ಕೋಲಾರ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸಚಿವ ಸಂಪುಟದ ಒಪ್ಪಿಗೆ ಪಡೆದು ಅಧಿವೇಶನದಲ್ಲಿ ಅಂಗೀಕರಿಸಬೇಕೆಂದು ಒತ್ತಾಯಿಸಿ ಮಂಗಳವಾರದಲಿತ ಸಂಘರ್ಷ ಸಮಿತಿಯು ಜಿಲ್ಲಾಧಿಕಾರಿಗಳ ಆವರಣದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂದೆ ಧರಣಿ ನಡೆಸಿತು.
ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಕರ್ನಾಟಕ ದಸಂಸ ಕಾರ್ಯಕರ್ತರು ಮತ್ತು ಮುಖಂಡರು, ಮೀಸಲಾತಿ ನೀತಿಯಿಂದ ಶತಮಾನಗಳ ಕಾಲದಮನಿಸಲ್ಪಟ್ಟ ತಳಸಮುದಾಯಗಳಿಗೆ ಸಾರ್ವಜನಿಕ ಶಿಕ್ಷಣ ಸರಕಾರಿ ಉದ್ಯೋಗ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಲು ಅಲ್ಪ ಪ್ರಮಾಣದಲ್ಲಿ ಸಾಧ್ಯವಾಯಿತು ಎಂದರು.
ಕಳೆದ 70 ವರ್ಷಗಳಿಂದ ಸ್ವತಂತ್ರ ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮೀಸಲಾತಿಯನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನ ಮಾಡದೆ, ವಿಳಂಬ ನೀತಿಯನ್ನು ಅನುಸರಿಸಿ ಶೋಷಿತ ಸಮುದಾಯಗಳು ನಿರಂತರ ಅತಂತ್ರ ಸ್ಥಿತಿಯಲ್ಲಿ ತೊಳಲಾಡುವಂತೆ ಮಾಡಿವೆ ಎಂದು ದೂರಿದರು.
ಪರಿಶಿಷ್ಟ ಜಾತಿಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿ ಅರಿಯಲು ಸಂವಿಧಾನ ಬದ್ಧವಾಗಿ ಹಿಂದಿನ ಸರಕಾರಗಳು ಅಯೋಗವನ್ನು ರಚನೆ ಮಾಡಿತು. ಈ ಆಯೋಗದ ಅಧ್ಯಕ್ಷರಾಗಿ ನ್ಯಾಯಮೂರ್ತಿ ಎ.ಜೆ.ಸದಾಶಿವ 8 ವರ್ಷಗಳ ಕಾಲ ಸುದೀರ್ಘವಾಗಿ ಅಧ್ಯಯನ ಮಾಡಿ ರಾಜ್ಯ ಸರಕಾರಕ್ಕೆ ವರದಿಯನ್ನು ನೀಡಿದ್ದಾರೆ.
ಕರ್ನಾಟಕ ರಾಜ್ಯ ಸರಕಾರವು ಕಳೆದ 6 ವರ್ಷಗಳಿಂದ ಈ ವರದಿಯನ್ನು ಅಂಗೀಕರಿಸದೆ ತಟಸ್ಥ ವಾಗಿರುವ ಕಾರಣ ತಳ ಸಮುದಾಯಗಳಲ್ಲಿಯೇ ಅಪನಂಬಿಕೆ ಮೂಡಿ ಮುಖ್ಯವಾಹಿನಿಗೆ ಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಪರಿಶಿಷ್ಟ ಜಾತಿಗಳ ಜನಸಂಖ್ಯೆ ಅನುಗುಣವಾಗಿ ನೀಡಿರುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಅಧಿವೇಶನದಲ್ಲಿ ಅಂಗೀಕರಿಸಿ ಸಂವಿಧಾನದ ತಿದ್ದುಪಡಿಗೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ, ಮದನಹಳ್ಳಿ ವೆಂಕಟೇಶ್, ಪುರಹಳ್ಳಿ ಜಿ.ಯಲ್ಲಪ್ಪ, ಮುದುವತ್ತಿ ಕೇಶವ, ಗೋವಿಂದರಾಜು, ಅರಹಳ್ಳಿ ಲಕ್ಷ್ಮಣ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.