ಪುತ್ತೂರು: ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯು ನಾಮಪತ್ರ ಸಲ್ಲಿಸಿದ ಅನಂತರ ಪ್ರಮಾಣ ವಚನ ಸ್ವೀಕರಿಸಬೇಕಾಗಿದೆ ಎಂದು ಸಹಾಯಕ ಆಯುಕ್ತ, ಚುನಾವಣಾ ಅಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಹೇಳಿದರು. ಪುತ್ತೂರು ಮಿನಿವಿಧಾನ ಸೌಧದ ಸಹಾಯಕ ಆಯಕ್ತರ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದರು.
ನಾಮಪತ್ರ ಸಲ್ಲಿಸುವ ವೇಳೆ ಸಾಕಷ್ಟು ನಿಯಮಗಳನ್ನು ಅಭ್ಯರ್ಥಿಗೆ ವಿಧಿಸಲಾಗಿದೆ. ಚುನಾವಣಾಧಿಕಾರಿ ಕಚೇರಿಯ 100 ಮೀ. ಒಳಗೆ ಕೇವಲ ಮೂರು ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ. ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾಧಿಕಾರಿ ಕೊಠಡಿ ಒಳಗೆ ಅಭ್ಯರ್ಥಿ ಜತೆ ಇತರ 4 ಮಂದಿ ಪ್ರವೇಶಿಸಬಹುದು ಎಂದು ವಿವರಿಸಿದರು.
ಅಫಿಡವಿಟ್‌ನ ಕ್ರಮ ಸಂಖ್ಯೆ 3ರಲ್ಲಿ ಅಭ್ಯರ್ಥಿ ಹೊಂದಿರುವ ಅಧಿ ಕೃತ ಸಾಮಾಜಿಕ ಜಾಲತಾಣಗಳ ವಿವರ ನೀಡಬೇಕು. ಸರ್ಕಾರಿ ನೌಕರನಾಗಿ ನಿವೃತ್ತಿ ಹೊಂದಿದಲ್ಲಿ ಅಥವಾ ಸ್ವಯಂ ನಿವೃತ್ತಿ ಬೇಕಿದ್ದಲ್ಲಿ 10 ವರ್ಷಗಳಿಂದ ಸರ್ಕಾರಕ್ಕೆ ನೀಡಬೇಕಾದ ಬಾಕಿ ವಿವರವನ್ನು ಕಡ್ಡಾ ಯವಾಗಿ ಸಲ್ಲಿಸಬೇಕು. ನಾಮಪತ್ರ ಸಲ್ಲಿಸುವ ವೇಳೆ 2 ಪಾಸ್‌ಪೋರ್ಟ್ ಹಾಗೂ 2 ಸ್ಟಾಂಪ್ ಸೈಜ್ ಭಾವಚಿತ್ರ ಸಲ್ಲಿಸಿಬೇಕು. ಚುನಾವಣಾ ಉದ್ದೇಶಕ್ಕಾಗಿ ಅಭ್ಯರ್ಥಿ ಹೊಸ ಬ್ಯಾಂಕ್ ಖಾತೆ ತೆರೆದು, ಪಾಸ್ ಪುಸ್ತಕದ ಎರಡು ನಕಲು ಪ್ರತಿ ನೀಡಬೇಕೆಂದರು.
ನಾಮಪತ್ರ ಸಲ್ಲಿಕೆ
ಎ. 17ರಿಂದ 24ರ ವರೆಗೆ ರಜಾ ದಿನ ಹೊರತುಪಡಿಸಿ ಉಳಿದ ದಿನಗಳಲ್ಲಿ ಪುತ್ತೂರು ಮಿನಿ ವಿಧಾನಸೌಧದ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3ರೊಳಗೆ ಸಲ್ಲಿಕೆ ಆಗಬೇಕು. ಎ. 27 ನಾಮ ಪತ್ರ ಹಿಂತೆಗೆತಕ್ಕೆ ಕೊನೆ ದಿನ.