Advertisement

ಅಪೌಷ್ಟಿಕತೆ ನಿವಾರಣೆಗೆ ಪೋಷಣ್‌ ಮಾಸಾಚರಣೆ

04:43 PM Sep 09, 2020 | Suhan S |

ದಾವಣಗೆರೆ: ಮಕ್ಕಳಲ್ಲಿನ ಅಪೌಷ್ಟಿಕತೆ, ರಕ್ತಹೀನತೆಯ ಮೂಲೋತ್ಪಾಟನೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಮುಖ ಉದ್ದೇಶದಿಂದ ಸೆ. 8 ರಿಂದ 30ರ ವರೆಗೆ ಪೋಷಣ್‌ ಮಾಸಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್‌. ವಿಜಯ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕರ ಗುಂಪುಗೂಡಿಸದೆ ಪ್ರತಿ ಮನೆ ಮನೆಗೆ ತೆರಳಿ ಮಕ್ಕಳಲ್ಲಿನ ಅಪೌಷ್ಠಿಕತೆ, ರಕ್ತಹೀನತೆಯ ಮೂಲೋತ್ಪಾಟನೆ ಕುರಿತಂತೆ ಜನಾರಿವು, ಜಾಗೃತಿ ಮೂಡಿಸಲಾಗುವುದು. ಈ ಬಾರಿ “ನಮ್ಮ ಸಂಕಲ್ಪ ಪೌಷ್ಟಿಕ ಕರ್ನಾಟಕ’ ಘೋಷಣೆಯೊಂದಿಗೆ ಮಾಸಾಚರಣೆ ನಡೆಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಪೌಷ್ಟಿಕತೆ, ರಕ್ತಹೀನತೆ ಹೋಗಲಾಡಿಸುವ ಹಿನ್ನೆಲೆಯಲ್ಲಿ 0-5 ವರ್ಷದೊಳಗಿನ ಅಪೌಷ್ಟಿಕತೆಯ ಮಕ್ಕಳನ್ನ ಬೇಗನೆ ಗುರುತಿಸುವುದು, ಉನ್ನತ ಚಿಕಿತ್ಸೆಗೆ ಶಿಫಾರಸು, ಸೇವೆ ನೀಡುವ ಮೂಲಕ ಮಕ್ಕಳು ಗಂಭೀರ ಸ್ಥಿತಿಗೆ ತಲುಪುವುದನ್ನು ಕಡಿಮೆಗೊಳಿಸುವ ಉದ್ದೇಶದೊಂದಿಗೆ ಮನೆ ಮನೆಗೆ ತೆರಳಿ ಕರಪತ್ರಗಳ ನೀಡಿ ಜಾಗೃತಿ ಮೂಡಿಸಲಾಗುವುದು ಹಾಗೂ ವಾಹನಗಳ ಮೂಲಕ ಪ್ರಚಾರ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಪೋಷಣ್‌ ಮಾಸಾಚರಣೆ ಹಿನ್ನೆಲೆಯಲ್ಲಿ ಈ ವರ್ಷ ಜಿಲ್ಲೆಯ 428 ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕ ಕೈ ತೋಟಗಳ ಅಭಿವೃದ್ಧಿಪಡಿಸಲಾಗುವುದು. ಮಕ್ಕಳಿಗೆ ಪೌಷ್ಟಿಕತೆ ನೀಡುವಂತಹ ನುಗ್ಗೆ, ಪಪ್ಪಾಯಿ, ಕೊತ್ತಂಬರಿ, ಪೇರಲ, ಬಾಳೆ, ಸೊಪ್ಪು, ಕರಿಬೇವು ಬೆಳೆಸುವ ಗುರಿ ಇದೆ. ಪ್ರತಿ ಕೇಂದ್ರಕ್ಕೆ ಬೀಜ, ಗೊಬ್ಬರಕ್ಕೆ 1 ಸಾವಿರ ನೀಡಲಾಗುವುದು ಎಂದು ತಿಳಿಸಿದರು.

ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗ್ರಾಮೀಣ ಆರೋಗ್ಯ, ನೈರ್ಮಲ್ಯ, ಪೌಷ್ಠಿಕತೆ, ಬಾಲ ವಿಕಾಸ ಸಮಿತಿಗಳ ಸಭೆ ನಡೆಸಿ ಅಪೌಷ್ಠಿಕತೆಗೆ ನಿವಾರಣೆಗೆ ಸಂಬಂಧಿಸಿದ ಕ್ರಮಗಳ ಬಗ್ಗೆ ಚರ್ಚಿಸಿ ಪಾಲನೆ ಮಾಡಲಾಗುವುದು. ಪೋಷಣ್‌ ಮಾಸಾಚರಣೆಯಲ್ಲಿ ನಡೆಯುವ ಅಂಗನವಾಡಿಯಿಂದ ರಾಜ್ಯಮಟ್ಟದವರೆಗೆ ನಡೆಸುವ ಪ್ರತಿ ಚಟುವಟಿಕೆಯನ್ನು ಡ್ಯಾಶ್‌ ಬೋರ್ಡ್‌ ಮೂಲಕ ಪ್ರತಿ ದಿನ ಅಪ್‌ ಲೋಡ್‌ ಮಾಡಲಾಗುವುದು. ಪೋಷಣ್‌ ಮಾಸಾಚರಣೆಯಲ್ಲಿ ಉತ್ತಮವಾಗಿ ಕೈತೋಟ ನಿರ್ವಹಣೆ, ಜಾಗೃತಿ ಮೂಡಿಸಿದವರಿಗೆ ಜಿಲ್ಲಾ, ರಾಜ್ಯ ಮಟ್ಟದ ಪ್ರಶಸ್ತಿ ಸಹ ನೀಡಲಾಗುವುದು ಎಂದರು.

Advertisement

332 ಮಕ್ಕಳಿಗೆ ತೀವ್ರ ಅಪೌಷ್ಟಿಕತೆ : ಜಿಲ್ಲೆಯಲ್ಲಿ ಈಗ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 332 ಮಕ್ಕಳು, ಎತ್ತರಕ್ಕೆ ತಕ್ಕಂತೆ ದೇಹದ ತೂಕ ಹೊಂದಿರದ 11 ಸಾವಿರ ಮಕ್ಕಳು ಇದ್ದಾರೆ. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವರಲ್ಲಿ ಪೌಷ್ಟಿಕತೆ ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಪೌಷ್ಟಿಕ ಕೇಂದ್ರ ಪ್ರಾರಂಭಿಸಲಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಪೋಷಕರು ಕೇಂದ್ರಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಪೌಷ್ಟಿಕ ಮಾಸಾಚರಣೆ ಪ್ರಾರಂಭದಿಂದ ಮಕ್ಕಳಲ್ಲಿ ಸುಧಾರಣೆ ಕಂಡು ಬಂದಿದೆ. ಕಳೆದ ಜುಲೈನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಪ್ರಮಾಣ ಶೇ.10.91 ರಷ್ಟಿತ್ತು. ಈಗ ಶೇ. 8.59 ಇದೆ ಎಂದು ವಿಜಯ್‌ಕುಮಾರ್‌ ಮಾಹಿತಿ ನೀಡಿದರು.

ಸ್ಥಳೀಯವಾಗಿ ಅನುದಾನ ನೀಡಲು ಆದೇಶ : ಕೋವಿಡ್‌-19 ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಸೋಂಕಿಗೆ ತುತ್ತಾಗಿ ಮರಣ ಹೊಂದಿದವರಿಗೆ ಸ್ಥಳೀಯವಾಗಿ ಅನುದಾನ ನೀಡುವ ಆದೇಶ ಇದೆ. ದಾವಣಗೆರೆ ತಾಲೂಕಿನ ಮಾಯಕೊಂಡ ಅಂಗನವಾಡಿ ಕೇಂದ್ರದ ಒಬ್ಬರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಆದಷ್ಟು ಶೀಘ್ರದಲ್ಲೇ 30 ಲಕ್ಷ ರೂ. ಪರಿಹಾರವನ್ನು ಅವರ ಕುಟುಂಬಕ್ಕೆ ನೀಡಲಾಗುವುದು. ಕುಟುಂಬದ ಒಬ್ಬರಿಗೆ ಉದ್ಯೋಗ ಕೊಡಿಸುವ ಪ್ರಯತ್ನ ನಡೆದಿದೆ. ವಿಶೇಷ ಪ್ರಕರಣ ಎಂದು ಪರಿಗಣಿಸಿ ವಯೋಮಾನ ಮಿತಿಯಲ್ಲಿ ಸಡಿಲಿಕೆನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next