಮಹಿಳೆಯರಿಗೆ ಕಿರುಕುಳ, ದರೋಡೆ ಇನ್ನಿತರೆ ಅಪರಾಧಗಳು ನಡೆದಾಗ ಕೂಡಲೇ ಸಂತ್ರಸ್ತರು ಹೊರ ಠಾಣೆಗೆ ಬಂದು ದೂರು ನೀಡಬಹುದು. ಜತೆಗೆ ಅಲ್ಲೇ ಇರುವ ಪ್ರಾತ್ಯಕ್ಷಿಕೆ ಮೂಲಕ ಆರೋಪಿಗಳನ್ನು ಗುರುತಿಸಬಹುದು. ಇದರಿಂದ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲು ಅನುಕೂಲವಾಗುತ್ತದೆ.
ಸಹಾಯವಾಣಿ: ಓಬವ್ವ ಪಡೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಕಿರುಹೊತ್ತಿಗೆ ಕೂಡ ಸಿದ್ಧವಾಗಿದೆ. ಬಸ್, ರೈಲ್ವೆ ಹಾಗೂ ಕೆಲ ಸಾರ್ವಜನಿಕ ಸ್ಥಳಗಳಲ್ಲಿ ಈ ಕಿರುಹೊತ್ತಿಗೆ ಇಡಲಾಗುತ್ತದೆ. ಈ ಮೂಲಕ ಸಾರ್ವಜನಿಕರಿಗೆ ಓಬವ್ವ ಪಡೆಯ ಸಂಪೂರ್ಣ ಮಾಹಿತಿ ಸಿಗಲಿದೆ. ನೊಂದವರು ಕೂಡಲೇ ಸಹಾಯವಾಣಿಗೆ ಕರೆ ಮಾಡಬಹುದು. ಇದರಲ್ಲಿ ಪೊಲೀಸ್ ಸಹಾಯವಾಣಿ ನಮ್ಮ-100, ಮಕ್ಕಳ ಸಹಾಯವಾಣಿ 1098, ಮಹಿಳಾ ಸಹಾಯವಾಣಿ ಸ್ಥಳೀಯ ಪೊಲೀಸ್ ಠಾಣೆಗಳ ನಂಬರ್‌ಗಳನ್ನು ಮುದ್ರಿಸಲಾಗುತ್ತದೆ.
ವೇಶ್ಯಾವಾಟಿಕೆ ದಂಧೆಗೆ ಕಡಿವಾಣ: ಪ್ರಮುಖವಾಗಿ ಮೆಜೆಸ್ಟಿಕ್ ಸುತ್ತಮುತ್ತ ವೇಶ್ಯಾವಾಟಿಕೆ ದಂಧೆ ಯಥೇತ್ಛವಾಗಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವುದು ಓಬವ್ವ ಪಡೆಯ ಪ್ರಥಮ ಆದ್ಯತೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ರೈಲ್ವೆ ನಿಲ್ದಾಣ, ತೋಟದಪ್ಪ ರಸ್ತೆ ಹಾಗೂ ಈ ಭಾಗದ ಮೇಲ್ಸೆತ್ತುವೆ, ಸುರಂಗ ಮಾರ್ಗಗಳಲ್ಲಿ ಓಡಾಡುವ ಮಹಿಳೆಯರು, ಪುರುಷರು ಮುಜುಗರ ಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ವೇಶ್ಯಾವಾಟಿಕೆಗೆ ಕಡಿವಾಣ ಹಾಕಲು ಪಡೆ ಕಾರ್ಯಪ್ರವೃತ್ತವಾಗಿದೆ. ಮಫ್ತಿಯಲ್ಲಿ ಓಡಾಡುವ ಪಡೆಯ ಸಿಬ್ಬಂದಿ ಸಾರ್ವಜನಿಕರ ಜತೆ ಅನುಚಿತವಾಗಿ ವರ್ತಿಸುವವರನ್ನು ಸ್ಥಳದಲ್ಲೇ ದಸ್ತಗಿರಿ ಮಾಡುತ್ತಾರೆ.
ಶಾಲಾ, ಕಾಲೇಜುಗಳ ಬಳಿ ಗಸ್ತು: ಮಹಾರಾಣಿ, ಸೆಂಟ್ರೆಲ್ ಕಾಲೇಜು, ವಿಶ್ವೇಶ್ವರಯ್ಯ ತಾಂತ್ರಿಕ ಎಂಜಿನಿಯರಿಂಗ್ ಕಾಲೇಜು, ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜುಗಳ ಬಳಿ ಓಬವ್ವ ಪಡೆಯ ಮಹಿಳಾ ಸಿಬ್ಬಂದಿ ಕಾಲೇಜು ಆರಂಭ ಹಾಗೂ ಮುಕ್ತಾಯ ಸಂದರ್ಭದಲ್ಲಿ ಗಸ್ತು ತಿರುಗಲಿದ್ದಾರೆ. ಒಂದು ವೇಳೆ ಬಸ್ ಅಥವಾ ನಡೆದು ಹೋಗುವ ಯುವತಿಯರ ಜತೆ ಅನುಚಿತವಾಗಿ ವರ್ತಿಸಿದರೆ, ಸ್ಥಳದಲ್ಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳಲಿದ್ದಾರೆ.
“ಪಿಂಕ್’ ಎದುರು ನಿಲ್ಲುತ್ತಾಳಾ ಓಬವ್ವ!: ನಗರದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ತಡೆಯಲು, ತುರ್ತು ವೇಳೆ ಸ್ಪಂದಿಸಲು ಈ ಹಿಂದಿನ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಪಿಂಕ್ ಹೊಯ್ಸಳ ಜಾರಿಗೆ ತಂದಿದ್ದು, ಯಶಸ್ವಿಯಾಗಿ ನಡೆಯುತ್ತಿದೆ. ನಮ್ಮ-100ಕ್ಕೆ ಕನಿಷ್ಠ 30-40 ಕರೆಗಳು ಬರುತ್ತಿದ್ದು, ಕ್ಷಣಾರ್ಧದಲ್ಲಿ ಸ್ಪಂದಿಸುತ್ತಿದ್ದಾರೆ. ಈ ನಡುವೆಯೂ ಓಬವ್ವ ಪಡೆ ಕಾರ್ಯಾಚರಣೆಗಿಳಿದಿದ್ದು, ಯಶಸ್ವಿಯಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಆದರೆ, ಓಬವ್ವ ಪಡೆ ಮೆಜೆಸ್ಟಿಕ್ ಸುತ್ತಮುತ್ತ ನಡೆಯುವ ವೇಶ್ಯಾವಾಟಿಕೆ ದಂಧೆಯನ್ನೆ ಕೇಂದ್ರಿಕರಿಸಿಕೊಂಡು ಕಾರ್ಯಾಚರಣೆ ನಡೆಸಲಿದೆ.
ಸಿಬ್ಬಂದಿ ಕೊರತೆ: ಈಗಾಗಲೇ ಪೊಲೀಸ್ ಇಲಾಖೆ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಈ ಮಧ್ಯೆ ಓಬವ್ವ ಪಡೆ ಸ್ಥಾಪನೆ ಮಾಡುವುದರಿಂದ ಕಾನೂನು ಸುವ್ಯವಸ್ಥೆಗೆ ಇನ್ನಷ್ಟು ಸಿಬ್ಬಂದಿ ಕೊರತೆ ಹೆಚ್ಚಾಗಲಿದೆ. ಆದರೂ ಇರುವ ಸಿಬ್ಬಂದಿಯಲ್ಲೇ ಪಶ್ಚಿಮ ವಿಭಾಗದಲ್ಲಿ ನಡೆಯುವ ಅಕ್ರಮ ಚಟುವಟಿಕೆ ತಡೆಯಲು ರವಿ ಡಿ.ಚೆನ್ನಣ್ಣನವರ್ ಮುಂದಾಗಿದ್ದಾರೆ. ಡಿಸಿಪಿ ರವಿ ಡಿ. ಚೆನ್ನಣ್ಣನವರ್ ಈ ಮೊದಲು ಶಿವಮೊಗ್ಗದಲ್ಲಿ ಓಬವ್ವ ಪಡೆ ರಚಿಸಿದ್ದರು.
ಅನಂತರ ವರ್ಗಾವಣೆ ಆಗುತ್ತಿದ್ದಂತೆ ಓಬವ್ವ ಪಡೆ ನಿಷ್ಕ್ರಿಯಗೊಂಡಿತ್ತು. ಬಳಿಕ ಶಿವಮೊಗ್ಗ ಜನ ಓಬವ್ವ ಪಡೆಯನ್ನು ಕಾರ್ಯಪ್ರವೃತ್ತ ಮಾಡುವಂತೆ ಜಿಲ್ಲಾವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಆದರೆ, ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ರವಿ ಡಿ. ಚೆನ್ನಣ್ಣನವರ್, ಓಬವ್ವ ಪಡೆಯನ್ನು ಕೇವಲ ಪಶಿಮ ವಿಭಾಗ ಮಾತ್ರವಲ್ಲದೆ ರಾಜ್ಯಾದ್ಯಂತ ವಿಸ್ತರಿಸಲು ನಗರ ಪೊಲೀಸ್ ಆಯುಕ್ತರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ಚಿಂತನೆ ನಡೆಸಿದ್ದಾರೆ.
* ಮೋಹನ್ ಭದ್ರಾವತಿ