ಮುದ್ದೇಬಿಹಾಳ: ಸರ್ಕಾರದ ನಿರ್ದೇಶನದಂತೆ ತಾಲೂಕಿನ ಎಲ್ಲ 30 ಸಾಂಸ್ಥಿಕ ಕ್ವಾರೆಂಟೈನ್ ಕೇಂದ್ರಗಳಲ್ಲಿರುವ ಮಹಾರಾಷ್ಟ್ರ, ಗುಜರಾತ, ತಮಿಳುನಾಡು ಮುಂತಾದ ರಾಜ್ಯಗಳಿಂದ ಮರಳಿ ಬಂದಿರುವ ವಲಸೆ ಕೂಲಿ ಕಾರ್ಮಿಕರಿಗೆ ವಿಶೇಷ ಸಾಮಗ್ರಿಗಳ ಕಿಟ್ ಹಂಚಿಕೆ ಕಾರ್ಯವನ್ನು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸೋಮವಾರ ಸಂಜೆ ಪೂರ್ಣಗೊಳಿಸಿದ್ದಾರೆ.
ಬೆಂಗಳೂರಿನಲ್ಲಿರುವ ತಮ್ಮ ಮಕ್ಕಳ ಅಪೇಕ್ಷೆಯಂತೆ ಕಿಟ್‌ಗಳ ಹಂಚಿಕೆಗೆ ರವಿವಾರ ಸಂಜೆ ಜಮ್ಮಲದಿನ್ನಿಯ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಚಾಲನೆ ನೀಡಿದ್ದ ಶಾಸಕರು, ಮುದ್ದೇಬಿಹಾಳ ಭಾಗದಲ್ಲಿರುವ 15ಕ್ಕೂ ಹೆಚ್ಚು ಕೇಂದ್ರಗಳಿಗೆ ಮಧ್ಯರಾತ್ರಿವರೆಗೂ ಖುದ್ದು ತಾವೇ ತೆರಳಿ ಮಕ್ಕಳು, ಗರ್ಭಿಣಿಯರು ಸೇರಿ ಕೇಂದ್ರದಲ್ಲಿದ್ದ ಎಲ್ಲರಿಗೂ ಕಿಟ್ ವಿತರಿಸಿದ್ದರು. ಸೋಮವಾರ ಬೆಳಗ್ಗೆ ಢವಳಗಿಯ ಸರ್ಕಾರಿ ವಸತಿ ನಿಲಯದಿಂದ ಪ್ರಾರಂಭಿಸಿ ಮಧ್ಯಾಹ್ನದವರೆಗೆ ನಾಲತವಾಡ ಭಾಗ, ಸಂಜೆವರೆಗೆ ತಾಳಿಕೋಟೆ ಭಾಗದ ಕೇಂದ್ರಗಳಿಗೆ ವಿಶ್ರಾಂತಿ ರಹಿತವಾಗಿ ಭೇಟಿ ನೀಡಿ ಕಿಟ್ ವಿತರಿಸಿದರು.
ಈ ವೇಳೆ ಆಯಾ ಕೇಂದ್ರಗಳಲ್ಲಿರುವ ಕಾರ್ಮಿಕರ ಸಮಸ್ಯೆ ಆಲಿಸಿದ ಶಾಸಕರು, ಅವುಗಳ ಪಟ್ಟಿ ಮಾಡಿಕೊಂಡು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕ್ರಮ ಕೈಕೊಂಡರು. ತಮ್ಮ ಮಕ್ಕಳಾದ ಭರತ್, ಶರತ್, ತಮ್ಮ ಸಹೋದರರ ಮಕ್ಕಳಾದ ಸುನೀಲ್, ಸುಷ್ಮಿತಾ ಅವರು ಉಳಿತಾಯ ಮಾಡಿದ್ದ ಪಾಕೆಟ್ ಮನಿಯಿಂದ ಸಾಮಗ್ರಿ ಖರೀದಿಸಿ ಅಂದಾಜು 2000 ಜನರಿಗೆ ಹಂಚಿಕೆ ಮಾಡುತ್ತಿರುವುದಾಗಿ ತಿಳಿಸಿದರು.
ಯಾರೂ ತಮಗೆ ನಿಗದಿಪಡಿಸಿದ ಸ್ಥಳ ಬಿಟ್ಟು ಹೊರಗಡೆ ತಿರುಗಾಡಬಾರದು.= ಸಾರ್ವಜನಿಕರ ಸಂಪರ್ಕಕ್ಕೆ ಬರಬಾರದು. ಕ್ವಾರೆಂಟೈನ್ ಅವಧಿ ಪೂರ್ಣಗೊಳಿಸಿ ಆರೋಗ್ಯವಂತರಾಗಿ ಮನೆಗೆ ತೆರಳುವಾಗ ಎಲ್ಲರಿಗೂ ಆಹಾರ ಸಾಮಗ್ರಿ ಕಿಟ್ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಮುದ್ನಾಳ, ಗೆದ್ದಲಮರಿ, ಚಲಮಿ, ಯರಝರಿ, ಜಟ್ಟಗಿಕ್ರಾಸ್, ಹುಲ್ಲೂರತಾಂಡಾ, ಕಾಳಗಿತಾಂಡಾ, ಕೊಪ್ಪತಾಂಡಾ, ರೂಢಗಿತಾಂಡಾ, ಢವಳಗಿ, ನಾಲತವಾಡದ ಮೊರಾರ್ಜಿ ವಸತಿ ಶಾಲೆ, ಚವನಬಾವಿ, ಅಡವಿಸೋಮನಾಳ, ಡೊಂಕಮಡು, ಕ್ಯಾತನಡೋಣಿ ಗ್ರಾಮಗಳ ಕಾರ್ಮಿಕರಿರುವ ಶ್ರೀ ರೇವಣಸಿದ್ದೇಶ್ವರ ಶಾಲೆ, ಅಡವಿಹುಲಗಬಾಳತಾಂಡಾ, ಹಗರಗುಂಡ ತಾಂಡಾ, ಇಂಗಳಗೇರಿ, ಲಿಂಗದಳ್ಳಿ ಮತ್ತು ಹಂದ್ರಾಳದ ಕಾರ್ಮಿಕರಿರುವ ಲಿಂಗದಳ್ಳಿ ಸರ್ಕಾರಿ ಪ್ರೌಢಶಾಲೆ, ಮಡಿಕೇಶ್ವರ ಮುಂತಾದೆಡೆ ಸಂಚರಿಸಿ ಕಿಟ್ ಹಂಚಿದ ಶಾಸಕರ ಜತೆ ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ ಸೇರಿದಂತೆ ಆಯಾ ಭಾಗದ ಸ್ಥಳೀಯ ಧುರೀಣರು ಇದ್ದರು.