ನವದೆಹಲಿ : ಟಿಂ ಇಂಡಿಯಾ ಆಟಗಾರರು ಹಾಗೂ ತಂಡದ ತರಬೇತುದಾರ ಅನಿಲ್ ಕುಂಬ್ಲೆ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅಂಶ ಮೊನ್ನೆ ತಾನೇ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಸೋಲಿನ ಬಳಿಗ ಜಗಜ್ಜಾಹೀರಾಗಿತ್ತು. ಅದಕ್ಕೆ ಪೂರಕವಾಗಿ ಅನಿಲ್ ಕುಂಬ್ಲೆ ಅವರು ಐಸಿಸಿ ಮೀಟಿಂಗ್ ನೆಪವೊಡ್ಡಿ ವೆಸ್ಟ್ ವಿಂಡೀಸ್ ಪ್ರವಾಸಕ್ಕೆ ಹೊರಟಿದ್ದ ಟಿಂ ಇಂಡಿಯಾದಿಂದ ಹೊರಗುಳಿಯಲು ನಿರ್ಧರಿಸಿದ್ದರು. ಇದೀಗ ಮತ್ತೂಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದ್ದು, ಅನಿಲ್ ಕುಂಬ್ಲೆ ಅವರು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ತಂಡದ ಆಯ್ಕೆ ಮತ್ತು ಇನ್ನಿತರ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ನಾಯಕ ವಿರಾಟ್ ಕೊಹ್ಲಿ ಹಾಗೂ ಅನಿಲ್ ಕುಂಬ್ಲೆ ನಡುವೆ ಭಿನ್ನಾಭಿಪ್ರಾಯಗಳು ಇದ್ದವು ಎಂಬ ಗಾಳಿ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ವೆಸ್ಟ್ ವಿಂಡೀಸ್ ಪ್ರವಾಸದವರೆಗೆ ಕುಂಬ್ಲೆ ಅವರ ಕೋಚ್ ಹುದ್ದೆಯನ್ನು ಬಿಸಿಸಿಐ ಮುಂದುವರೆಸಿ ಆದೇಶ ಹೊರಡಿಸಿದ್ದರೂ ತಂಡದ ಜೊತೆ ಪ್ರಯಾಣ ಬೆಳಸದಿರುವ ಕುಂಬ್ಲೆ ಅವರ ನಡೆ ಹಾಗೂ ಇದೀಗ ತನ್ನ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿರುವುದು ನೋಡಿದಾಗ ಕುಂಬ್ಲೆ ಮತ್ತು ಕೊಹ್ಲಿ ನಡುವೆ ಎಲ್ಲವೂ ಸರಿಯಿರಲಿಲ್ಲ ಎಂಬುದು ಖಾತ್ರಿಯಾಗುತ್ತದೆ.