ಟೋಕಿಯೋ : ಉತ್ತರ ಜಪಾನಿನ ತೊಯೋಮಾ ಪ್ರಾಂತ್ಯದ ಕಡಲಲ್ಲಿ ಅತ್ಯಪರೂಪದ ಓರಾ ಮೀನುಗಳು ಅಥವಾ ಸಮುದ್ರ ಸರ್ಪಗಳು ಕಂಡು ಬಂದಿರುವುದು ಜಪಾನೀಯರಲ್ಲಿ ಈಗ ತೀವ್ರ ಭೀತಿ ಹುಟ್ಟಿಸಿದೆ. ಈ ಭೀತಿಗೆ ಮುಖ್ಯ ಕಾರಣವೆಂದರೆ ಈ ರೀತಿಯ ಸಮುದ್ರ ಸರ್ಪಗಳು ಅಥವಾ ಓರಾ ಮೀನುಗಳು ಕಂಡು ಬಂದಲ್ಲಿ ಇದನ್ನು ಅನುಸರಿಸಿ ಅತ್ಯಂತ ವಿನಾಶಕಾರಿ ಭೂಕಂಪ ಇಲ್ಲವೇ ಸುನಾಮಿ ಉಂಟಾಗುತ್ತದೆ ಎಂದು ಜಪಾನ್ ಪುರಾಣಗಳು ಹೇಳುತ್ತವೆ.
ಕಳೆದ ಶುಕ್ರವಾರ ಉತ್ತರ ತೊಯೋಮಾ ಸಮುದ್ರದಲ್ಲಿ ಮೀನುಗಾರರ ಬಲೆಗೆ ಎರಡು ಓರಾ ಮೀನುಗಳು ಸಿಕ್ಕಿಬಿದ್ದಿದ್ದವು. ಇದರೊಂದಿಗೆ ಈ ಋತುವಿನಲ್ಲಿ ಪತ್ತೆಯಾಗಿರುವ ಓರಾ ಮೀನುಗಳ ಸಂಖ್ಯೆ ಏಳಕ್ಕೇರಿತು.
ಇದಕ್ಕೆ ಮೊದಲು ತೊಯೋಮಾ ಕೊಲ್ಲಿಯ ಕಡಲ ತೀರಕ್ಕೆ 10.5 ಅಡಿ ಉದ್ದದ ಸತ್ತ ಓರಾ ಮೀನೊಂದು ಬಂದು ಬಿದ್ದಿತ್ತು. ಅದೇ ವೇಳೆ ಇಮಿಜು ಬಂದರಿನ ದೂರ ಸಮುದ್ರದಲ್ಲಿ ಮೀನುಗಾರರ ಬಲೆಗೆ 13 ಅಡಿ ಉದ್ದದ ಓರಾ ಮೀನು ಸಿಕ್ಕಿ ಬಿದ್ದಿತ್ತು.
ಸಾಮಾನ್ಯವಾಗಿ 650 ರಿಂದ 3,200 ಅಡಿ ಸಮುದ್ರದಾಳದಲ್ಲಿ ಓರಾ ಮೀನುಗಳು ಕಂಡು ಬರುವುದು ವಾಡಿಕೆ. ಇವುಗಳ ಮೈ ಬೆಳ್ಳಿ ಬಣ್ಣದ್ದಾಗಿದ್ದು, ಕಿವಿ ಕೆಂಬಣ್ಣದಲ್ಲಿರುತ್ತದೆ. ಇವುಗಳನ್ನು ಜಪಾನೀಯರು ಸಮುದ್ರ ಸರ್ಪಗಳೆಂದೇ ಕರೆಯುತ್ತಾರೆ.
ಜಪಾನ್ ಪುರಾಣಗಳು ಓರಾ ಮೀನುಗಳನ್ನು ರೈಗು ನೋ ಸುಕಾಯಿ ಅಥವಾ ಸಮುದ್ರ ದೇವರ ಅರಮನೆಯ ಸಂದೇಶ ವಾಹಕ ಎಂದು ಹೇಳುತ್ತವೆ.
ಜಪಾನಿನ ಪುರಾಣಗಳನ್ನು ನಂಬುವುದದಾದರೆ ಓರಾ ಮೀನುಗಳು ಕಂಡು ಬಂದರೆ ಅದನ್ನು ಅನುಸರಿಸಿ ಅತ್ಯಂತ ವಿನಾಶಕಾರಿ ಸಾಗರದಾಳದ ಭೂಕಂಪ ಮತ್ತು ಸುನಾಮಿ ಉಂಟಾಗುತ್ತದೆ. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ ಎನ್ನಲಾಗಿದೆ.