ಸೀತಾಪುರ, ಉತ್ತರ ಪ್ರದೇಶ : ‘ದೇಶದ ಆರ್ಥಿಕತೆಯನ್ನು ಧ್ವಂಸಗೈದಿರುವ ಬಿಜೆಪಿಯ ತಪ್ಪು ನೀತಿಗಳಿಗೆ ಕಾಂಗ್ರೆಸ್ ಪಕ್ಷದ ನ್ಯಾಯ್ ಯೋಜನೆ ಸೂಕ್ತ ಉತ್ತರವಾಗಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಸ್ವಾನನಲ್ಲಿನ ಗುಲ್ಜಾರ್ ಶಾ ಮೈದಾನದಲ್ಲಿ ಪಕ್ಷದ ಅಭ್ಯರ್ಥಿ ಕೈಸರ್ ಜಹಾನ್ ಅವರ ಪ್ರಚಾರಾರ್ಥ ಏರ್ಪಡಿಸಲಾಗಿದ್ದ ರಾಲಿಯಲ್ಲಿ ಮಾತನಾಡುತ್ತಿದ್ದ ಅವರು, ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡಿರುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟುವಾಗಿ ಟೀಕಿಸಿದರು.
“ನೋಟು ಅಮಾನ್ಯ ಮತ್ತು ಜಿಎಸ್‌ಟಿ ದೇಶದ ಆರ್ಥಿಕತೆಯನ್ನು ನಾಶ ಮಾಡಿದವು. ಬಿಜೆಪಿಯ ಈ ತಪ್ಪು ನೀತಿಗಳಿಂದ ಬಾಧಿತರಾಗಿರುವ ಬಡವರ ಉದ್ಧಾರಕ್ಕೆ ಕಾಂಗ್ರೆಸ್ ಪಕ್ಷ ರೂಪಿಸಿರುವ ನ್ಯಾಯ್ ಸ್ಕೀಮ್ ತಕ್ಕುದಾದ ಉತ್ತರವಾಗಿದೆ” ಎಂದು ರಾಹುಲ್ ಹೇಳಿದರು.
‘ಮೋದಿ ಜೀ ಅವರು ಕೇವಲ 15 ಮಂದಿ ಸಮೂಹವನ್ನು ಉದ್ಧರಿಸಲು ಅವರಿಗೆ 5.50 ಕೋಟಿ ರೂ. ನೀಡಿದರು. ಆದರೆ ಕಾಂಗ್ರೆಸ್ ಪಕ್ಷ ಈ ಮೊತ್ತವನ್ನು ಆ ಉದ್ಯಮಿಗಳಿಂದ ಹಿಂಪಡೆದು ಅದನ್ನು ದೇಶದ 25 ಕೋಟಿ ಕಡು ಬಡವರಿಗೆ ಹಂಚಲಿದೆ’ ಎಂದು ರಾಹುಲ್ ಗುಡುಗಿದರು.
‘ದೇಶದ ಬಡ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಹೆಸರಲ್ಲಿ ಹಣಕಾಸು ನೆರವು ನೀಡುವ ಪ್ರಧಾನಿ ಮೋದಿ ಅವರ ಯೋಜನೆಯು ಒಂದು ಜೋಕ್ ಆಗಿದೆ’ ಎಂದು ರಾಹುಲ್ ಲೇವಡಿ ಮಾಡಿದರು.
‘ಪ್ರಧಾನಿ ನರೇಂದ್ರ ಮೋದಿ ಅವರು ರಿಲಯನ್ಸ್ ಉದ್ಯಮಿ ಅನಿಲ್ ಅಂಬಾನಿಗೆ ನೆರವಾಗಲು ರಫೇಲ್ ಗುತ್ತಿಗೆಯನ್ನು ಆತನಿಗೆ ನೀಡಿದರು. ಅದಕ್ಕೆ ಬದಲಾಗಿ ಆತ (ಅನಿಲ್ ಅಂಬಾನಿ) ದೇಶವನ್ನೇ ವಂಚಿಸಿದರು’ ಎಂದು ರಾಹುಲ್ ಟೀಕಿಸಿದರು.