Advertisement

ರಾಜ್ಯದಲ್ಲೀಗ “ಒಕ್ಕಲಿಂಗ”ಕುರುಕ್ಷೇತ್ರ ಸಮೀಕರಣ

05:21 PM Feb 07, 2018 | Team Udayavani |

ದಾವಣಗೆರೆ: ಒಕ್ಕಲಿಗರು, ಲಿಂಗಾಯತ ಸಮುದಾಯಗಳ ಜೊತೆಗೆ ನಿಧಾನವಾಗಿ ಕುರುಬ ಸಮಾಜ ಸಹ ಬಲಾಡ್ಯವಾಗುತ್ತಿರುವ ಹಿನ್ನೆಲೆಯಲ್ಲಿ
ಈಗ ರಾಜ್ಯದಲ್ಲಿ “ಒಕ್ಕಲಿಂಗ ಕುರುಕ್ಷೇತ್ರ’ ಸಮುದಾಯ ಸಮೀಕರಣ ಕಂಡು ಬರುತ್ತಿದೆ ಎಂದು ಖ್ಯಾತ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ್‌ ವಿಶ್ಲೇಷಿಸಿದ್ದಾರೆ.

Advertisement

ಒಕ್ಕ ಎಂದರೆ ಒಕ್ಕಲಿಗರು, ಲಿಂಗ ಎಂದರೆ ಲಿಂಗಾಯತರು, ಕುರು ಎಂದರೆ ಕುರುಬ ಸಮುದಾಯ ಒಳಗೊಂಡಂತ ಕುರುಕ್ಷೇತ್ರ (ಚುನಾವಣಾ ಪೈಪೋಟಿ) ಎಂಬುದು ತಮ್ಮ “ಒಕ್ಕಲಿಂಗ ಕುರುಕ್ಷೇತ್ರ’ ಹೇಳಿಕೆ ಒಟ್ಟು ಸಾರ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಎಂದಿನ ಶೈಲಿಯಲ್ಲಿ ವ್ಯಾಖ್ಯಾನಿಸಿದ ಅವರು, ತಾವು ಯಾರ ವಿರುದ್ಧವೂ ಹೇಳುತ್ತಿರುವ ಮಾತಲ್ಲ. ರಾಜ್ಯದಲ್ಲಿ ಈಗ ಕಂಡು ಬರುತ್ತಿರುವ ಸಮುದಾಯಗಳ ಬಲಾಡ್ಯ
ಸ್ಥಿತಿಯ ಬಗ್ಗೆ ಹೇಳಿದ್ದಾಗಿ ತಿಳಿಸಿದರು.

ಕೆಲ ತಿಂಗಳಲ್ಲಿ ಚುನಾವಣೆ ಬರುತ್ತಿದೆ. ಹಿಂದೆಲ್ಲ ಒಂದು-ಒಂದೂವರೆ ತಿಂಗಳಿದ್ದಾಗ ಚುನಾವಣಾ ಗದ್ದಲ ಕೇಳಿ ಬರುತ್ತಿತ್ತು. ಈಗ ತುಂಬಾ ಅಡ್ವಾನ್ಸ್‌
ಆಗಿ ರಣೋತ್ಸವ, ಏಟು-ಎದಿರೇಟು, ಆರೋಪ- ಪ್ರತ್ಯಾರೋಪಕ್ಕೆ ಜನರು ಸಾಕ್ಷಿ ಆಗುತ್ತಿದ್ದಾರೆ. ಎಂದರು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ
ಒಳಗೊಂಡಂತೆ ಎಲ್ಲ ರಾಜಕೀಯ ಮುಖಂಡರು ಅತಿ ಪರಿಣಾಮಕಾರಿಯಾಗಿಯೇ ಸಾಮಾಜಿಕ ಜಾಲತಾಣ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನರೇಂದ್ರ
ಮೋದಿ ಅವರು ಸಾಮಾಜಿಕ ಜಾಲತಾಣ ಸೌಲಭ್ಯವನ್ನ ಅತೀ ಸಮರ್ಥ ಮತ್ತು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡಂತಹ ಪ್ರಥಮ ಪ್ರಧಾನಿ.
ಅರವಿಂದ ಕ್ರೇಜಿವಾಲ್‌ ಸಹ ಇದೇ ತಂತ್ರದ ಮೂಲಕ ದೆಹಲಿಗೆ ಗದ್ದಿಗೇರಿದರು ಎಂದರು. ಸಾಮಾಜಿಕ ಜಾಲತಾಣ ನೇರವಾದ ಕ್ರಿಯೆ-ಪ್ರತಿಕ್ರಿಯೆಯ
ಸಮೂಹ ಕ್ರಿಯೆ. ಮುಂದೆ ಚುನಾವಣಾ ವಿಚಾರದಲ್ಲಿ ಇದು ಮಹತ್ತರ ಪಾತ್ರ ವಹಿಸುತ್ತದೆ. ಪ್ರಧಾನಿ ಅವರ ಟಾಪ್‌.. ಹೇಳಿಕೆಗೆ ಮಾಜಿ ಸಂಸದೆ ರಮ್ಯಾ ನೀಡಿರುವ ಪಾಟ್‌… ಕುರಿತಂತೆ ಕೇಳಿದ ಪ್ರಶ್ನೆಗೆ ಚುನಾವಣಾ ಸಮಯದಲ್ಲಿ ಇಂತದ್ದೆಲ್ಲಾ ಇದ್ದದ್ದೇ ಎಂದರು. 

ಮಹದಾಯಿ ವಿಚಾರ ಖಂಡಿತವಾಗಿಯೂ ಚುನಾವಣೆಯ ಮೇಲೆ ಭಾರೀ ಪರಿಣಾಮ ಉಂಟು ಮಾಡುತ್ತದೆ ಎಂಬುದು ನನ್ನ ನಿರೀಕ್ಷೆ. ಪರಿಣಾಮ
ಉಂಟು ಮಾಡಬೇಕು ಎಂಬುದು ಸಹ ನನ್ನ ಅಪೇಕ್ಷೆ. ಮಹದಾಯಿ, ಕಳಸಾ-ಬಂಡೂರಿ ಯೋಜನೆ ಕುಡಿವ ನೀರಿಗೆ ಸಂಬಂಧಪಟ್ಟದ್ದು. ಕುಡಿವ ನೀರಿನ ಸೌಲಭ್ಯಕ್ಕಾಗಿ 7.54 ಟಿಎಂಸಿ ಅಡಿ ನೀರು ಕೊಡಬೇಕು ಎಂದು ಒತ್ತಾಯಿಸಿ 4 ಜಿಲ್ಲೆಯ ಜನರು ಕಳೆದ 3 ವರ್ಷದಿಂದ ನಿರಂತರ ಹೋರಾಟ ಮಾಡುತ್ತಿದ್ದಾರೆ. ಹೋರಾಟಕ್ಕೆ ಸ್ಪಂದನೆ ದೊರೆಯುತ್ತಿಲ್ಲ. ಪ್ರಜಾತಂತ್ರ ವ್ಯವಸ್ಥೆಯ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಂವಿಧಾನದ ಮೌಲ್ಯ, ಒಕ್ಕೂಟ ವ್ಯವಸ್ಥೆಯ ಪರಿಪಾಲನೆ, ಸಂರಕ್ಷಣೆಯ ಪ್ರಮುಖ ಸ್ಥಾನದಲ್ಲಿರುವ ಮೋದಿ ಅವರು ಪ್ರಧಾನಿ ಸ್ಥಾನದ ಗೌರವಕ್ಕೆ ಚ್ಯುತಿ ಬರದಂತೆ,
ನಿರೀಕ್ಷೆ ಈಡೇರಿಸುತ್ತಿಲ್ಲ ಎಂದು ಒಂದು ರೀತಿಯ ಪ್ರಜೆಗಳ ಆಕ್ಷೇಪ ಇದೆ ಎಂದರು. ಮಹದಾಯಿ ಹೋರಾಟದ ಮೂಲಕವೇ ಜ.15ರಂದು ಕೂಡಲ
ಸಂಗಮದಲ್ಲಿ ಅಸ್ತಿತ್ವಕ್ಕೆ ಬಂದಿರುವ ಜನಸಾಮಾನ್ಯರ ಪಕ್ಷ (ಜೆಎಸ್‌ಪಿ)ಯಿಂದ ಚುನಾವಣೆಯಲ್ಲಿ ಸ್ಪರ್ಧಿಸ ಬಯಸಿದ್ದೇನೆ. ಸಂವಿಧಾನದ ಮೌಲ್ಯಗಳಿಗೆ
ಬೆಲೆಯನ್ನೇ ನೀಡದ ಕೋಮುವಾದಿಗಳು ಅಧಿಕಾರಕ್ಕೆ ಬರಬಾರದು ಎಂಬ ಸಾಮಾನ್ಯ ಅಜೆಂಡಾದೊಂದಿಗೆ ಎಡಪಕ್ಷಗಳು, ಪ್ರಗತಿಪರರು ಒಂದಾಗಿ ಕೆಲಸ ಮಾಡುತ್ತಿದ್ದಾರೆ. ಕೋಮುವಾದಿಗಳು ಅಧಿಕಾರಕ್ಕೆ ಬರಬಾರದು ಎನ್ನುವುದು ನಮ್ಮ ನಿಲುವು. ಆದರೆ, ಅಂತಿಮ ಆಯ್ಕೆ ಜನರಿಗೆ ಬಿಟ್ಟದ್ದು ಎಂದರು. ನಾನು ಯಾವ ಪಕ್ಷಕ್ಕೂ ಸೇರಿದವನಲ್ಲ. 1948ರ ಜ.30 ರಂದು ಗಾಂಧಿ ಹತ್ಯೆಯಾದ ಸಂದರ್ಭದಲ್ಲಿ ನನಗೆ 9 ವರ್ಷ. ಗಾಂಧೀಜಿ ಹತ್ಯೆಯ ದಿನವೀಡಿ ಅತ್ತಿದ್ದೆ. ಅಂದಿನಿಂದಲೇ ಕೋಮುವಾದ ವಿರುದ್ಧ ಭಾವನೆ ನನ್ನಲ್ಲಿ ಬೆಳೆಯಿತು. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದನ್ನು 
ವಿರೋಧಿಸಿ ಜೈಲಿಗೆ ಹೋಗಿದ್ದೆ. ಅಂದಿನಿಂದಲೂ ನಾನು ಕಾಂಗ್ರೆಸ್‌ ವಿರೋಧಿ ಎಂದರು. ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿಯ ಈಗಿನ ಆದ್ಯತೆಗಳ ಪಟ್ಟಿ ನೋಡಿದರೆ 3 ಪಕ್ಷಕ್ಕೆ ಸಮಗ್ರ ರಾಜಕೀಯ ದೃಷ್ಟಿಕೋನದ ಅಭಾವವಿದೆ. ಮೂರು ಪಕ್ಷಕ್ಕೆ ಸಮಗ್ರ ಅಭಿವೃದ್ಧಿಯತ್ತ ಗಮನವಿಲ್ಲ.
ಬರೀ ಮತ ತಂದುಕೊಡುವಂತಹ ಅಂಶಗಳ ಬಗ್ಗೆಯೇ ಗಮನ ನೀಡಲಾಗುತ್ತಿದೆ ಎಂದರು. ಕರುಣಾ ಜೀವ ಕಲ್ಯಾಣಟ್ರಸ್ಟ್‌ ಅಧ್ಯಕ್ಷ ಶಿವನಕೆರೆ ಬಸವಲಿಂಗಪ್ಪ ಇದ್ದರು.

ಯಡಿಯೂರಪ್ಪ ಕೊನೆ ಉಸಿರು ಬಿಟ್ಟೋದ್ರು!
ನಾನು ಯಾವ ಪಕ್ಷಕ್ಕೂ ಸೇರಿದವನಲ್ಲ. ಆದರೂ, ಯಡಿಯೂರಪ್ಪ ಪ್ರಾರಂಭಿಸಿದ್ದ ಕೆಜೆಪಿಯೊಂದಿಗೆ ಗುರುತಿಸಿಕೊಂಡು ರಾಜ್ಯಾದ್ಯಂತ ಪ್ರಚಾರ ಕೈಗೊಂಡೆ. ಒಮ್ಮೆ ನೇರವಾಗಿಯೇ ಯಡಿಯೂರಪ್ಪ ಅವರನ್ನೇ ಮತ್ತೆ ಬಿಜೆಪಿಗೆ ಹೋಗುವುದಿಲ್ಲವೇ ಎಂದು ಕೇಳಿದಾಗ ನನ್ನ ಕೊನೆಯ ಉಸಿರು ಇರುವ ತನಕ ಮತ್ತೆ ಬಿಜೆಪಿಗೆ ಹೋಗುವುದಿಲ್ಲ ಎಂದಿದ್ದರು. ಆದರೂ, ಮತ್ತೆ ಅವರು ಬಿಜೆಪಿ ಸೇರಿಕೊಂಡರು. ಬಿಎಸ್‌ವೈ ಮತ್ತೆ ಬಿಜೆಪಿಗೆ ಹೋಗಿದ್ದನ್ನ ನೋಡಿದರೆ ಅವರು ಕೆಜೆಪಿಯಲ್ಲೇ ಕೊನೆ ಉಸಿರು ಬಿಟ್ಟು, ಬೇರೆ ಯಡಿಯೂರಪ್ಪ ಬಿಜೆಪಿಗೆ ಹೋಗಿದ್ದಾರೇನೋ ಎಂದೆನಿಸುತ್ತಿದೆ ಎಂದು ಚಂಪಾ
ಹಾಸ್ಯ ಚಟಾಕಿ ಹಾರಿಸಿದರು.

Advertisement

ಇಂತದ್ದೇ ಪಕ್ಷಕ್ಕೆ ಅಂತ ಹೇಳಿಲ್ಲ
ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ್ದ ಸಂದರ್ಭದಲ್ಲಿ ನಾನು ಇಂತದ್ದೇ ಪಕ್ಷಕ್ಕೆ ಮತ ನೀಡಬೇಕು
ಎಂದು ಹೇಳಿಯೇ ಇಲ್ಲ. ಧರ್ಮ ನಿರಪೇಕ್ಷತೆ, ಪ್ರಾದೇಶಿಕ ಅಜೆಂಡಾ ರಾಜಕೀಯ ಪಕ್ಷವನ್ನ ಜನರು ಆಯ್ಕೆ ಮಾಡಬೇಕು ಎಂಬ ನನ್ನ
ಅಭಿಪ್ರಾಯವನ್ನಷ್ಟೇ ಹೇಳಿದ್ದೇನೆ. ಬೇಕಾದರೆ ನನ್ನ ಲಿಖೀತ ಭಾಷಣದ ಪ್ರತಿ ನೋಡಬಹುದು ಎಂದು ಚಂಪಾ ಪ್ರಶ್ನೆಗೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next